ಬುಧವಾರ, ನವೆಂಬರ್ 13, 2019
22 °C

ಕಲಬುರ್ಗಿಯಲ್ಲಿ ಕಂಡ ಡೈನೋಸಾರ್

Published:
Updated:
Prajavani

ಒಂದು ಕೈಯಲ್ಲಿ ಐಸ್‌ಕ್ರೀಮ್, ಮತ್ತೊಂದು ಕೈಯಲ್ಲಿ ಸಣ್ಣ ಕಟ್ಟಿಗೆ ಹಿಡಿದು ಉದ್ಯಾನದೊಳಗೆ ಪಟಪಟನೇ ಹೆಜ್ಜೆ ಹಾಕುತ್ತಿದ್ದ 10 ವರ್ಷದ ಅಜಯ್‌ಗೆ ಸಣ್ಣಪುಟ್ಟ ಕೀಟ, ಪಕ್ಷಿಗಳ ಬಗ್ಗೆ ಹೆಚ್ಚೇನೂ ಭಯವಿರಲಿಲ್ಲ. ಅವುಗಳ ಚಿಲಿಪಿಲಿ ನಿನಾದ ಕೇಳುತ್ತಾ ಮುಂದೆ ಹೋಗುತ್ತಿದ್ದ. ಆದರೆ, ಡೈನೋಸಾರ್‌ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ, ಆ ಪ್ರಾಣಿಯಿಂದ ವಿಚಿತ್ರ ಸದ್ದು ಕೇಳಿಸಿತು. ಏನೆಂದು ತಿರುಗಿ ನೋಡಿದಾಗ, ಡೈನೋಸಾರ್‌ ಬಾಯಿ ತೆರೆದಿತ್ತು. ಅತ್ತ–ಇತ್ತ ಮುಖವಾಡಿಸುತಿತ್ತು. ಬಾಯಿಯೊಳಗಿನ ಚೂಪಾದ ಹಲ್ಲುಗಳು ಕಂಡ ಮೇಲಂತೂ ಅಜಯ್ ಒಂದು ಕ್ಷಣವೂ ನಿಲ್ಲದೇ ಅಲ್ಲಿಂದ ಓಡಿ ಬಿಟ್ಟ!

ಈ ಘಟನೆ ಕೇಳಿ ‘ಡೈನೋಸಾರ್‌ಗಳು ಇಲ್ಲೆಲ್ಲಿ ಕಾಣಿಸಿಕೊಂಡವಪ್ಪಾ’ ಎಂದು ಗಾಬರಿಯಾಗಬೇಡಿ. ಆ ಬಾಲಕ ನೋಡಿ ಬೆಚ್ಚಿಬಿದ್ದಿದ್ದು ಕಲಬುರ್ಗಿಯ ಜಿಲ್ಲಾ ವಿಜ್ಞಾನ ಕೇಂದ್ರದ ಉದ್ಯಾನದಲ್ಲಿನ ಡೈನೋಸಾರ್‌ಗಳ ಪ್ರತಿಕೃತಿಯನ್ನು ನೋಡಿ. ಈ ಉದ್ಯಾನದಲ್ಲಿ ಇಂಥ ಏಳು ಪ್ರತಿಕೃತಿಗಳಿದ್ದು, ಅವುಗಳು ಆ್ಯಕ್ಷನ್ ಮಾಡುವುದಕ್ಕಾಗಿ ಮೋಟಾರ್ ಜೋಡಿಸಲಾಗಿದೆ. ಹೀಗೆ ಆ್ಯಕ್ಷನ್ ಮಾಡುತ್ತಾ, ಪ್ರಾಣಿಗಳು ಕೂಗಿದಂತೆ ಸದ್ದು ಮಾಡುತ್ತವೆ. ಹೀಗಾಗಿ ಪಾರ್ಕ್‌ಗೆ ಭೇಟಿ ನೀಡಿದ ಮಕ್ಕಳಿಗಂತೂ ಜೀವಂತ ಡೈನೋಸಾರ್‌ಗಳನ್ನು ಕಂಡಷ್ಟೇ ಅಚ್ಚರಿಯಾಗುತ್ತದೆ.

ಉದ್ಯಾನಕ್ಕೆ ಅಡಿಯಿಟ್ಟ ಕೂಡಲೇ ಗಿಡಮರಗಳ ಹಿಂಬದಿಯಲ್ಲಿ ಅಡಗಿ ನಿಂತಂತೆ ಕಾಣುವ ಈ ಪ್ರಾಣಿಗಳು, ನಮ್ಮತ್ತ ಹೆಜ್ಜೆ ಹಾಕುತ್ತಿವೆಯೇನೋ ಎನ್ನಿಸುತ್ತವೆ. ಪ್ರತಿಯೊಂದಕ್ಕೂ ಒಂದೊಂದು ರೀತಿಯ ಸದ್ದು ಮಾಡುವ ತಂತ್ರಜ್ಞಾನವನ್ನು ಜೋಡಿಸಲಾಗಿದೆ. ಹಾಗಾಗಿ ಪ್ರತಿಯೊಂದೂ ವಿಭಿನ್ನವಾಗಿ ಸದ್ದು ಮಾಡುತ್ತಾ ಕುತೂಹಲ ಕೆರಳಿಸುತ್ತದೆ. ಪಳಪಳನೇ ಹೊಳೆಯುವ ಅವುಗಳ ಮೈಬಣ್ಣ ನೋಡಿದರಂತೂ ನೀರಿನಲ್ಲಿ ಈಜಾಡಿ ಈಗಷ್ಟೇ ಹೊರಬಂದಿವೆ ಎಂಬಂತೆ ಕಾಣುತ್ತವೆ.

1993ರಲ್ಲಿ ‘ಜುರಾಸಿಕ್ ಪಾರ್ಕ್‌’ ಚಲನಚಿತ್ರ ಬಿಡುಗಡೆ ಆಗುವವರೆಗೆ ಡೈನೋಸಾರ್‌ಗಳ ಬಗ್ಗೆ ಸ್ಪಷ್ಟ ಕಲ್ಪನೆ ಮತ್ತು ಸಮಗ್ರ ಮಾಹಿತಿ ಇರಲಿಲ್ಲ. ‘ದಿ ಲಾಸ್ಟ್ ವರ್ಲ್ಡ್-ಜುರಾಸಿಕ್ ಪಾರ್ಕ್‌’ (1997), ಜುರಾಸಿಕ್ ಪಾರ್ಕ್‌-111 (2001), ಜುರಾಸಿಕ್ ವರ್ಲ್ಡ್ (2015) ಮತ್ತು ದಿ ಲಾಸ್ಟ್ ವರ್ಲ್ಡ್–ಫಾಲನ್‌ ಕಿಂಗ್‌ಡಮ್ (2018) ಚಿತ್ರಗಳು ಆಗಾಗ್ಗೆ ತೆರೆ ಕಂಡಿವೆ. ಆದರೆ, ಡೈನೋಸಾರ್‌ಗಳ ಕುರಿತ ಆಸಕ್ತಿ ಮತ್ತು ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಈ ಎಲ್ಲಾ ಚಲನಚಿತ್ರಗಳನ್ನು ಒಮ್ಮೆ ನೋಡಿ, ಇಲ್ಲಿನ ಉದ್ಯಾನಕ್ಕೆ ಬಂದುಬಿಟ್ಟರಂತೂ ‘ಆನೆಯಷ್ಟು ಎತ್ತರವಿರುವ ಡೈನೋಸಾರ್‌ಗಳ ಕಣ್ತಪ್ಪಿಸಿ ಇಲ್ಲಿಂದ ಪಾರಾಗುವುದು ಹೇಗೆ’ ಎಂಬ ಪ್ರಶ್ನೆ ಖಂಡಿತ ಕಾಡುತ್ತದೆ.

ಈ ಏಳೂ ಡೈನೋಸಾರ್‌ಗಳು ಕಲಬುರ್ಗಿಗೆ ಬಂದು ಈಗಾಗಲೇ ಏಳು ವರ್ಷಗಳಾಗಿವೆ. ಸಾರ್ವಜನಿಕರನ್ನು ಜಿಲ್ಲಾ ವಿಜ್ಞಾನ ಕೇಂದ್ರದತ್ತ ಆಕರ್ಷಿಸುವುದಕ್ಕಾಗಿ, ಅವರಿಗೆ ಶತಶತಮಾನಗಳ ಹಿಂದಿನ ವಿಶಿಷ್ಟ ಜೀವಿಗಳನ್ನು ಪರಿಚಯಿಸುವುದಕ್ಕಾಗಿ 2012ರಲ್ಲಿ ಕೋಲ್ಕತ್ತಾದಿಂದ ದೊಡ್ಡ ಡೈನೋಸಾರ್‌ಗಳನ್ನು ತರಲಾಗಿದೆ. (ದೊಡ್ಡವಕ್ಕೆ ₹ 42 ಸಾವಿರ ಮತ್ತು ಸಣ್ಣವಕ್ಕೆ₹ 12ಸಾವಿರ). ಅವುಗಳನ್ನು ಬಿಡಿ ಭಾಗಗಳ ರೂಪದಲ್ಲಿ ಅಲ್ಲಿಂದ ಇಲ್ಲಿಗೆ ತಂದು ಜೋಡಿಸಿ, ಆಕಾರ ನೀಡಲು ಸಾಕಷ್ಟು ಸಮಯ ಬೇಕಾಯಿತು. ಈಗ ಅವು ಎಲ್ಲರ ಆಕರ್ಷಕ ಕೇಂದ್ರ ಬಿಂದುಗಳಾಗಿದ್ದು, ಅವುಗಳಿಗೆ ‘ಹಾಯ್, ಹಲೋ’ ಎನ್ನದೇ ಯಾರೂ ಸಹ ಮುಂದೆ ಹೋಗಲ್ಲ. ಮೊಬೈಲ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲೂ ಸಹ ಮರೆಯಲ್ಲ.

‘ಡೈನೋಸಾರ್‌ಗಳನ್ನು ತಂದು ನಿಲ್ಲಿಸಿದರೆ ಸಾಲದು. ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂಬ ಉದ್ದೇಶದಿಂದ ಒಂದೊಂದು ಜಾತಿಯ ಡೈನೋಸಾರ್‌ ಎದುರು ಪುಟ್ಟ ಮಾಹಿತಿ ಫಲಕ ಹಾಕಿದ್ದೇವೆ. ಅವು ಮಾಂಸಾಹಾರಿ ಅಥವಾ ಸಸ್ಯಾಹಾರಿಯೇ ಎಂಬುದರಿಂದ ಹಿಡಿದು ಅವುಗಳ ಗುಣ ವಿಶೇಷಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಮಕ್ಕಳು ಸೇರಿದಂತೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎನ್ನುತ್ತಾರೆ ಜಿಲ್ಲಾ ವಿಜ್ಞಾನ ಅಧಿಕಾರಿ ಲಕ್ಷ್ಮಿನಾರಾಯಣ ಹೆಬ್ಬಾರ.

ಫಲಕಗಳಷ್ಟೇ ಅಲ್ಲ, ಆಸಕ್ತಿ ತೋರುವ ವೀಕ್ಷಕರಿಗೆ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ಡೈನೋಸಾರ್‌ಗಳ ಬಗ್ಗೆ ಮತ್ತಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಸಲು ಸಿದ್ಧರಿದ್ದಾರೆ.

ಇಲ್ಲಿರುವ ಡೈನೋಸಾರ್‌ಗಳು...

* ಡೈಮೆಟ್ರೊಡೊನ್ (ಮಾಂಸಾಹಾರಿ)-3.5 ಮೀಟರ್ ಉದ್ದ, 250 ಕೆಜಿ ತೂಕ.

* ಸೆಲಿಡೊಸಾರಸ್ (ಸಸ್ಯಾಹಾರಿ)-3 ಮೀಟರ್ ಉದ್ದ, 200 ಕೆಜಿ ತೂಕ

* ಗ್ಯಾಲಿಮಸ್ (ಮಾಂಸಾಹಾರಿ)-ವೇಗದ ಓಟ, ಉದ್ದ. ಸಣ್ಣಪುಟ್ಟ ಪ್ರಾಣಿ, ಪಕ್ಷಿ ಮತ್ತು ಸಸಿಗಳೇ ಆಹಾರ

* ಸಿಟ್ಟಾಕೊಸಾರಸ್ (ಸಸ್ಯಾಹಾರಿ)-2 ಮೀಟರ್ ಉದ್ದ. 25 ರಿಂದ 80 ಕೆಜಿ ತೂಕ

* ಕಾರೈಥೊಸಾರಸ್ (ಸಸ್ಯಾಹಾರಿ)-10 ಮೀಟರ್ ಉದ್ದ. ಎರಡು ಕಾಲಲ್ಲಿ ನಡಿಗೆ, ಉದ್ದ ಬಾಲ.

* ಟೈರಾನೊಸಾರಸ್ (ಮಾಂಸಾಹಾರಿ)-12.4 ಮೀಟರ್ ಉದ್ದ. 7,000 ಕೆಜಿ ತೂಕ.

***

ಕಲಬುರ್ಗಿ ಕಡೆಗೆ ಹೋದಾಗ, ಮರೆಯದೇ ಈ ಡೈನೋಸಾರ್‌ಗಳ ಉದ್ಯಾನಕ್ಕೆ ಒಮ್ಮೆ ಭೇಟಿ ನೀಡಿ.

ಪ್ರತಿಕ್ರಿಯಿಸಿ (+)