ಗುರುವಾರ , ಫೆಬ್ರವರಿ 25, 2021
30 °C
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತ ಮುಖಂಡರ ಸಭೆ: ನೀರಾವರಿ, ವನ್ಯಪ್ರಾಣಿಗಳ ಹಾವಳಿ ನಿಯಂತ್ರಣ, ಕಾಡಂಚಿನ ಜನರಿಗೆ ಸೌಕರ್ಯಕ್ಕೆ ಆಗ್ರಹ

ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಬಗೆಹರಿಸಬೇಕು. ಇಲ್ಲಸಲ್ಲದ ಸಬೂಬು ನೀಡಲು ನಿಮ್ಮನ್ನು ನೇಮಕ ಮಾಡಿಲ್ಲ’ ಎಂದು ಜಿಲ್ಲೆಯ ರೈತ ಮುಖಂಡರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತ ಮುಖಂಡರ ಹಾಗೂ ಅಧಿಕಾರಿಗಳ ಸಭೆಯಲ್ಲಿ ರೈತರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 

ಕೆರೆಗಳಿಗೆ ನೀರು ತುಂಬಿಸುವುದು, ಕುಡಿಯುವ ನೀರು ಕಲ್ಪಿಸುವುದು, ರೈತರಿಗೆ ವೈಜ್ಞಾನಿಕ ಬೆಳೆ ಪರಿಹಾರ, ಕಾಡಂಚಿನ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. 

ವಿವಿಧ ಇಲಾಖೆಗಳ ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದಾಗ, ‘ಹಳೆ ವಿಚಾರವನ್ನು ಚರ್ಚಿಸಿದರೆ, ಅದೇ ಉತ್ತರಗಳನ್ನು ಕೊಟ್ಟರೆ ಪ್ರಯೋಜನವಿಲ್ಲ. ರೈತರಿಗೆ ಅನುಕೂಲವಾಗುವಂತಹ ಕ್ರಿಯಾ ಯೋಜನೆ ರೂಪಿಸಿ ಸಚಿವರ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ಮೊದಲು ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಪ್ರಸ್ತಾವ ಸಲ್ಲಿಸಿ’ ಎಂದು ಸಲಹೆ ನೀಡಿದರು. 

‌ಕೆರೆಗಳಿಗೆ ನೀರು ತುಂಬಿಸಿ: ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೈತ ಮುಖಂಡರಾದ ಹೊನ್ನೂರು ಪ್ರಕಾಶ್‌ ಮತ್ತು ಮಹೇಶ್‌ ಪ್ರಭು, ‘ಜಿಲ್ಲೆಯ ಸುವರ್ಣನಗರ, ಅರಕಲವಾಡಿ ಕೆರೆ ಸೇರಿದಂತೆ ಎಲ್ಲ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಹುತ್ತೂರು ಕೆರೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಉಮ್ಮತ್ತೂರು ಕೆರೆಗೆ ನೀರು ಹರಿಸುವ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಯಳಂದೂರಿನ 33 ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ನೀರು ಸೇರುತ್ತಿಲ್ಲ. ಕೆರೆ ಅಂಗಳದಲ್ಲಿ ಮರಳು ಗಣಿಗಾರಿಕೆಯಿಂದ ತೊಂದರೆಯಾಗಿದೆ. ಅಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಭರವಸೆ: ಕಾವೇರಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಶ್ರೀಕಂಠ ಪ್ರಸಾದ್ ಮಾತನಾಡಿ, ‘ಸಮರ್ಪಕವಾಗಿ ಮಳೆಯಾಗದೆ ಎಲ್ಲ ಕಡೆ ನೀರಿನ ಕೊರತೆ ಎದುರಾಗಿದೆ. ಪ್ರಸ್ತುತ ಕುಡಿಯಲು ಮಾತ್ರವೇ ನೀರು ಬಿಡಲಾಗುತ್ತಿದೆ. ಈ ವರ್ಷದ ಮಳೆಯಾದರೆ ಕೃಷಿಗೆ ಹಾಗೂ ಕೆರೆಗಳಗೆ ನೀರು ಹರಿಸಲಾಗುವುದು’ ಎಂದರು.

ಆಗಸ್ಟ್‌ನಲ್ಲಿ ಪೂರ್ಣ: ‘ಹುತ್ತೂರು ಕೆರೆ ಮೊದಲ ಹಂತದ ಯೋಜನೆ ಇನ್ನು 8 ಕಿ.ಮೀ ಬಾಕಿ ಇದ್ದು ಆಗಸ್ಟ್‌ನಲ್ಲಿ ಪೂರ್ಣಗೊಳಿಸಲಾಗುವುದು. ಗಾಂಧಿಗ್ರಾಮ ಯೋಜನೆ ಶೇ 80ರಷ್ಟು ಪೂರ್ಣಗೊಂಡಿದೆ. ಮರಳು ಗಣಿಗಾರಿಕೆಯಿಂದಾಗಿ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ’ ಎಂದು ಮಾಹಿತಿ ನೀಡಿದರು.

ಹಣ ಹೊಡೆಯುವ ಪ್ರಯತ್ನ ಬೇಡ: ‘ನಮ್ಮ ಜಿಲ್ಲೆ ಕರ್ನಾಟಕದ 2ನೇ ಕೋಲಾರವಾಗಿದೆ. ಸರ್ಕಾರದ ಮಟ್ಟದಲ್ಲಿ ಸಮರ್ಪಕ ಮಾಹಿತಿ ನೀಡಿ ಕೆಲಸ ಕೈಗೆತ್ತಿಕೊಳ್ಳುವ ಕೆಲಸ ಮಾಡಿ. ಸರ್ಕಾರ ಬಿಡುಗಡೆಗೊಳಿಸುವ ಹಣವನ್ನು ಹೊಡೆಯುವ ಕೆಲಸ ಆಗಬಾರದು. ಮಳೆ ಕೊರತೆಯಾದಾಗ ತೊಂದರೆಯಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ನೀರಿನ ಸಂಗ್ರಹದ ಕಡೆ ಗಮನ ಹರಿಸಬೇಕು’ ಎಂದು ಹೊನ್ನೂರು ಪ್ರಕಾಶ್ ಹೇಳಿದರು.

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ: ‘ಬಂಡೀಪುರ, ಬಿಆರ್‌ಟಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿವೆ. ದೂರು ಕೊಟ್ಟರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಏನಕ್ಕೂ ಸಾಕಾಗುವುದಿಲ್ಲ. ವೈಜ್ಞಾನಿಕ ಪರಿಹಾರ ನೀಡಲು ಮುಂದಾಗಬೇಕು’ ಎಂದು ಒತ್ತಾಯಿಸಿದರು. 

‘ಆನೆ ದಾಳಿ ಮಾಡಿದರೆ ಮಾತ್ರ ಪರಿಹಾರ ಕೊಡುತ್ತಾರೆ. ಹಂದಿಗಳಿಂದಾಗಿ ಹೆಚ್ಚಿನ ನಷ್ಟ ಆಗುತ್ತಿದೆ. ಇತರ ಪ್ರಾಣಿಗಳಿಂದಲೂ ಬೆಳೆ ಹಾನಿ ಸಂಭವಿಸುತ್ತಿದೆ’ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಬಿಆರ್‌ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌, ‘ಈಗ ನೀಡುತ್ತಿರುವ ಪರಿಹಾರ ಕಡಿಮೆ ಎಂಬುದು ಗೊತ್ತಿದೆ. ಹೆಚ್ಚು ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ’ ಎಂದು ಹೇಳಿದರು.

ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ವಿ.ಏಡುಕುಂಡಲು ಮಾತನಾಡಿ, ‘ಆನೆ ಸೇರಿದಂತೆ ವನ್ಯಪ್ರಾಣಿಗಳು ಜಮೀನಿಗೆ ಲಗ್ಗೆ ಇಡುವುದನ್ನು ತಡೆಯಲು ರೈಲ್ವೆ ಕಂಬಿ ಬೇಲಿ, ಸೋಲಾರ್‌ ಬೇಲಿ, ಕಂದಕಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌.ಮಹೇಶ್, ಸಿಇಒ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕಾಡಂಚಿನ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಿ

ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಬರುವ ದೊಡ್ಡಾಣೆ, ನಾಗಮಲೆ, ಇಂಡಿಗನತ್ತ, ಪಡಸಲನತ್ತ ಸೇರಿದಂತೆ ಹಲವು ಗ್ರಾಮಗಳಿಗೆ  ಕಾಡಂಚಿನ ಗ್ರಾಮಗಳಿಗೆ ಕುಡಿಯುವ ನೀರು, ಸೋಲಾರ್‌ ವಿದ್ಯುತ್‌, ಸರ್ಕಾರಿ ಶಾಲೆ, ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಅರಣ್ಯಾಧಿಕಾರಿಗಳು ಮುಂದಾಗಬೇಕು ಎಂದು ರೈತರು ಮನವಿ ಮಾಡಿದರು.

‘ಚಂಗಡಿಯ 195 ಕುಟುಂಬಗಳು ಬೇರೆ ಕಡೆಗೆ ಸ್ಥಳಾಂತರಗೊಳ್ಳಲು ಒಪ್ಪಿಗೆ ಸೂಚಿಸಿ ಮೂರು ವರ್ಷಗಳಾಯಿತು.ಅವರಿಗೆ ಪುನರ್ವಸತಿ ಕಲ್ಪಿಸಲು ಜಾಗವನ್ನೂ ಗುರುತಿಸಲಾಗಿದೆ. ಆದರೆ, ಇದುವರೆಗೆ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಪುಟ್ಟರಂಗಶೆಟ್ಟಿ ಅವರು ವಿಳಂಬ ಯಾಕಾಗುತ್ತಿದೆ ಎಂದು ಪ್ರಶ್ನಿಸಿದರು. ಆದಷ್ಟು ಬೇಗ ಪುನರ್ವಸತಿ ಕಲ್ಪಿಸುವಂತೆ ಸೂಚಿಸಿದರು.  

ಶಾಸಕರ ವಿರುದ್ಧ ಧಿಕ್ಕಾರ: ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಡಸಲನತ್ತ ಗ್ರಾಮದ ನಿವಾಸಿಗಳು ಮಹದೇಶ್ವರ ಬೆಟ್ಟದ ಅಂತರಗಂಗೆಯಿಂದ ಹರಿಯುತ್ತಿರುವ ಕೊಳಚೆ ನೀರನ್ನು ಕುಡಿಯುತ್ತಿದ್ದಾರೆ. ಜನರ ಕಷ್ಟವನ್ನು ಆಲಿಸಲು ಸ್ಥಳೀಯ ಶಾಸಕ ಆರ್‌.ನರೇಂದ್ರ ಅವರು ಭೇಟಿ ನೀಡಿಲ್ಲ. ಈ ಸಭೆಗೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರ ರೈತರು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು. 

ಅಕ್ರಮ ಗಣಿಗಾರಿಕೆ ತಡೆಗೆ ರೈತರ ಆಗ್ರಹ

ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕಡಿಮೆ ಜಾಗಕ್ಕೆ ಪರವಾನಗಿ ಪಡೆದು ಹೆಚ್ಚುವರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಆಳದಲ್ಲಿ ಕ್ರಷರ್‌ಗಳನ್ನು ಇರಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಗಣಿಗಾರಿಕೆ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು. ಹೆಚ್ಚು ಭಾರ ಹೊರುವ ಲಾರಿಗಳಿಗೆ ದಂಡ ವಿಧಿಸಬೇಕು. ರಾತ್ರಿ ವೇಳೆ ಗಣಿಗಾರಿಕೆ ನಡೆಸದಂತೆ ಎಚ್ಚರಿಸಬೇಕು. ಜೊತೆಗೆ ಲಾರಿಗಳು ಅಕ್ರಮವಾಗಿ ಅಗತ್ಯಕ್ಕಿಂತ ಹೆಚ್ಚು ಭಾರದ ಕರಿಕಲ್ಲು ಸಾಗಿಸುವಾಗ ರಸ್ತೆ ಹದಗೆಡುತ್ತದೆ. ಎನ್‌ಒಸಿ ನೀಡದಿದ್ದರೂ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಗಣಿ ಮತ್ತು ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದ ರೈತ ಮುಖಂಡ ಗುರುಪ್ರಸಾದ್‌ ಅವರು, ‘ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿರುವಷ್ಟು ಭ್ರಷ್ಟ ಅಧಿಕಾರಿಗಳು ಎಲ್ಲೂ ಇಲ್ಲ. ಎಲ್ಲ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ. ಏನೆಲ್ಲ ಅಕ್ರಮ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ. ಅಧಿಕಾರಿಗಳಿಗೆ ಏನೂ ಗೊತ್ತಿಲ್ಲ’ ಎಂದು ‌ಹರಿಹಾಯ್ದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಡಾ.ಲಕ್ಷ್ಮಮ್ಮ ಮಾತನಾಡಿ, ‘15 ದಿನದಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲಾಗುವುದು. ಅಕ್ರಮ ಗಣಗಾರಿಕೆ ಸ್ಥಳಗಳನ್ನು ಪರಿಶೀಲಿಸಿ ಮಾಲೀಕರಿಗೆ ನೋಟಿಸ್‌ ನೀಡುತ್ತೇವೆ. ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಅಕ್ರಮ ಗಣಿಗಾರಿಕೆ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಂಡಿರುವ ಬಗ್ಗೆ ವಾರದಲ್ಲಿ ಮಾಹಿತಿ ನೀಡಲಾಗುವುದು. ಚೆಕ್‌ಪೋಸ್ಟ್‌ ಕೂಡ ತೆರೆಯಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.