ಶೌಚಾಲಯ ಬಂದ್‌: ಪ್ರವಾಸಿಗರ ಪರದಾಟ

7
ಐತಿಹಾಸಿಕ ಸ್ಮಾರಕ ಬಾರಾ ಕಮಾನ ಆವರಣದ ಶೌಚಾಲಯ ಬಳಕೆಗಿಲ್ಲ: ಬಯಲೇ ಆಸರೆ

ಶೌಚಾಲಯ ಬಂದ್‌: ಪ್ರವಾಸಿಗರ ಪರದಾಟ

Published:
Updated:

ವಿಜಯಪುರ: ನಗರದ ಐತಿಹಾಸಿಕ ಸ್ಮಾರಕಗಳಲ್ಲೊಂದಾದ ಬಾರಾ ಕಮಾನ್ ಸೌಂದರ್ಯ ಕಣ್ತುಂಬಿಕೊಳ್ಳಲು ದೂರ ದೂರದ ಊರುಗಳಿಂದ ಬರುವ ಪ್ರವಾಸಿಗರು ಶೌಚಕ್ಕಾಗಿ ಪರದಾಡುವಂತಾಗಿದೆ.

ಸ್ವಚ್ಛ ಭಾರತ ಅಭಿಯಾನ ಆಂದೋಲನ ನಡೆದಿದ್ದರೂ ಬಾರಾ ಕಮಾನ್ ಮುಂಭಾಗವೇ ಇರುವ ಶೌಚಾಲಯ ನಿರ್ವಹಣೆ ಮಾಡದೆ ಮುಳ್ಳು, ಕಂಟಿ ಹಾಕಿರುವುದು ಅಪಹಾ ಸ್ಯಕ್ಕಿಡಾಗಿದೆ. ನಿತ್ಯವೂ ಇಲ್ಲಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ತುರ್ತು ನಿಸರ್ಗ ಕ್ರಿಯೆಯನ್ನು ಆವರಣದಲ್ಲಿನ ಬಾವಿ ಪಕ್ಕದಲ್ಲಿಯೇ ಮುಗಿಸಿಕೊಳ್ಳುವದು ಅನಿವಾರ್ಯ.

ವಿಜಯಪುರದ ಪ್ರವಾಸಿತಾಣ ಗಳನ್ನು ನೋಡಲು ಬಳ್ಳಾರಿಯಿಂದ ಕುಟುಂಬ ಸಮೇತ ಬಂದೀವಿ. ಗೋಲಗುಮ್ಮಟ, ಶಿವಗಿರಿ ನೋಡಿ ತುಂಬಾ ಖುಷಿ ಆಯಿತು. ಈಗ ಬಾರಾ ಕಮಾನ್ ನೋಡಾಕತ್ತೀವಿ. ಇದು ಚೆನ್ನಾಗಿ ಐತಿ. ಆದ್ರ ಇಲ್ಲಿ ಶೌಚಾಲಯ ಹೋಗಬೇಕ ಅಂದ್ರ ಚಾಲು ಇಲ್ಲ. ಹೋಗು ಹಾದಿಗೂ ಮುಳ್ಳ ಹಚ್ಯಾರ. ಏನ್‌ ಮಾಡಬೇಕ ಅಂತ ತಿಳಿತಿಲ್ಲ. ಗಂಡಸೂರ, ಮಕ್ಕಳು ಹೆಂಗರೆ ಮಾಡಿ ಗ್ವಾಡಿ ಮರೀಗಿ ನಿಂತು ಮುಗಿಸಬಹುದು ಆದ್ರ ಹೆಣ್ಮಕ್ಳು ಏನು ಮಾಡಬೇಕ್ರಿ ಎನ್ನುತ್ತಾರೆ ನವೀನ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಲು ಶೌಚಮುಕ್ತ ಮಾಡಲು ಪ್ರತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ನಾಲ್ಕು ವರ್ಷಗಳಿಂದ ಕೊಟ್ಯಂತರ ಹಣ ಖರ್ಚು ಮಾಡಿವೆ. ಆದರೆ, ದೇಶ, ವಿದೇಶಗಳಿಂದ ನಗರದ ಐತಿಹಾಸಿಕ ಪ್ರವಾಸಿತಾಣ ನೋಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಬಾರಾ ಕಮಾನ್‌ನಲ್ಲಿ ಶೌಚಾಲಯ ಬಳಕೆಗೆ ಇಲ್ಲದಿರುವದು ನೋಡಿದರೆ ಎಷ್ಟರ ಮಟ್ಟಿಗೆ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಜಿಲ್ಲೆಯ ಮರ್ಯಾದೆ ಹರಾಜಾಗುತ್ತಿದೆ ನಗರದ ಸತೀಶ ಅಸಮಧಾನ ವ್ಯಕ್ತಪಡಿಸಿದರು.

ಬಾರಾ ಕಮಾನ್‌ ಸಮೀಪದ ಶೌಚಾಲಯ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬರುತ್ತದೆ. ನಿರ್ವಹಣೆ ಜವಾಬ್ದಾರಿ ಸುಲಭ ಇಂಟರ್‌ನ್ಯಾಷನಲ್‌ ಕಂಪನಿಗೆ ಪಡೆದಿದೆ. ಕಳೆದ ಕೆಲ ವರ್ಷಗಳಿಂದ ಏಕೆ ಸ್ಥಗಿತಗೊಳಿಸಲಾಗಿದೆ ಎಂಬುವುದು ಗೊತ್ತಿಲ್ಲ. ನಮಗಾದರೂ ವಹಿಸಿ ಎಂದರೂ ಕೇಳುತ್ತಿಲ್ಲ. ಪ್ರವಾಸಿಗರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಕೂಡಲೇ ಆರಂಭಿಸಲು ಸೂಚಿಸಲಾಗಿದೆ ಎಂದು ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ಮೌನೇಶ ಕುರುವತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಘ್ರದಲ್ಲಿ ಆರಂಭ: ಸುಲಭ್ ಇಂಟರ್‌ನ್ಯಾಷನಲ್‌ ಕಂಪನಿಗೆ 30 ವರ್ಷ ಟೆಂಡರ್ ನೀಡಲಾಗಿದೆ. ಗೇಟ್‌ ಮುಂಭಾಗವೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಮಹಿಳೆಯರು ಶೌಚಾಲಯಕ್ಕೆ ಬರುತ್ತಿಲ್ಲ ಇದರಿಂದ ಶೌಚಾಲಯ ವ್ಯವಹಾರ ಕಡಿಮೆ ಆಗುತ್ತಿದೆ ಎಂದುಕೊಂಡು ಎರಡು ವರ್ಷಗಳ ಹಿಂದೆ ಶೌಚಾಲಯ ಬಂದ್‌ ಮಾಡಿದ್ದಾರೆ. ಲಾಭ, ನಷ್ಟದ ಕಾರಣ ನೀಡದೆ ಕೂಡಲೇ ಮರು ಆರಂಭಿಸಲು ಸೂಚಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಿಲ್ಲಾಧಿಕಾರಿ ತುಕಾರಾಮ ಪವಾರ ಹೇಳಿದರು.

ಟೆಂಡರ್ ಪಡೆದವರು ವ್ಯವಹಾರ ನಡೆಯುತ್ತಿಲ್ಲ ಎಂದು ಶೌಚಾಲಯ ಸ್ಥಗಿತಗೊಳಿಸಿದ್ದಾರೆ. ಶೀಘ್ರದಲ್ಲಿ ಬಾಗಿಲು ತೆರೆಯಲು ಸೂಚಿಸಿದ್ದೇವೆ.

- ತುಕಾರಾಮ ಪವಾರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ

ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry