ಗುರುವಾರ , ನವೆಂಬರ್ 14, 2019
18 °C
ಇನ್ನೂ ರಚನೆಯಾಗದ ನೀರಾವರಿ ಸಲಹಾ ಸಮಿತಿ

ಆಲಮಟ್ಟಿ ಜಲಾಶಯ: ನೀರು ಹರಿಸುವ ನಿರ್ಧಾರದತ್ತ ಚಿತ್ತ

Published:
Updated:
Prajavani

ಆಲಮಟ್ಟಿ: ನವೆಂಬರ್ ಬಂದರೂ ಆಲಮಟ್ಟಿ ಜಲಾಶಯದ ಒಳಹರಿವು ಕಡಿಮೆಯಾಗಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಹಿಂಗಾರು ಹಂಗಾಮಿಗೆ ನೀರು ಹರಿಸುವ ಅವಧಿ ನಿರ್ಧಾರದತ್ತ ರೈತರು ಚಿತ್ತ ಹರಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಶಿವಾನಂದ ಪಾಟೀಲ ನೇತೃತ್ವದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಈ ವರ್ಷದ ಮುಂಗಾರು ಹಂಗಾಮಿಗೆ ನ.16ರ ವರೆಗೆ ನೀರು ಹರಿಸಲು ನಿರ್ಧರಿಸಿತ್ತು.

ಈಗ ಸರ್ಕಾರ ಬದಲಾಗಿದ್ದು, ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವ ಅವಧಿಯೂ ಇದೇ 16 ರಂದು ಪೂರ್ಣಗೊಳ್ಳಲಿದೆ. ಹಿಂಗಾರು ಹಂಗಾಮಿನ ಬೆಳೆ ಬೆಳೆಯುವ ಮಿತಿ, ತಿಥಿಗಳು ಆರಂಭಗೊಂಡಿದ್ದು, ಹಿಂಗಾರು ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಹಿಂಗಾರು ಹಂಗಾಮಿಗೆ ಎಲ್ಲಿಂದ ಎಲ್ಲಿಯವರೆಗೆ ನೀರು ಹರಿಸುತ್ತಾರೆ, ವಾರಾಬಂಧಿ ಪದ್ಧತಿ ಅಳವಡಿಸಲಾಗುತ್ತದೆಯೋ ಇಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ರಚನೆಯಾಗದ ಐಸಿಸಿ: 2013ರ ವರೆಗೆ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 2013 ರಿಂದ 2019ರ ವರೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರು ಹಾಗೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಶಾಸಕರು ಸದಸ್ಯರಾಗಿದ್ದರು. ಸದ್ಯ ಸರ್ಕಾರ ಬದಲಾಗಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಐಸಿಸಿ ಇನ್ನೂ ರಚನೆಯಾಗಿಲ್ಲ. ಐಸಿಸಿ ರಚನೆಯ ನಂತರವೇ ಹಿಂಗಾರು ಹಂಗಾಮಿನ ಅವಧಿ ನಿರ್ಣಯವಾಗಲಿದೆ.

ಶೀಘ್ರ ನಿರ್ಧಾರ ಕೈಗೊಳ್ಳಿ: ‘ರೈತರು ಇನ್ನೂ ಬಿತ್ತನೆ ಮಾಡಿಲ್ಲ. ನೀರು ಹರಿಸುವ ಅವಧಿ ನಿರ್ಣಯವನ್ನು ಆಧಾರವಾಗಿಟ್ಟುಕೊಂಡು ಬಿತ್ತನೆ ಮಾಡುತ್ತಾರೆ. ಹೀಗಾಗಿ ಶೀಘ್ರ ಐಸಿಸಿ ರಚನೆಯಾಗಿ, ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಕೃಷ್ಣಾ
ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಆಗ್ರಹಿಸುತ್ತಾರೆ.

‘ಅತಿವೃಷ್ಠಿಯಿಂದ ನೀರಿನ ಸಂಗ್ರಹ ಹೆಚ್ಚಿರಬಹುದು, ಆದರೆ ಮಳೆಯ ಪ್ರಮಾಣ ಎಲ್ಲೆಡೆ ಒಂದೇ ರೀತಿಯಾಗಿಲ್ಲ. ಕೃಷ್ಣೆಯ ನೀರು ಐದು ಜಿಲ್ಲೆಗಳಿಗೆ ಹರಿದು ಹಂಚಿಹೋಗಿದೆ. ಒಂದೆಡೆ ನೀರಿನ ಅಗತ್ಯವಿಲ್ಲದಿದ್ದರೂ, ಬಹಳಷ್ಟು ಕಡೆ ನೀರಿನ ಅಗತ್ಯವಿದೆ. ಇದೇ 16ರ ವರೆಗೆ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಯುತ್ತದೆ. ನಂತರ ಹಿಂಗಾರು ಹಂಗಾಮು ಆರಂಭಗೊಳ್ಳುತ್ತದೆ’ ಎಂದಿದ್ದಾರೆ.

‘ಐಸಿಸಿ ರಚನೆಗಾಗಿ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಶೀಘ್ರವೇ ಐಸಿಸಿ ರಚನೆಯಾಗಿ, ಸಭೆ ನಡೆದು, ನೀರು ಹರಿಸುವ ಅವಧಿ ನಿಗದಿಯಾಗಲಿದೆ’ ಎಂದು ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದರು.

ಪ್ರತಿಕ್ರಿಯಿಸಿ (+)