ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾದ ಸರ್ಕಾರಿ ಶಾಲೆ ಮಕ್ಕಳು

ಈ ಸರ್ಕಾರಿ ಶಾಲೆಯಲ್ಲಿ 2016ರಿಂದ ನೀರು, ಆಹಾರ ಪೂರೈಕೆ
Published 20 ಮಾರ್ಚ್ 2024, 7:25 IST
Last Updated 20 ಮಾರ್ಚ್ 2024, 7:25 IST
ಅಕ್ಷರ ಗಾತ್ರ

ಬಾದಾಮಿ (ಬಾಗಲಕೋಟೆ ಜಿಲ್ಲೆ): ಮಳೆಗಾಲದಲ್ಲಿ ಪಕ್ಷಿ, ಪ್ರಾಣಿಗಳು ನದಿ, ಹಳ್ಳ-ಕೊಳ್ಳದಲ್ಲಿ ನೀರು ಕುಡಿದು ಬದುಕುತ್ತವೆ. ಆದರೆ ಬೇಸಿಗೆಯಲ್ಲಿ ಪಕ್ಷಿಗಳು ನೀರನ್ನು ಅರಿಸಿಕೊಂಡು ಹೋಗುತ್ತವೆ. ಇಲ್ಲೊಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2016ರಿಂದ ನೀರು ಮತ್ತು ಆಹಾರವನ್ನು ಪೂರೈಸುವ ಮೂಲಕ ಪಕ್ಷಿ ಸಂಕುಲ ಸಂರಕ್ಷಣೆ ಕಾರ್ಯ ಮಾಡುತ್ತಿದೆ.

ಬನಶಂಕರಿ ದೇವಾಲಯದಿಂದ ಶಿವಪುರ ರಸ್ತೆಗೆ ಹೋಗುವಾಗ ಗಿಡಗಳ ಗುಂಪುಗಳ ಮಧ್ಯೆ ಮಕ್ಕಳ ಕಲರವದೊಂದಿಗೆ ಪಕ್ಷಿಗಳ ವೈವಿಧ್ಯಮಯ ಇಂಚರ ಕಿವಿಗೆ ಬಿದ್ದಾಗ ಅಚ್ಚರಿಯಾಗುವುದು.  ಇಲ್ಲಿ ಪಕ್ಷಿಧಾಮವೇ ಇದೆಯೇನೋ ಎನ್ನಿಸುವುದು.

ಶಾಲಾ ಕಂಪೌಂಡ್ ಒಳಗೆ ಕಾಲಿಡುತ್ತಿದ್ದಂತೆ ರಸ್ತೆಯ ಎರಡೂ ಬದಿಗೆ ಎತ್ತರವಾಗಿ ಬೆಳೆದ ತೆಂಗಿನ ಮರಗಳು ತಂಪಾದ ಗಾಳಿಯೊಂದಿಗೆ ನಿಮ್ಮನ್ನು ಸ್ವಾಗತಿಸುತ್ತವೆ.

ಶಾಲಾ ಆವರಣದಲ್ಲಿ ಬೇವು, ಮಾವು, ಹುಣಸೆ, ಅರಳೆ, ನೀರಲ ಮರಗಳೊಂದಿಗೆ, ಪೇರಲ, ಔಷಧೀಯ ಸಸ್ಯಗಳು, ವೈವಿಧ್ಯಮಯ ಹೂವಿನ ಗಿಡಗಳು, ತರಕಾರಿ ಗಿಡ ಬಳ್ಳಿಗಳಿಂದ ಅಂದಾಜು ಎರಡು ಸಾವಿರಕ್ಕೂ ಅಧಿಕ ಸಸ್ಯಗಳು ಶಾಲೆಗೆ ಹಸಿರು ಹೊದಿಕೆಯಾಗಿವೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 6ನೇ ತರಗತಿವರೆಗೆ 60 ಮಕ್ಕಳು ಓದುತ್ತಿದ್ದಾರೆ. ಎಲ್ಲರೂ ಕಾರ್ಮಿಕರ ಮಕ್ಕಳು.

ಶಿಕ್ಷಣದೊಂದಿಗೆ ಪರಿಸರ ಸಂರಕ್ಷಣೆ ಮತ್ತು ಪ್ರಾಣಿ ಪಕ್ಷಿ ಸಂಕುಲದ ರಕ್ಷಣೆ ಬಗ್ಗೆ ಇಲ್ಲಿನ ಮುಖ್ಯ ಶಿಕ್ಷಕಿ, ಸಿಬ್ಬಂದಿ ಮತ್ತು ಮಕ್ಕಳ ಉತ್ಸಾಹ ಗಮನಾರ್ಹ.

‘ಶಿಕ್ಷಕರ ಮತ್ತು ಮಕ್ಕಳ ಸಹಕಾರದಿಂದ ಶಾಲಾ ಆವರಣದಲ್ಲಿ ಸಾವಿರಾರು ಗಿಡಮರಗಳನ್ನು ಬೆಳೆಸಲಾಗಿದೆ. ಸಂಜೆ ಸಮಯ ಇಲ್ಲಿಯೇ ಪಕ್ಷಿಗಳ ಗುಂಪುಗಳು ಬರತೊಡಗಿದವು.  ಹಲವು ಪಕ್ಷಿ ಗೂಡುಗಳೂ ಇಲ್ಲಿವೆ. ಪಕ್ಷಿಗಳಿಗೆ ಮಳೆಗಾಲದಲ್ಲೇನೋ ನೀರು ದೊರೆಯುತ್ತದೆ. ಆದರೆ ಬೇಸಿಗೆಯಲ್ಲಿ ಹೇಗೆ? ಎಂದು ಆಲೋಚಿಸಿ ನೀರು ಮತ್ತು ಆಹಾರವನ್ನು ಒದಗಿಸಿ ಪಕ್ಷಿ ಸಂಕುಲವನ್ನು ರಕ್ಷಿಸಬೇಕು ಎಂದು ಗಿಡಗಳಿಗೆ ಮಣ್ಣಿನ ಮಡಿಕೆ ಮತ್ತು ಆಹಾರದ ತೊಟ್ಟಿಗಳನ್ನು ಕಟ್ಟಿದೆವು. 9 ವರ್ಷಗಳಿಂದ ಪಕ್ಷಿಗಳಿಗೆ ನೀರು ಮತ್ತು ಆಹಾರ ಪೂರೈಸಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕಿ ಪಾರ್ವತಮ್ಮ ಚಳಗೇರಿ ಸಂತಸ ವ್ಯಕ್ತಪಡಿಸಿದರು.

‘ಶಾಲಾ ಆವರಣದಲ್ಲಿ ಗಿಡಗಳ ರೆಂಬೆಗಳ ಮೇಲೆ ನೀರಿಗಾಗಿ 25 ಮಣ್ಣಿನ ಮಡಿಕೆಗಳು. ಆಹಾರಕ್ಕಾಗಿ 15 ತಟ್ಟೆಗಳನ್ನು ಕಟ್ಟಲಾಗಿದೆ. ನಿತ್ಯ ಪ್ರಾರ್ಥನೆಗೆ ಮುನ್ನ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ನೀರು ಮತ್ತು ಅಕ್ಕಿ, ಜೋಳವನ್ನು ಹಾಕುವರು’ ಎಂದರು.

ವೈವಿಧ್ಯಮಯ ಚಿಕ್ಕ, ದೊಡ್ಡ ಗುಬ್ಬಿ, ಕೆಂಪು ಚುಂಚಿನ ಹಕ್ಕಿ, ಕಾಗೆ, ರತ್ನಪಕ್ಷಿ, ಪಾರಿವಾಳ, ಗೊರವಂಕ, ಮರಕುಟುಕ, ಬೆಳ್ಳಕ್ಕಿ, ಅಳಿಲು ಜೊತೆಗೆ ಕೋತಿಗಳೂ ಇಲ್ಲಿ ಬರುತ್ತವೆ. ಮಕ್ಕಳು ಪಕ್ಷಿಗಳನ್ನು ನೋಡಿ ಇಂಚರವನ್ನು ಕೇಳಿ ಸಂತಸಪಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT