ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ | ಸರ್ಕಾರಿ ಐಬಿಯಲ್ಲಿ ಮದ್ಯದ ಔತಣಕೂಟ; ನೋಟಿಸ್ ಜಾರಿ

ಜಿಲ್ಲಾ ಪಂಚಾಯಿತಿ ನಾಲ್ವರು ಅಧಿಕಾರಿಗಳು, ಆರು ಗುತ್ತಿಗೆದಾರರು ಭಾಗಿ
Published 23 ಮೇ 2024, 16:08 IST
Last Updated 23 ಮೇ 2024, 16:08 IST
ಅಕ್ಷರ ಗಾತ್ರ

ಜಮಖಂಡಿ (ಬಾಗಲಕೋಟೆ): ಇಲ್ಲಿನ ಲೋಕೋಪಯೋಗಿ ಇಲಾಖೆಯ ‘ರಮಾ ನಿವಾಸ’ದಲ್ಲಿ (ಐಬಿ) ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಗುತ್ತಿಗೆದಾರರ ಜೊತೆ ಎಂಜಿನಿಯರ್‌ಗಳು ಮದ್ಯ ಸೇವಿಸುತ್ತ ಮೋಜು ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತಹಶೀಲ್ದಾರ್ ಸದಾಶಿವ ಮಕ್ಕೋಜಿ ಅವರಿಗೆ ಗುರುವಾರ ಜಿಲ್ಲಾಧಿಕಾರಿ ಕೆ.ಜಾನಕಿ ನೋಟಿಸ್‌ ನೀಡಿದ್ದಾರೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಕಚೇರಿಗೆ ಹಾಜರಾಗದೇ ಐಬಿಯಲ್ಲಿ ಔತಣಕೂಟದಲ್ಲಿ ಭಾಗಿಯಾದ ಆರೋಪದ ಮೇಲೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಎಸ್.ಎಂ.ನಾಯಕ, ಎಂಜಿನಿಯರ್‌ಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ ಅವರಿಗೂ ನೋಟಿಸ್‌ ಹೊರಡಿಸಲಾಗಿದೆ.

‘ನೀತಿ ಸಂಹಿತೆ ಜಾರಿಯಾದಾಗ ವಸತಿ ಗೃಹಗಳನ್ನು  ಸುಪರ್ದಿಗೆ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿತ್ತು. ಅನುಮತಿ ಇಲ್ಲದೆ ಜಿಲ್ಲಾ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ವಸತಿ ಗೃಹದಲ್ಲಿ ಹೇಗೆ ಪ್ರವೇಶಿಸಿದರು? ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕೆ ಉತ್ತರಿಸಬೇಕು’ ಎಂದು ನೋಟಿಸ್‌ನಲ್ಲಿ ತಹಶೀಲ್ದಾರ್‌ಗೆ ಸೂಚಿಸಲಾಗಿದೆ.

‘ವಸತಿ ಗೃಹಗಳ ಸಿಬ್ಬಂದಿ ವಿಚಾರಣೆ ಮಾಡಿ 24  ಗಂಟೆಯಲ್ಲಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದು ಅತ್ಯಂತ ಅಶಿಸ್ತಿನ ನಡವಳಿಕೆಯಾಗಿದ್ದು, ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಲಾಗುವುದು‘ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದ್ದಾರೆ.

‘ಜಿಲ್ಲಾ ಪಂಚಾಯಿತಿಯ ನಾಲ್ವರು ಅಧಿಕಾರಿಗಳು ಮತ್ತು ಆರು ಗುತ್ತಿಗೆದಾರರು ಸೇರಿ ಹತ್ತಕ್ಕೂ ಹೆಚ್ಚು ಜನ ಸೇರಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಸರ್ಕಾರಿ ಐಬಿಯಲ್ಲಿ ಮದ್ಯ ಮಾಂಸದ ಔತಣಕೂಟ ಹಮ್ಮಿಕೊಂಡಿದ್ದರು. ಇದನ್ನು ತಿಳಿದ ಸಾರ್ವಜನಿಕರೊಬ್ಬರು ವಿಡಿಯೊ ಮಾಡಿ ಮಾಹಿತಿ ನೀಡಿದಾಗ, ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT