ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾದಗಿ | ಕಾರ ಹುಣ್ಣಿಮೆ: ರೈತರ ಸಂಭ್ರಮ

ಉತ್ತರ ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬ
ಸಿಕಂದರ.ಆರ್.ಬಾವಾಖಾನ
Published 21 ಜೂನ್ 2024, 6:11 IST
Last Updated 21 ಜೂನ್ 2024, 6:11 IST
ಅಕ್ಷರ ಗಾತ್ರ

ಕಲಾದಗಿ: ಉತ್ತರ ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಕಾರ ಹುಣ್ಣಿಮೆ ಅಂಗವಾಗಿ ರೈತರು ಕರಿ ಹರಿಯುವ ಎತ್ತುಗಳ ಅಲಂಕಾರಕ್ಕೆ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.

ಹುಣ್ಣಿಮೆಯ ಹಿಂದಿನ ದಿನ ಹೊನ್ನುಗ್ಗಿ ಹಬ್ಬ ಆಚರಿಸಲಾಗುತ್ತದೆ. ಅಂದು ರೈತರ ಮನೆಯಲ್ಲಿನ ಕುಂಟಿ, ಕೂರಿಗೆ, ಬಾರಕೋಲು ಮೊದಲಾದ ರೈತಾಪಿ ಸಾಮಗ್ರಿಗಳನ್ನು ಅಲಂಕರಿಸಿ ಪೂಜಿಸುವ ವಾಡಿಕೆ ಇದೆ.  ಹಬ್ಬದ ತಯಾರಿ ದಿನ ಕೆಲವೆಡೆ ಅಂದು ಜೋಳದ ಕಿಚಡಿ ಮಾಡಿ ಎತ್ತುಗಳಿಗೆ ನೈವೇದ್ಯ ಮಾಡಿ ಹಿಡಿಯಲಾಗುತ್ತದೆ.

ರೈತರು ಬಸವಣ್ಣ ಅಂತ ನಂಬಿರುವ ಎತ್ತುಗಳಿಗೆ ಹೊಸ ಹಗ್ಗ ಕಾಂಡಾ (ಕೊರಳಿಗೆ ಕಟ್ಟುವ ಹಗ್ಗ) ಮುಗುದಾನಿ, ಕೋಡಿಗೆ ಕಟ್ಟುವ ರಿಬ್ಬನ್ ಗೊಂಡೆ ಖರೀದಿಸುತ್ತಾರೆ.

ಕಾರ ಹುಣ್ಣಿಮೆಯಂದು ಎತ್ತುಗಳಿಗೆ ಸ್ನಾನ ಮಾಡಿಸಿ, ಅವುಗಳಿಗೆ ಕೊಂಬಿಗೆ ಗೆಜ್ಜೆ, ಕೊಂಬೆನಸು, ರಿಬ್ಬನ್ ಮತ್ತು ಬಣ್ಣಗಳನ್ನು ಬಳಸಿ ಅಲಂಕರಿಸಿ ಹಣೆಪಟ್ಟಿ ಜೂಲಾಗಳನ್ನು ಹಾಕಿ ಮದುಮಗನಂತೆ ಶೃಂಗರಿಸಿ, ಎತ್ತುಗಳಿಗೆ ಸಿಹಿ ನೈವೇದ್ಯ ಸಲ್ಲಿಸುತ್ತಾರೆ. ನಂತರ ಮಧ್ಯಾಹ್ನ ಅಲಂಕಾರಗೊಂಡಿರುವ ಎತ್ತುಗಳನ್ನು ಊರಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಕರಿ ಹರಿಯುವ ವಿಶೇಷತೆ : ಕಾರ ಹುಣ್ಣಿಮೆ ದಿನದಂದು ಸಂಜೆಯಾಗುತ್ತಿದ್ದಂತೆ ಕರಿ ಹರಿಯಲಾಗುತ್ತದೆ. ಊರ ಅಗಸಿಯಲ್ಲಿ ಬೇವಿನ ತಪ್ಪಲಿನ ತೋರಣದ ನಡುವೆ ಕೊಬ್ಬರಿ ಕಟ್ಟಲಾಗಿರುತ್ತದೆ. ಕರಿ ಹರಿಯುವ ಬಿಳಿ ಹಾಗೂ ಕಂದು ಬಣ್ಣದ ಎತ್ತುಗಳು ಇದರಲ್ಲಿ ಭಾಗವಹಿಸುತ್ತೇವೆ. ಅಗಸಿಯ ಎದುರಿಗೆ ಎತ್ತುಗಳೊಂದಿಗೆ ರೈತರು ತಾ ಮುಂದು ನೀ ಮುಂದು ಎಂದು ಓಡುತ್ತಾ ಕರಿಹರಿಯುತ್ತಾರೆ. ಜನರು ಕೇಕೆ ಹಾಕಿ ಉತ್ಸಾಹ ತುಂಬುತ್ತಾರೆ. ಈ ಮೂಲಕ ಯಾವ ಬಣ್ಣದ ಬೆಳೆ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ರೈತರದ್ದಾಗಿದೆ.

ಎತ್ತುಗಳ ಬದಲಿಗೆ ಯುವಕರ ಕರಿ ಹರಿವ ಪದ್ಧತಿ: ಸಮೀಪದ ಅಂಕಲಗಿ ಗ್ರಾಮದಲ್ಲಿ ಎತ್ತುಗಳ ಬದಲಿಗೆ ಯುವಕರು ಕರಿ ಹರಿಯುವ ಸಂಪ್ರದಾಯ ಇದೆ. ಕಾರ ಹುಣ್ಣಿಮೆಯಯಂದು ಗ್ರಾಮದ ಲಕ್ಷ್ಮಿ ದೇವತೆಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ. ಕರಿ ಹರಿಯುವ ಯುವಕರಿಗೆ ಹಿಂಗಾರು ಮತ್ತು ಮುಂಗಾರು ಹೆಸರುಗಳನ್ನು ಇಟ್ಟು ಕರಿ ಹರಿಯುವ ಸಂಪ್ರದಾಯ ಇಂದಿಗೂ ಇದೆ.

ಕಾರ ಹುಣ್ಣಿಮೆ ಕರಿ ಹರಿದ ಬಳಿಕ ಭಾರ ಎತ್ತುವ ಸ್ಪರ್ಧೆ ಸೇರಿದಂತೆ ಹಲವು ರೀತಿಯ ಕಸರತ್ತು ಪ್ರದರ್ಶನಗಳು ನಡೆಯುತ್ತೇವೆ.

ಜಾನುವಾರ ಆಲಂಕಾರಿಕ ವಸ್ತುಗಳ ಖರೀದಿ ಹುಣ್ಣಿಮೆ ಹಿಂದಿನ ದಿನ ಹೊನ್ನುಗ್ಗಿ ಹಬ್ಬ ಆಚರಣೆ ಎತ್ತುಗಳಿಗೆ ಸಿಹಿ ಖಾದ್ಯ ನೈವೇದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT