ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರದಾಳ | ಮೊಸಳೆ ಮರಿ ತೆರವಿಗೆ ಹಣ ಕೇಳುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ; ಆರೋಪ

Published 8 ಆಗಸ್ಟ್ 2023, 15:55 IST
Last Updated 8 ಆಗಸ್ಟ್ 2023, 15:55 IST
ಅಕ್ಷರ ಗಾತ್ರ

ತೇರದಾಳ: ಪಟ್ಟಣದ ಶೇಗುಣಸಿ ರಸ್ತೆಯಲ್ಲಿರುವ ಬಾವಿ ಬಳಿಯಿದ್ದ ನಾಲ್ಕು ಮೊಸಳೆ ಮರಿಗಳನ್ನು ಕಳೆದ ತಿಂಗಳು ಹಿಡಿದುಕೊಂಡು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮತ್ತದೇ ಜಾಗದಲ್ಲಿ ಕಾಣಿಸಿಕೊಂಡ ಹತ್ತಕ್ಕೂ ಹೆಚ್ಚು ಮೊಸಳೆ ಮರಿಗಳನ್ನು ಹಿಡಿದುಕೊಂಡು ಹೋಗಲು ಹಣ ಕೇಳುತ್ತಿದ್ದಾರೆ ಎಂದು ರೈತ ಶ್ರೇಯಾಂಶ ಸುಭಾಸ ನಾಸಿ ಆರೋಪಿಸಿದ್ದಾರೆ.

‘ಸಣ್ಣ ರೈತರಾದ ನಮಗೆ ವೆಚ್ಚ ಭರಿಸಲು ಸಾಧ್ಯವಿಲ್ಲ. ಅವುಗಳ ಇರುವಿಕೆಯಿಂದಾಗಿ ಜಮೀನಿನತ್ತ ಹೋಗಲು ಹೆದರಿಕೆಯಾಗುತ್ತಿದೆ. ಮೊದಲು ನಾಲ್ಕು ಮರಿಗಳಿದ್ದ ಜಾಗದಲ್ಲಿ ನಮ್ಮ ಬಾವಿ ಹಾಗೂ ಪಕ್ಕದ ಇನ್ನೊಂದು ಬಾವಿಯಲ್ಲಿ ಹತ್ತಕ್ಕೂ ಹೆಚ್ಚು ಮೊಸಳೆ ಮರಿಗಳಿರುವುದು ಕಂಡು ಬಂದಿದೆ. ತಾಯಿ ಮೊಸಳೆ ಕೂಡ ಇರಬಹುದೆಂಬ ಸಂಶಯವಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂಬುದು ಅವರ ಗಂಭೀರ ಆರೋಪ.

ಕಳೆದ ತಿಂಗಳು ನಾಲ್ಕು ಮೊಸಳೆ ಮರಿಗಳು ಕಂಡು ಬಂದಾಗ ಅವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ನದಿಗೆ ಬಿಟ್ಟಿದ್ದರು.

ಈ ಕುರಿತು ಮಾತನಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಎಂ.ಎಸ್. ನಾವಿ, ‘ಮೊಸಳೆ ಮರಿಗಳನ್ನು ಹಿಡಿಯಲು ಬಾವಿಯತ್ತ ಹೋದರೆ ಅವು ನೀರಿನಲ್ಲಿ ಮುಳುಗುತ್ತವೆ. ಮಳೆಗಾಲವಾದ್ದರಿಂದ ಬಾವಿ ಸಂಪೂರ್ಣ ತುಂಬಿದೆ. ಇದರಿಂದ ಅವುಗಳನ್ನು ಹಿಡಿಯಲು ಕಷ್ಟ. ದಿನವಿಡಿ ಕಾಯುತ್ತ ಕುಳಿತು ಮೀನಿನ ಬಲೆ ಬಳಸಿ ಹಿಡಿಯಬೇಕು. ಇದಲ್ಲದೆ ನಮ್ಮಲ್ಲಿ ಇಬ್ಬರೇ ಸಿಬ್ಬಂದಿ ಇರುವುದರಿಂದ ಸ್ಥಳೀಯ ಖಾಸಗಿ ಮೀನುಗಾರರನ್ನು ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ಅವರಿಗೆ ಹಣ ನೀಡಲು ಹೇಳಲಾಗಿದೆ. ಸಿಬ್ಬಂದಿಗೆ ಹಣ ಕೇಳಿಲ್ಲ. ಇಲಾಖೆಯಿಂದ ಇದಕ್ಕೆ ಹಣ ನೀಡಲಾಗುವುದಿಲ್ಲ. ಸಾಗಣೆ ವೆಚ್ಚ ಮಾತ್ರ ಇಲಾಖೆ ನೀಡುತ್ತದೆ. ಕೆಲವು ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮಂಗಗಳನ್ನು ಹಿಡಿಯಲು ಪಂಜರ ಮಾತ್ರ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳೇ ಅವುಗಳನ್ನು ಹಿಡಿಯುವ ವೆಚ್ಚ ಭರಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT