ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಸರ್ಕಾರಿ ವಸತಿ ಶಾಲೆ: ದಾಖಲೆ ಫಲಿತಾಂಶ

Published 14 ಮೇ 2024, 4:25 IST
Last Updated 14 ಮೇ 2024, 4:25 IST
ಅಕ್ಷರ ಗಾತ್ರ

ಬಾಗಲಕೋಟೆ: ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ಒಂದೆಡೆ ಸಾಧನೆ ಮಾಡಿದ್ದರೆ, ಇನ್ನೊಂದೆಡೆ ಜಿಲ್ಲೆಯ 14 ಮೊರಾರ್ಜಿ ದೇಸಾಯಿ ಶಾಲೆಗಳ ಪೈಕಿ 9 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ.

ಮೊರಾರ್ಜಿ ಸೇರಿ ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಬಿ.ಆರ್‌. ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸೇರಿ ಜಿಲ್ಲೆಯಲ್ಲಿ 29 ವಸತಿ ಶಾಲೆಗಳಿವೆ. ಅವುಗಳ ಪೈಕಿ 19 ಶಾಲೆಗಳು ಶೇ100ರಷ್ಟು ಫಲಿತಾಂಶ ದಾಖಲಿಸಿವೆ. ಶೇ30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಶೇ59 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 1,320 ವಿದ್ಯಾರ್ಥಿಗಳ ಪೈಕಿ 14 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಬಹುತೇಕ ಶಾಲೆಗಳು ಶೇ 95 ಫಲಿತಾಂಶ ಪಡೆದಿವೆ.

6ನೇ ತರಗತಿಗೆ ಪ್ರವೇಶ ನೀಡಲಾಗುತ್ತಿದ್ದು, ಉತ್ತಮ ಫಲಿತಾಂಶ ದಾಖಲಿಸುವ ಕಾರಣಕ್ಕೇ ಈ ಶಾಲೆಗಳ ಪ್ರವೇಶಕ್ಕೆ ತೀವ್ರ ಪೈಪೋಟಿ ಇರುತ್ತದೆ.  ಈ ಶಾಲೆಗಳಿಗೆ ಸೇರಿಸಲು ಬಯಸುವ ಪೋಷಕರು ಪರೀಕ್ಷೆಗೆ ತರಬೇತಿ ನೀಡುವ ಪ್ರತ್ಯೇಕ ಟ್ಯೂಷನ್‌ ಕೇಂದ್ರಗಳಿಗೆ, ಶಾಲೆಗಳಿಗೆ ನಾಲ್ಕು ಅಥವಾ ಐದನೇ ತರಗತಿಯಲ್ಲೇ ಸೇರ್ಪಡೆ ಮಾಡುತ್ತಾರೆ.

ಮೊರಾರ್ಜಿ, ನವೋದಯ, ಆದರ್ಶ ವಿದ್ಯಾಲಯ, ಸೈನಿಕ್‌, ಕಿತ್ತೂರು ರಾಣಿ ಚನ್ನಮ್ಮ ಸೇರಿ ವಿವಿಧ ಸರ್ಕಾರಿ ವಸತಿ ಶಾಲೆ ಸೇರ್ಪಡೆಗೆ ಸಿಇಟಿ, ನೀಟ್ ಪರೀಕ್ಷಾ ತರಬೇತಿ ಕೇಂದ್ರಗಳಂತೆ ಈ ಕೇಂದ್ರಗಳೂ ಹುಟ್ಟಿಕೊಂಡಿವೆ. 

‘ಬೆಳಿಗ್ಗೆಯಿಂದ ಮಕ್ಕಳಿಗೆ ಶಿಸ್ತಿನ ದಿನಚರಿ ಇರುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ ಇರುತ್ತದೆ’ ಎಂದು ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ಜಮಖಂಡಿ ತಿಳಿಸಿದರು.

‘ವಸತಿ ಶಾಲೆಯಲ್ಲಿರುವ ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನು ಸರ್ಕಾರ ಕಲ್ಪಿಸುತ್ತಿದೆ. ಮುಧೋಳದ ಮೊರಾರ್ಜಿ ಶಾಲೆಯ ಶ್ರುತಿ ಹಂಚಾಟೆ 622 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT