ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ | ಕೃಷ್ಣೆ ಒಡಲು ಬರಿದು: ನೀರು ಪೂರೈಕೆ ಸ್ಥಗಿತ

Published 23 ಮೇ 2024, 6:28 IST
Last Updated 23 ಮೇ 2024, 6:28 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಾರದೆ ಇರುವುದರಿಂದ ರಬಕವಿ ಬನಹಟ್ಟಿ ಸಮೀಪದಲ್ಲಿಯ ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿದೆ.  ಇದರಿಂದ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯ ಜನರಿಗೆ ಕೃಷ್ಣಾ ನದಿಯಿಂದ ಸರಬರಾಗುತ್ತಿದ್ದ ನೀರಿನ ಪೂರೈಕೆ ನಾಲ್ಕಾರು ದಿನಗಳಿಂದ ಸ್ಥಗಿತಗೊಂಡಿದ್ದು, ನದಿಯ ನೀರು ಬರುವವರೆಗೆ ಜನರು ಸದ್ಯ ಕೊಳವೆ ಬಾವಿಗಳನ್ನು ಅವಲಂಬಿಸುವಂತಾಗಿದೆ.

ಕೃಷ್ಣಾ ನದಿಯಲ್ಲಿ ನೀರು ಇಲ್ಲದಿರುವುದರಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ  ಜನ ಮತ್ತ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಲಿದೆ. ಹಾಗೂ ಪ್ರಮುಖ ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಸಿನ ಮತ್ತು ಬಾಳೆ ಬೆಳೆಗಳಿಗೂ ಸಮಸ್ಯೆಯಾಗಲಿದೆ.

ರಬಕವಿ ಬನಹಟ್ಟಿ ಸದ್ಯ ನೀರಿನ ಸಮಸ್ಯೆ ಇಲ್ಲ; ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದರೂ ರಬಕವಿ, ಬನಹಟ್ಟಿ, ಹೊಸೂರ ಮತ್ತು ರಾಮಪುರಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

ನಗರಸಭೆಯ ವ್ಯಾಪ್ತಿಯಲ್ಲಿ 326 ಕೊಳವೆ ಬಾವಿ, 26 ತೆರೆದ ಬಾವಿಗಳಿದ್ದು,ಇವುಗಳಿಗೆ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ನೀರು ಪೂರೈಕೆಗಾಗಿ ಪ್ರಮುಖ ಪ್ರದೇಶಗಳಲ್ಲಿ ಅಂದಾಜು 300ಕ್ಕೂ ಹೆಚ್ಚು ಸಿಸ್ಟನ್‌ಗಳನ್ನು ಅಳವಡಿಸಲಾಗಿದೆ. ಇನ್ನೂ ಸಿಂಟೆಕ್ಸ್‌ಗಳನ್ನೂ ಅಳವಡಿಸಿ, ಅವುಗಳಿಗೆ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

‘ಇನ್ನೂ ಕೆಲವು ಓಣಿಗಳಲ್ಲಿಯ ಖಾಸಗಿ ಬೋರ್‌ವೆಲ್ ಮಾಲೀಕರೂ ನೀರು ಪೂರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಪರವಾನಗಿಯನ್ನು ಪಡೆಯಲಾಗಿದೆ’ ಎಂದು ಪೌರಾಯುಕ್ತ ಜಗದೀಶ ಈಟಿ ತಿಳಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದ್ದು, ಜನರು ಅನವಶ್ಯಕವಾಗಿ ಕೊಳವೆ ಬಾವಿಗಳ ನೀರನ್ನು ಪೋಲು ಮಾಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT