ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ ಕ್ಷೇತ್ರ: ಅನುಭವ, ಸತತ ಗೆಲುವಿಗೆ ದಕ್ಕದ ಸಚಿವ ಸ್ಥಾನ

Published 11 ಜೂನ್ 2024, 6:29 IST
Last Updated 11 ಜೂನ್ 2024, 6:29 IST
ಅಕ್ಷರ ಗಾತ್ರ

ಬಾಗಲಕೋಟೆ: ಐದು ಬಾರಿ ಸತತ ಗೆಲುವು, ವಿವಿಧ ಸಮಿತಿಗಳಲ್ಲಿ ಗಳಿಸಿದ ಅನುಭವಕ್ಕೆ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ರಾಜ್ಯದಿಂದ ರಾಜ್ಯಸಭೆ, ಲೋಕಸಭೆಗೆ ಆಯ್ಕೆಯಾಗಿರುವ ಐವರಿಗೆ ಸಚಿವ ಸ್ಥಾನ ದೊರಕಿದೆ. ಅದರಲ್ಲಿ ಜಿಲ್ಲೆಯ ಸಂಸದರ ಹೆಸರಿಲ್ಲದಿರುವುದು ಜಿಲ್ಲೆಯ ಮುಖಂಡರಿಗೆ, ಜನರಿಗೆ ನಿರಾಸೆಯುಂಟು ಮಾಡಿದೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲೇ ಬಾಗಲಕೊಟೆಯಲ್ಲಿ ಕಮಲ ಅರಳಿಸಿದ್ದರು ಪಿ.ಸಿ. ಗದ್ದಿಗೌಡರ. 2004ರಿಂದಲೇ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಲಾಬಿ ಮಾಡದ ಪರಿಣಾಮ ಬಹುಶಃ ಅವರಿಗೆ ಅವಕಾಶ ಸಿಕ್ಕಿಲ್ಲ ಎನ್ನುವುದು ಅವರ ಬೆಂಬಲಿಗರ ಅನಿಸಿಕೆ.

ರಾಜ್ಯದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಏಳು ಬಾರಿ ಗೆಲುವು ಸಾಧಿಸಿದ್ದಾರೆ. ಅವರು ಈಗಾಗಲೇ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ, ಪಿ.ಸಿ. ಗದ್ದಿಗೌಡರ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಪ್ರಹ್ಲಾದ ಜೋಶಿ ಅವರೂ ಸಹ ಸಚಿವರಾಗಿದ್ದಾರೆ. ಗದ್ದಿಗೌಡರಿಗೆ ಮಾತ್ರ ಆ ಭಾಗ್ಯ ಒಲಿದಿಲ್ಲ.

ಕ್ಷೇತ್ರದಲ್ಲಿಯೇ ಮಾಡಿದ ಕೆಲಸಗಳಿಗೆ ಪ್ರಚಾರ ಪಡೆಯದ ಗದ್ದಿಗೌಡರ, ಕೇಂದ್ರದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲಿಲ್ಲ. ಇವರ ಪರವಾಗಿಯೂ ರಾಜ್ಯ ನಾಯಕರೂ ಧ್ವನಿ ಎತ್ತಲಿಲ್ಲ. ಪರಿಣಾಮ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಲಭಿಸಿಲ್ಲ.

ಲಿಂಗಾಯತ ಕೋಟಾದಡಿ ಇವರಿಗೂ ಸಚಿವ ಸ್ಥಾನ ದೊರೆಯಬಹುದು ಎಂಬ ಲೆಕ್ಕಾಚಾರ ಜೋರಾಗಿಯೇ ನಡೆದಿತ್ತು. ಇವರೊಂದಿಗೆ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿದ್ದ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಸಚಿವ ಸ್ಥಾನಕ್ಕಾಗಿ ಲಾಬಿಯನ್ನು ಜೋರಾಗಿಯೇ ಮಾಡಿದ್ದರು. 

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜ್ಯಗಳು ಐವರು ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಂಪುಟ ಸೇರ್ಪಡೆಗೊಂಡಿದ್ದಾರೆ. ಆದರೆ, ರಾಜ್ಯದ ಬಿಜೆಪಿಯ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಿಗೆ ಅವಕಾಶ ಸಿಕ್ಕಿಲ್ಲ. ಲಿಂಗಾಯತ ಕೋಟಾದಡಿ ಸೋಮಣ್ಣ ಸಂಪುಟ ಸೇರಿದ್ದಾರೆ.

ಆಗಾಗ ಬಿಜೆಪಿ ಹೊಸಬರು, ಪಕ್ಷಕ್ಕೆ ದುಡಿದವರು ಲಾಬಿ ಮಾಡದಿದ್ದರೂ, ಗುರುತಿಸಿ ಅವಕಾಶ ನಿಡುವ ಮೂಲಕ ಹೈಕಮಾಂಡ್‌ ಅಚ್ಚರಿ ಮೂಡಿಸುತ್ತಿದೆ. ಆದರೆ, ಬಾಗಲಕೋಟೆ ಜನರಿಗೆ ಅಚ್ಚರಿ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT