ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಭವನದ ಎದುರು ಶವಇಟ್ಟು ಪ್ರತಿಭಟನೆ

ಮುಧೋಳ ತಾಲ್ಲೂಕಿ ಶಿರೋಳದಲ್ಲಿ ದಲಿತ ಕುಟುಂಬದ ಅಪ್ಪ–ಮಗನ ಕೊಲೆ
Last Updated 16 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಧೋಳ ತಾಲ್ಲೂಕಿನ ಶಿರೋಳದಲ್ಲಿ ಹಳೆಯ ವೈಷಮ್ಯದ ಕಾರಣ ಮಂಗಳವಾರ ಅಪ್ಪ–ಮಗನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ನ್ಯಾಯ ದೊರಕಿಸುವಂತೆ ಆಗ್ರಹಿಸಿ ದಲಿತ ಸಮುದಾಯದವರು ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಮೃತರ ಶವ ಇಟ್ಟು ಪ್ರತಿಭಟನೆನಡೆಸಿದರು.

ಈ ವೇಳೆ ಪ್ರತಿಭಟನಾಕಾರರು, ಪೊಲೀಸರ ನಡುವೆ ಸಂಘರ್ಷ ಕೂಡ ನಡೆಯಿತು. ಮಹಿಳೆಯರು ರಸ್ತೆಯಲ್ಲಿ ಉರುಳಾಡಿ ಆಕ್ರೋಶ ದಾಖಲಿಸಿದರು. ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಪ್ರತಿಭಟನೆ ನೇತೃತ್ವ ವಹಿಸಿತ್ತು.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಜಿಲ್ಲಾಡಳಿತ ಭವನಕ್ಕೆ ಕೊಂಡೊಯ್ಯಲು ಪ್ರತಿಭಟನಾಕಾರರು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಹೀಗಾಗಿ ದಿಢೀರನೆ ಆಸ್ಪತ್ರೆ ಎದುರಿನ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಈ ವೇಳೆ ಕಾಳಿದಾಸ ವೃತ್ತದಿಂದ ನಗರಸಭೆಯತ್ತ ತೆರಳುವ ರಸ್ತೆಯಲ್ಲಿಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಆಗಿತ್ತು. ಬದಲಿ ಮಾರ್ಗದ ಮೂಲಕ ವಾಹನಗಳನ್ನು ಕಳುಹಿಸಲಾಯಿತು. ಪ್ರತಿಭಟನೆಗೆ ಮಣಿದು ಶವಗಳನ್ನು ಜಿಲ್ಲಾಡಳಿತ ಭವನಕ್ಕೆ ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಯಿತು. ಮೊದಲಿಗೆ ಆವರಣದಲ್ಲಿ ನೆರೆದು ಪ್ರತಿಭಟಿಸಿದ ಸಂಬಂಧಿಕರು ಹಾಗೂ ದಲಿತ ಸಂಘಟನೆ ಮುಖಂಡರು ನಂತರ ಶವಗಳನ್ನು ಜಿಲ್ಲಾಡಳಿತ ಭವನದ ಒಳಗೆ ಕೊಂಡೊಯ್ಯಲು ಮುಂದಾದರು. ಇದು ಪೊಲೀಸರೊಂದಿಗೆ ಹೊಯ್‌ಕೈಗೆ ದಾರಿಯಾಯಿತು.

ಪೊಲೀಸರು ಹಗ್ಗ ಅಡ್ಡ ಹಿಡಿದು ಪ್ರತಿಭಟನಾಕಾರರು ಒಳಗೆ ಹೋಗುವುದನ್ನು ತಡೆದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ಹಗ್ಗವನ್ನೇ ಕಿತ್ತುಕೊಂಡು ಹೋಗಿ ದೂರಕ್ಕೆ ಎಸೆದು ಬಂದರು. ಈ ವೇಳೆ ಪರಸ್ಪರ ತಳ್ಳಾಟ ನಡೆಯಿತು. ಪೊಲೀಸರ ವಿರುದ್ಧ ಮಹಿಳೆಯರು ಹಿಡಿಶಾಪ ಹಾಕಿದರು. ನಂತರ ನವನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮುಖ್ಯ ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಚಿವರು ಬಂದಿಲ್ಲ:‘ನಮಗೆ ಪೊಲೀಸರ ತನಿಖೆಯಲ್ಲಿ ನಂಬಿಕೆ ಉಳಿದಿಲ್ಲ. ಹೀಗಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲುಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇನ್ನೂ ಬಂದಿಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸಂಧಾನ:ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಲಾಗುವುದು. ಮೃತರ ಕುಟುಂಬದವರಿಗೆ ನ್ಯಾಯ ಕಲ್ಪಿಸಲಾಗುವುದು. ಶಿರೋಳದಲ್ಲಿ ದಲಿತರು ಸುರಕ್ಷಿತವಾಗಿ ಬದಕಲು ಅವಕಾಶ ಮಾಡಿಕೊಡಲಾಗುವುದು ಎಂದು ಸಾಂತ್ವನ ಹೇಳಿದರು. ಅದಕ್ಕೆ ಸಮ್ಮತಿಸಿದ ಪ್ರತಿಭಟನಾಕಾರರು ಶವಗಳನ್ನು ಮರಳಿ ಊರಿಗೆ ಕೊಂಡೊಯ್ಯಲು ಒಪ್ಪಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಪರಶುರಾಮ ನೀಲನಾಯಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಜಿಲ್ಲಾಡಳಿತ ಭವನಕ್ಕೆ ಪೊಲೀಸರು ಸರ್ಪಗಾವಲು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT