ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಮಾಡದ್ದರಿಂದ ರೈಲು ಮಾರ್ಗ ವಿಳಂಬ: ಸಂಸದ ಪಿ.ಸಿ. ಗದ್ದಿಗೌಡರ

ರೈಲು ನಿಲ್ದಾಣ ಉದ್ಘಾಟನೆ, ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ
Published 26 ಫೆಬ್ರುವರಿ 2024, 15:51 IST
Last Updated 26 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕಾಂಗ್ರೆಸ್‌ ಸರ್ಕಾರವಿದ್ದಾಗ ಭೂಸ್ವಾಧೀನ ಮಾಡದ್ದರಿಂದ ಕುಡಚಿ–ಬಾಗಲಕೋಟೆ ರೈಲು ಮಾರ್ಗ ಕಾಮಗಾರಿ ವಿಳಂಬವಾಯಿತು. ಯಡಿಯೂರಪ್ಪ ಸರ್ಕಾರ ಅಗತ್ಯ ಹಣಕಾಸು ಒದಗಿಸಿತು’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಆರೋಪಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಗಲಕೋಟೆ ಸೇರಿದಂತೆ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, 1500 ಮೇಲ್ಸೇತುವೆಗಳಿಗೆ ವಿಡಿಯೊ ಕಾನ್ಫ್‌ರೆನ್ಸ್ ಮೂಲಕ ಚಾಲನೆ ನೀಡಿದ ನಂತರ, ಗದ್ದಿಗೌಡರ ಮಾತನಾಡಿದರು.

ಯಡಿಯೂರಪ್ಪ ಅವರ ಸರ್ಕಾರವಿದ್ದಾಗ ಭೂಸ್ವಾಧೀನ ಪೂರ್ಣಗೊಳಿಸಲಾಯಿತು. ಲೋಕಾಪುರವರೆಗಿನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಮಾರ್ಗ ನಿರ್ಮಾಣಗೊಳ್ಳಲಿದೆ ಎಂದರು.

ನೂತನ ಜಿಲ್ಲೆ ಬಾಗಲಕೋಟೆಗೆ ಸುಸಜ್ಜಿತ ಮೇಲ್ದರ್ಜೆಯ ನಿಲ್ದಾಣ ಅವಶ್ಯವಾಗಿತ್ತು. ಈಗಾಗಲೇ ಆರಂಭವಾಗಿರುವ ಕಾಮಗಾರಿ ಅಮೃತ ಯೋಜನೆಯಡಿ ಮತ್ತೆ ನೆರವು ಸಿಕ್ಕಿದೆ. ಎರಡೂ ಮೇಲ್ಸೇತುವೆಗಳೂ ನಿರ್ಮಾಣವಾಗುತ್ತಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಹಲವಾರು ಉಪಯುಕ್ತ ಯೋಜನೆಗಳಿಂದ ಭಾರತ ದೇಶ ಇಂದು ಜಾಗತಿಕ ಮನ್ನಣೆ ಪಡೆಯುತ್ತಿದೆ. ಭಾರತ ಅಭಿವೃದ್ದಿಪರ ರಾಷ್ಟ್ರವಾಗಿದೆ. ವಿಕಸಿತ ಭಾರತ ಎಂಬ ಕಲ್ಪನೆಯಡಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ಅಮೃತ ಭಾರತ ಯೋಜನೆಯಡಿ ಬಾಗಲಕೋಟೆ ರೈಲು ನಿಲ್ದಾಣ ಪುನರಾಭಿವೃದ್ಧಿಗೆ ₹16.24 ಕೋಟಿ, ಬಾದಾಮಿ ರೈಲು ನಿಲ್ದಾಣಕ್ಕೆ ₹15.21 ಕೋಟಿ ಹಾಗೂ ಬಾದಾಮಿ ಸ್ಟೇಷನ್ ಳಿ ಮೇಲ್ಸೇತುವೆ ನಿರ್ಮಾಣಕ್ಕೆ ₹39.63 ಕೋಟಿ, ಗುಳೇದಗುಡ್ಡ ಸ್ಟೇಷನ್ ಹತ್ತಿರ ಮೇಲ್ಸೇತುವೆಗೆ ₹32.29 ಕೋಟಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಹಿರಿಯ ಎಂಜಿನಿಯರ್‌ ಸ್ವಪ್ನಿಲ್‌ ಮಾತನಾಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿರ್ದೇಶಕ ರಾಜು ರೇವಣಕರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.

ಕೇಂದ್ರದ ಮಾಜಿ ಸಚಿವ ಸುರೇಶ ಅಂಗಡಿ ಜಿಲ್ಲಾಧಿಕಾರಿ ಕ್ಯಾಪ್ಟರ್ ರಾಜೇಂದ್ರ ಅವರ ಆಸಕ್ತಿಯಿಂದಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸಾಧ್ಯವಾಗಿದೆ
ಪಿ.ಸಿ. ಗದ್ದಿಗೌಡರ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT