ಮಂಗಳವಾರ, ಅಕ್ಟೋಬರ್ 15, 2019
29 °C

ಬಾಗಲಕೋಟೆಯಲ್ಲಿ ಮಳೆ: ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವು

Published:
Updated:
ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ

ಬಾಗಲಕೋಟೆ: ಬಿಟ್ಟೂಬಿಡದೆ ಶನಿವಾರ ರಾತ್ರಿಯಿಡೀ ಸುರಿದ ಮಳೆಗೆ ಬಾಗಲಕೋಟೆ ತಾಲ್ಲೂಕಿನ ಕಿರೆಸೂರಿನಲ್ಲಿ ಮೂರು ಜೀವಗಳು ಬಲಿಯಾಗಿವೆ. ಘಟನೆಯಲ್ಲಿ ತಾಯಿ-ಮಗು ಪಾರಾಗಿದ್ದಾರೆ.

ಮಳೆಗೆ ನೆನೆದು  ಮನೆಯ ಮೇಲ್ಛಾವಣಿ  ಕುಸಿದುಬಿದ್ದ ಪರಿಣಾಮ ಕಿರಸೂರಿನ ಹಡಪದ ಕುಟುಂಬದ ಈರಪ್ಪ ಹಡಪದ (60) ಪತ್ನಿ ಗೌರವ್ವ (55) ಹಾಗೂ ಮಗ ನಿಂಗಪ್ಪ (38) ಬೆಳಗಾಗುವುದರಲ್ಲಿ ಹೆಣವಾಗಿದ್ದಾರೆ.

ಮನೆಯಲ್ಲಿ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ನಿಂಗಪ್ಪನ ಪತ್ನಿ ಸವಿತಾ (26) ಹಾಗೂ ಮಗು ತನು (6) ಸುರಕ್ಷಿತವಾಗಿದ್ದಾರೆ.

ಈರಪ್ಪ ಹಾಗೂ ಗೌರವ್ವ ಮನೆಯ ಮುಂದಿನ ಕೋಣೆಯಲ್ಲಿ ಮಲಗಿದ್ದು, ಮಳೆಗೆ ಮಣ್ಣಿನ ಮೇಲ್ಛಾವಣಿ ನೆನೆದು ಒಳಗೆ ನೀರು ಸೋರ ತೊಡಗಿದೆ. ಆಗ ಎಚ್ಚರಗೊಂಡ ನಿಂಗಪ್ಪ, ಅಪ್ಪ-ಅಮ್ಮನ ಕೋಣೆಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರನ್ನು ಹೊರಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಮನೆಯ ಮೇಲಿನ ಗೋಡೆ ಕುಸಿದ ಇವರ ಮನೆಯ ಮೇಲೆ ಬಿದ್ದ ಪರಿಣಾಮ ಛಾವಣಿ ಸಮೇತ ಕುಸಿದಿದೆ. ಕೆಳಗೆ ಸಿಲುಕಿದ ಮೂವರು ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಬಾಗಲಕೋಟೆಯಿಂದ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಹೊರಗೆ ತೆಗೆದರು.

ಮೃತ ದೇಹಗಳ ಮುಂದೆ  ಸಂಬಂಧಿಕರ  ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಮಮ್ಮಲ ಮರುಗಿದರು. ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಗೆ ಸ್ಥಳೀಯರು ಸಾಥ್ ನೀಡಿದರು.

ಘಟನಾ ಸ್ಥಳಕ್ಕೆ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ,ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

Post Comments (+)