ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

SSLC | ಅನುತ್ತೀರ್ಣರಾದವರಿಗೆ ಬೋಧನಾ ತರಗತಿ: ಅರ್ಧಕ್ಕೂ ಕಡಿಮೆ ಮಕ್ಕಳು ಹಾಜರು

ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಗೆ ವಿಶೇಷ ಪರಿಹಾರ ಬೋಧನಾ ತರಗತಿ
Published 18 ಮೇ 2024, 6:03 IST
Last Updated 18 ಮೇ 2024, 6:03 IST
ಅಕ್ಷರ ಗಾತ್ರ

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ವಿಶೇಷ ಪರಿಹಾರ ಬೋಧನಾ ತರಗತಿಗಳು ಪ್ರಾರಂಭವಾಗಿ ಎರಡು ದಿನಗಳಾದರೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಿಗೆ ಹಾಜರಾಗುತ್ತಿಲ್ಲ. ಮಕ್ಕಳನ್ನು ಕರೆತರಲು ಶಿಕ್ಷಕರು ಹರಸಾಹಸ ಪಡುವಂತಾಗಿದೆ.

ಅನುತ್ತೀರ್ಣರಾದ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳಿಗಾಗಿ ಮುಖ್ಯ ಪರೀಕ್ಷೆಯ ಜತೆಗೆ ಇನ್ನೆರಡು ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಫೇಲಾದವರು ಹಾಗೂ ಸಿ,ಸಿ ಪ್ಲಸ್‌ ಫಲಿತಾಂಶ ಪಡೆದವರನ್ನೂ ಫಲಿತಾಂಶ ಉತ್ತಮಗೊಳಿಸಿಕೊಳ್ಳಲು ನೋಂದಾಯಿಸಲು ಕ್ರಮಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ.

ಜಿಲ್ಲೆಯಲ್ಲಿ 30,446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 24,459 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 5,987 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅವರನ್ನು ಎರಡನೇ ಪರೀಕ್ಷೆಗೆ ಸಿದ್ಧಗೊಳಿಸಲು ವಿಶೇಷ ತರಗತಿ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೊದಲ ಬಾರಿಗೆ ಇಂತಹ ಪ್ರಯತ್ನಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆಯು ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಮಕ್ಕಳಿಗೆ ಮುಂಚಿತವಾಗಿ ತಿಳಿಸಿದ್ದರಿಂದ ಅವರು ಬೇರೆ ಊರಿಗೆ, ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಜೆ ಇದ್ದದ್ದರಿಂದ ಶಿಕ್ಷಕರೂ ಮಾನಸಿಕವಾಗಿ ಸಿದ್ಧರಾಗಿರಲಿಲ್ಲ.

ಇಲಾಖೆ ಆದೇಶ ಹೊರಡಿಸಿದ ಮೇಲೆ ಶಿಕ್ಷಕರು ಶಾಲೆಗೆ ಹಾಜರಾಗಿದ್ದಾರೆ. ಆದರೆ, ಮಕ್ಕಳ ಸಂಖ್ಯೆ ಅರ್ಧ ದಾಟಿಲ್ಲ. 5,987 ಮಕ್ಕಳ ಪೈಕಿ ಗುರುವಾರ 2,258 ಮಕ್ಕಳು ಹಾಜರಾಗಿದ್ದಾರೆ. ಅವರಿಗೆ ಜೂನ್‌ 5ರ ವರೆಗೆ ತರಗತಿ ತೆಗೆದುಕೊಳ್ಳಬೇಕಾಗಿದೆ. 20 ದಿನಗಳಿಗಷ್ಟೇ ತರಗತಿ ತೆಗೆದುಕೊಳ್ಳುತ್ತಿರುವುದರಿಂದ ವಿಳಂಬವಾಗಿ ವಿದ್ಯಾರ್ಥಿಗಳು ಬಂದಷ್ಟೂ ನಷ್ಟವಾಗುತ್ತದೆ.

‘ಮಕ್ಕಳ ಪಾಲಕರ ಮೊಬೈಲ್‌ ಸಂಖ್ಯೆಗೆ ಈಗಾಗಲೇ ಕರೆ ಮಾಡಿ ತರಗತಿಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ. ಕೆಲವರಿಗೆ ಮುಖತಃ ಭೇಟಿಯಾಗಿಯೂ ಹೇಳಲಾಗುತ್ತಿದೆ. ವಿವಿಧ ಕಾರಣಗಳಿಂದ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಬರುತ್ತಿಲ್ಲ. ಬಂದವರಿಗಷ್ಟೇ ಬೋಧನೆ ಮಾಡಲಾಗುತ್ತಿದೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘10ಕ್ಕೂ ಕಡಿಮೆ ಇರುವ ವಿದ್ಯಾರ್ಥಿಗಳಿರುವ ಶಾಲೆಗಳ ಮಕ್ಕಳನ್ನೂ ಸಮೀಪದ ಶಾಲೆಗೆ ಸೇರ್ಪಡೆ ಮಾಡಲಾಗಿದೆ. ಅಲ್ಲಿ ಮಾತ್ರ ಬೋಧನೆ ಮಾಡಲಾಗುತ್ತದೆ. ಮಕ್ಕಳು, ಪಾಲಕರನ್ನು ಸಂಪರ್ಕಿಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.

ಬಿಸಿಯೂಟಕ್ಕೂ ವಿದ್ಯಾರ್ಥಿಗಳ ಕೊರತೆ
ಬಾಗಲಕೋಟೆ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಬರ ಪೀಡಿತವಾಗಿರುವ ಕಾರಣ ಬೇಸಿಗೆ ರಜೆಯಲ್ಲಿಯೂ ಬಿಸಿಯೂಟ ನೀಡಲು ನಿರ್ಧರಿಸಲಾಗಿತ್ತು. ಅದಕ್ಕೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿಲ್ಲ. ಬಿಸಿಯೂಟಕ್ಕೆ ಬರುವ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕೆ ಬರಲಿರುವ ಮಕ್ಕಳ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಲಾಗಿತ್ತು. ಸರ್ಕಾರಿ, ಅನುದಾನಿತ ಶಾಲೆಗಳ 1,29,186 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಆದರೆ, 52,330 ಮಕ್ಕಳು ಮಾತ್ರ ಬಿಸಿಯೂಟಕ್ಕೆ ಹಾಜರಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT