ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುತ್ತಿದೆ ತಾಪಮಾನ | ಜನರಿಗೆ ಬೆವರ ಮಜ್ಜನ: ತಂಪು ಪಾನೀಯ, ಹಣ್ಣುಗಳ ಮೊರೆ

ಎಸ್.ಎಂ. ಹಿರೇಮಠ
Published 29 ಏಪ್ರಿಲ್ 2024, 6:03 IST
Last Updated 29 ಏಪ್ರಿಲ್ 2024, 6:03 IST
ಅಕ್ಷರ ಗಾತ್ರ

ಬಾದಾಮಿ: ದಿನೇದಿನೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಿಸಿಲು ಹೆಚ್ಚುತ್ತಿರುವುದರಿಂದ ಜನರು ಹೈರಾಣಾಗಿದ್ದಾರೆ. ಕಳೆದ ವಾರ 38ರಿಂದ 39 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಶನಿವಾರ ಮತ್ತು ಭಾನುವಾರ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪ್ರಖರ ಬಿಸಿಲಿಗೆ ಬೆಟ್ಟಗಳು ಮತ್ತು ಸಿಸಿ ರಸ್ತೆಗಳು ಕಾದು ಕಾವು ಹೆಚ್ಚುತ್ತಿದೆ. ಬಿಸಿ ಗಾಳಿಗೆ ಜನರು ಮತ್ತು ಪ್ರಾಣಿಗಳು ತತ್ತರಿಸಿಹೋಗಿದ್ದಾರೆ.

ಬೆಳಿಗ್ಗೆ 10 ಗಂಟೆಗೇ ಹೆಚ್ಚಾಗುವ ಬಿಸಿಲಿನ ಧಗೆ, ಸಂಜೆ 4ರವರೆಗೆ ಇರುತ್ತದೆ. ಆನಂತರವೂ ಬಿಸಿಗಾಳಿ ಇರುತ್ತದೆ. ಇದರಿಂದ ಜನರು ಎಳನೀರು, ತಂಪುಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

‘ಎಳನೀರು ಇಳುವರಿ ಕಡಿಮೆ ಯಾಗಿರುವುದರಿಂದ ಮಾರುಕಟ್ಟೆಯಲ್ಲಿ ₹30ರಿಂದ ₹40ಕ್ಕೆ ದರ ಏರಿದೆ. ಮಧ್ಯಾಹ್ನದೊಳಗೇ ಎಳನೀರು ಖಾಲಿಯಾಗುತ್ತದೆ’  ಎಂದು ವರ್ತಕ ಶಂಕ್ರಪ್ಪ ಹೇಳಿದರು.

‘ಮಾರುಕಟ್ಟೆಯಲ್ಲಿ ಹಣ್ಣಿನ ದರ ಹೆಚ್ಚಾಗಿದ್ದು, ದ್ರಾಕ್ಷಿ ದರ ₹60ರಿಂದ ₹80ಕ್ಕೆ, ಕಲ್ಲಂಗಡಿ ₹30ರಿಂದ ₹60ಕ್ಕೆ, ಸೇಬು ₹150ರಿಂದ ₹200ಕ್ಕೆ ಏರಿದೆ’ ಹಣ್ಣಿನ ವ್ಯಾಪಾರಿ ಲಾಲಸಾಬ್ ತಿಳಿಸಿದರು.

ವ್ಯಾಪಾರಸ್ಥರಿಗೆ ಸಂಕಷ್ಟ

‘ಬಿಸಿಲು ಹೆಚ್ಚಾಗಿರುವ ಕಾರಣ ಹೆಚ್ಚಿನ ಜನರು ಮಾರುಕಟ್ಟೆಗೇ ಬರುತ್ತಿಲ್ಲ. ವ್ಯಾಪಾರ ಇಲ್ಲದ ಸುಮ್ಮನೆ ಕುಳಿತುಕೊಳ್ಳಬೇಕಿದೆ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಯಾರೂ ಬರುವುದೆ ಇಲ್ಲ’ ಎಂದು ವರ್ತಕ ಬಸವರಾಜ ಹಿರೇಹಾಳ ಹೇಳಿದರು.

‘ನೆತ್ತಿ ಸುಡುವಂತಹ ಬಿಸಿಲೈತಿ. ಮೈಯಾಗ ಬೆವರು ಸುರಿತಾನೇ ಇರ್ತೈತಿ. ಮಳೀನೆ ಆಗೂವಲ್ದು. ಮಳಿ ಆಗದಿದ್ರ ಮುಂದ ಭಾಳ ಕಷ್ಟ ಐತ್ರಿ’ ಎಂದು ಬಾದಾಮಿಯ ಸಂತೆಗೆ ಬಂದಿದ್ದ ಕುಟಕನಕೇರಿ ಗ್ರಾಮದ ಮಲ್ಲಿಕಾರ್ಜುನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT