ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಅಗೆದ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ

ವಾಹನ ಸಂಚಾರ ವೇಳೆ ಪಾದಚಾರಿಗಳ ಕಣ್ಣಿಗೆ ಏರಗುವ ಮಣ್ಣು
Published 7 ಏಪ್ರಿಲ್ 2024, 13:40 IST
Last Updated 7 ಏಪ್ರಿಲ್ 2024, 13:40 IST
ಅಕ್ಷರ ಗಾತ್ರ

ಬಾದಾಮಿ: ಚಾಲುಕ್ಯರ ರಾಜಧಾನಿಯಾಗಿದ್ದ ಪ್ರವಾಸಿ ಪಟ್ಟಣ ತಾಣದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಡಾಂಬರ್‌ ರಸ್ತೆಯೇ ಇಲ್ಲದಂತಾಗಿದೆ.

ಪಾದಚಾರಿ ರಸ್ತೆಯಲ್ಲಿ ಚಿಕ್ಕ ಚಿಕ್ಕ ಗೂಡಂಗಡಿಗಳು ಆವರಿಸಿಕೊಂಡಿವೆ. ನೂರಾರು ವಾಹನಗಳ ಮಧ್ಯೆಯೇ ಜೀವಭಯದಿಂದ ಪಾದಚಾರಿಗಳು ಸಂಚರಿಸಬೇಕಿದೆ.

ವೀರಪುಲಿಕೇಶಿ ವೃತ್ತದಿಂದ ಕೆ.ಎಂ.ಪಟ್ಟಣಶೆಟ್ಟಿ ಪೆಟ್ರೋಲ್ ಬಂಕ್ ವರೆಗೆ, ನೀರಾವರಿ ಇಲಾಖೆಯಿಂದ ವೀರಪುಲಿಕೇಶಿ ವೃತ್ತದ ವರೆಗೆ ಡಾಂಬರ್‌ ರಸ್ತೆಯ ಅರ್ಧ ಭಾಗದಲ್ಲಿ ಕೆಂಪು ಮಣ್ಣು ಆವರಿಸಿದೆ. ಮಳೆಯಿಲ್ಲದೇ ರಸ್ತೆಯಲ್ಲಿ ದೂಳು ಹೆಚ್ಚಾಗಿದೆ. 

‘ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬೆಳಗಿನ ವಾಯು ವಿಹಾರಕ್ಕೆ ತೆರಳಿದಾಗ ಲಾರಿ ಜೋರಾಗಿ ಬಂದಿದ್ದರಿಂದ ಮಣ್ಣು ಕಣ್ಣಲ್ಲಿ ಬಿದ್ದು ಆಸ್ಪತ್ರೆಗೆ ಹೋಗಬೇಕಾಯಿತು’ ಎಂದು ವಾಯು ವಿಹಾರಿ ಸಂಗನಬಸಪ್ಪ ಪಾಟೀಲ ಹೇಳಿದರು.

‘ತಿಂಗಳಿಗೆ ಒಂದು ಬಾರಿಯಾದರೂ ಪುರಸಭೆ ಮಣ್ಣನ್ನು ತೆಗೆಯಿಸಿ ಸ್ವಚ್ಛತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯಲ್ಲಿ ಕೊಳವೆ ಅಳವಡಿಸಲು ಅಂದಾಜು ನಾಲ್ಕು ಅಡಿ ಡಾಂಬರ್‌ ರಸ್ತೆ ಅಗೆದು ನಾಲ್ಕು ವರ್ಷವಾದರೂ ಅಗೆದ ರಸ್ತೆ ಮೇಲೆ ಡಾಂಬರೀಕರಣ ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ಮಣ್ಣು ಅಧಿಕವಾಗಿದೆ. ಲೋಕೋಪಯೋಗಿ ಇಲಾಖೆ ಡಾಂಬರೀಕರಣ ಮಾಡಬೇಕು’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಒತ್ತಾಯಿಸಿದ್ದಾರೆ.

‘ಮರಳು ತೆಗೆಯುವ ಮಷಿನ್ ರಿಪೇರಿ ಇದೆ. ದುರಸ್ತಿ ಮಾಡಿಸಿ ಒಂದು ವಾರದಲ್ಲಿ ರಸ್ತೆಯಲ್ಲಿನ ಮಣ್ಣನ್ನು ಸ್ವಚ್ಛ ಮಾಡಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಸುಧಾಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT