ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿ ಭಾರಿ ಚಳಿಗೆ ಜನರು ಗಡಗಡ!

ಜಿಲ್ಲೆಯಲ್ಲಿ ಶೀತ ಉಲ್ಪಣ: ರಾಜ್ಯದಲ್ಲಿಯೇ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲು
Last Updated 31 ಡಿಸೆಂಬರ್ 2017, 5:19 IST
ಅಕ್ಷರ ಗಾತ್ರ

ಬಾಗಲಕೋಟೆ: ಮಾಗಿ ಚಳಿಗೆ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಕನಿಷ್ಠ ಉಷ್ಣಾಂಶ 8 ಡಿಗ್ರಿ ದಾಖಲಾಗಿದೆ. ಇದರಿಂದ ರಾಜ್ಯದಲ್ಲಿಯೇ ಅತ್ಯಂತ ಕನಿಷ್ಠ ತಾಪಮಾನ ದಾಖಲಾದ ಜಿಲ್ಲೆ ಎಂಬ ಅಭಿದಾನಕ್ಕೆ ಬಾಗಲಕೋಟೆ ಪಾತ್ರವಾಗಿದೆ.

ಟೋಪಿ, ಸ್ವೆಟರ್‌, ಜರ್ಕಿನ್‌ ಸೇರಿದಂತೆ ಬೆಚ್ಚನೆಯ ಉಡುಪು ಇಲ್ಲದೇ ಹೊರಗೆ ಕಾಲಿಡದ ಪರಿಸ್ಥಿತಿ ಸೃಷ್ಟಿಯಾಗಿದ್ದು, ಹೊಸ ವರ್ಷದ ಹೊಸ್ತಿಲಲ್ಲಿನ ಮಾಗಿಯ ಕನಸುಗಳಿಗೆ ಕೌದಿ, ರಗ್ಗು, ಕಂಬಳಿ ಮೊದಲಾದ ಹೊದಿಕೆಗಳ ಆಪ್ತತೆ ಸಾಥ್ ನೀಡಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಡಿಸೆಂಬರ್ 27ರಂದು ಗುರುವಾರ ಕನಿಷ್ಠ ತಾಪಮಾನ 8.4 ಡಿಗ್ರಿ, 28 ಹಾಗೂ 29ರಂದು ಕನಿಷ್ಠ ತಾಪಮಾನ 8 ಡಿಗ್ರಿ ದಾಖಲಾಗಿದೆ ಎಂದು ವಿಜಯಪುರ ಜಿಲ್ಲೆಯ ಹಿಟ್ನಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಈ ವರ್ಷದ ಅತ್ಯಂತ ಕನಿಷ್ಠ ತಾಪಮಾನವಾಗಿದೆ.

ಹಾಲು ಹೆಪ್ಪುಗಟ್ಟುತ್ತಿಲ್ಲ:

‘ಮನೆಯಲ್ಲಿ ಸಂಗ್ರಹಿಸಿಟ್ಟ ಹಾಗೂ ಓವರ್‌ಹೆಡ್ ಟ್ಯಾಂಕ್‌ನ ನೀರು ಮುಂಜಾನೆ ಮುಟ್ಟಲು ಸಾಧ್ಯವಾಗುವುದಿಲ್ಲ. ರಾತ್ರಿ ಹಾಲು ಕಾಯಿಸಿ ಹೆಪ್ಪು ಹಾಕಿದರೆ ಚಳಿಗೆ ಅದು ಹುಳಿಯಾಗುತ್ತಿಲ್ಲ. ಹಾಗಾಗಿ ಮೊಸರು ಅಂಗಡಿಯಿಂದ ಖರೀದಿಸಿ ತರುತ್ತಿದ್ದೇವೆ. ಬಿಸಿ ಅನ್ನ, ರೊಟ್ಟಿ ಮಾಡಿಟ್ಟ ಕೆಲ ಹೊತ್ತಿಗೆ ತಣ್ಣಗಾಗಿ ತಿನ್ನಲು ಅಸಾಧ್ಯವಾಗುತ್ತಿದೆ. ಅದರೊಟ್ಟಿಗೆ ಆಹಾರ ಪದಾರ್ಥಗಳಿಗೆ ಇರುವೆ ಕಾಟ ಹೆಚ್ಚಿರುವುದು ತಲೆನೋವಾಗಿದೆ’ ಎಂದು ನವನಗರದ ಗೃಹಿಣಿ ಗಾಯತ್ರಿ ಅಂಬಿಗೇರ ಹೇಳುತ್ತಾರೆ.

ಶಾಲೆಗೆ ಕಳಿಸುವುದೇ ಸವಾಲು: ಪುಟ್ಟ ಮಕ್ಕಳು ಚಳಿಗೆ ಬೇಗ ಏಳುವುದಿಲ್ಲ. ದೊಡ್ಡವರಾದ ನಮಗೆ ಕಷ್ಟವಾಗುತ್ತದೆ. ಅವರನ್ನು ಹೇಗೆ ಎಬ್ಬಿಸುವುದು. ಖಾಸಗಿ ಶಾಲೆಗಳು ಮುಂಜಾನೆ ಬೇಗನೆ ಶುರುವಾಗುವುದರಿಂದ ಅವರನ್ನು ಎಬ್ಬಿಸಿ ಅಡುಗೆ ಮಾಡಿಕೊಟ್ಟು ಅವಧಿಯೊಳಗೆ ಶಾಲೆಗೆ ಕಳುಹಿಸುವುದೇ ನಮಗೆಲ್ಲಾ ದೊಡ್ಡ ಸವಾಲು ಎಂದು ಗಾಯತ್ರಿ ಅಳಲು ತೋಡಿಕೊಳ್ಳುತ್ತಾರೆ.

ಸಂಜೆ ಸೂರ್ಯ ಮರೆಯಾಗುತ್ತಿದ್ದಂತೆಯೇ ಮೈ ನಡುಗುವ ಚಳಿ ಶುರುವಾಗುತ್ತದೆ. ಹೊರಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೊತ್ತು ಮುಳುಗುತ್ತಿದ್ದಂತೆಯೇ ರಸ್ತೆಗಳು ನಿರ್ಜನವಾಗುತ್ತಿದ್ದು, ವಾಹನ ಸಂಚಾರ ವಿಳಂಬವಾಗುತ್ತಿದೆ. ಬೆಳಿಗ್ಗೆ 11ರ ನಂತರ ಸೂರ್ಯ ಪ್ರಖರಗೊಂಡರೂ ಚಳಿಯ ಮುಂದೆ ಪ್ರಭಾವಿ ಎನಿಸುವುದಿಲ್ಲ. ಚಳಿಯಿಂದ ರಾತ್ರಿ ಪಾಳಿ ಕೆಲಸಗಾರರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಕಾವಲುಗಾರರು, ಪೊಲೀಸರು, ಸಾರಿಗೆ ಸಂಸ್ಥೆ ಹಾಗೂ ಖಾಸಗಿ ವಾಹನ ಚಾಲಕರು, ನಸುಕಿನಲ್ಲಿ ಪತ್ರಿಕೆ, ಹಾಲು ವಿತರಿಸುವ ಹುಡುಗರು, ಪೌರ ಕಾರ್ಮಿಕರು, ವಾಯು ವಿಹಾರಿಗಳು, ಮುಂಜಾನೆ ಹೊಲಕ್ಕೆ ಹೊರಟವರು, ಹಳ್ಳಿಗಳಲ್ಲಿ ಹಾಲು ಹಿಂಡಿ ಡೇರಿಗೆ ಹಾಕಲು ಹೊರಟವರು ಚಳಿಗೆ ತತ್ತರಿಸಿದ್ದಾರೆ.

‘ಬಾಗಲಕೋಟೆಯಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಸಣ್ಣವರಾಗಿದ್ದಾಗ ನಾವು ಇಷ್ಟೊಂದು ಶೀತ ಕಂಡಿರಲೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಭಯ ಹುಟ್ಟಿಸುವಂತಿದೆ’ ಎಂದು ವಿದ್ಯಾಗಿರಿಯ ಹೋಟೆಲ್ ಕಾರ್ಮಿಕ ರಾಮಾಂಜನೇಯ ಮೇತ್ರಿ ಹೇಳುತ್ತಾರೆ.

‘ಆತಂಕ ಬೇಡ, ಆದಷ್ಟು ಬೆಚ್ಚಗಿರಿ’

‘ಜಿಲ್ಲೆಯಲ್ಲಿ ದಿನೇ ದಿನೇ ಚಳಿಯ ತೀವ್ರತೆ ಹೆಚ್ಚುತ್ತಿದೆ. ವೃದ್ಧರು, ಮಕ್ಕಳು, ಅಲರ್ಜಿ (ಅಸ್ತಮಾ) ಹಾಗೂ ಅಪೌಷ್ಟಿಕತೆಯಿಂದ ಬಳಲುವವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಸಲಹೆ ನೀಡುತ್ತಾರೆ.

ಅನಿವಾರ್ಯ ಪ್ರಸಂಗದ ಹೊರತಾಗಿ ಮಕ್ಕಳು ಹಾಗೂ ವಯೋವೃದ್ಧರು ಶೀತದಲ್ಲಿ ಹೊರಗೆ ಹೋಗುವುದು ಬೇಡ. ಸಾಧ್ಯವಾದಷ್ಟು ಬೆಚ್ಚನೆಯ ಉಡುಪು ಧರಿಸುವುದು ಒಳ್ಳೆಯದು. ಚಳಿಗೆ ವೈರಲ್ ಫಿವರ್, ನೆಗಡಿ, ತಲೆನೋವು, ಅಸ್ತಮಾ ಇರುವವರಿಗೆ ಕೆಮ್ಮು, ಉಸಿರಾಟದ ತೊಂದರೆ, ಮಂಡಿ ನೋವು, ಮುಖ ಬಿರಿಯುವುದು, ಕೈ–ಕಾಲು ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೆಚ್ಚಗಿರುವ, ಬಿಸಿಯಾದ ಊಟ ಮಾಡುವ, ಉಡುಪು ಧರಿಸುವ ಅಗತ್ಯವಿದೆ’ ಎಂದು ದೇಸಾಯಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT