ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕಾಂಗ್ರೆಸ್‌ ನೀಡಿದ್ದ ಭರವಸೆ ಈಡೇರಿಸಲು ಬಿಸಿಯೂಟ ನೌಕರರ ಒತ್ತಾಯ

Published 3 ಫೆಬ್ರುವರಿ 2024, 16:14 IST
Last Updated 3 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ಬಳ್ಳಾರಿ:  ಬಿಸಿಯೂಟ ನೌಕರರ ಗೌರವ ಧನವನ್ನು ₹6,000ಕ್ಕೆ ಏರಿಸುವುದಾಗಿ ಹೇಳಿದ್ದ ಸರ್ಕಾರ ತನ್ನ ಭರವಸೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಎಐಯುಟಿಯುಸಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಸಂಘ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿತು. 

‘ವರ್ಷದ 12 ತಿಂಗಳೂ ಗೌರವ ಧನ ನೀಡಬೇಕು, ಬಿಸಿಯೂಟ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಕಾ.ಎ.ಶಾಂತಾ ಮಾತನಾಡಿ, ‘ಬಿಸಿಯೂಟ ನೌಕರರು ಬಡ ಕುಟುಂಬದವರು, ಒಂಟಿ ಮಹಿಳೆಯರು, ವಿಧವೆಯರು ಆಗಿದ್ದಾರೆ. ಗೌರವ ಧನವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರಿಗೆ ದೊರೆಯುತ್ತಿರುವ ಗೌರವ ಧನ ಕೇವಲ ₹3,600. ಇಂದಿನ ದುಬಾರಿ ದಿನಗಳಲ್ಲಿ ಇದು ವೇತನವೇ‘ ಎಂದು ಪ್ರಶ್ನಿಸಿದರು. 

ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ₹1,000 ಹೆಚ್ಚಿಸುವ ಭರವಸೆ ನೀಡಿತಾದರೂ ಈಡೇರಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಬಿಸಿಯೂಟ ನೌಕರರ ಗೌರವಧನವನ್ನು ₹6,000ಕ್ಕೆ ಹೆಚ್ಚಿಸುವುದಾಗಿ ಹೇಳಿತು. ಅದೂ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್.ಎನ್ ಮಾತನಾಡಿ, ‘ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಳ್ಳಬೇಕು, ಅವರ ಹುದ್ದೆಯನ್ನು ಖಾಯಂಗೊಳಿಸಬೇಕು. ಕಾರ್ಮಿಕರೆಂದು ಪರಿಗಣಿಸಿ ಎಲ್ಲ ಸವಲತ್ತು ಒದಗಿಸಬೇಕು’ ಎಂದು ಆಗ್ರಹಿಸಿದರು. 

ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಮುಖಂಡರಾದ ಗೀತಾ, ಮಂಜುಳಾ, ಬ್ಯಾಲಿಚಿಂತೆ ನಾಗರತ್ನ, ಲಕ್ಷ್ಮೀ, ಅನಸೂಯಮ್ಮ ವಿವಿಧ ಶಾಲೆಗಳಿಂದ ಬಂದ ಬಿಸಿಯೂಟ ನೌಕರರು ಹೋರಾಟದಲ್ಲಿದ್ದರು. 

ಹಕ್ಕೊತ್ತಾಯಗಳು...

1. ಮಾಸಿಕ ಗೌರವಧನವನ್ನು ₹6000ಕ್ಕೆ ಏರಿಸಲು ಈ ಸಲದ ಬಜೆಟ್‌ನಲ್ಲಿ ನಿರ್ಧಾರ ಕೈಗೊಳ್ಳಬೇಕು.  2.ಬಿಸಿಯೂಟ ಕಾರ್ಯಕರ್ತೆಯರಿಗೆ ವರ್ಷದಲ್ಲಿ 12 ತಿಂಗಳೂ ಗೌರವಧನ ನೀಡಬೇಕು. 3. ಬಾಕಿ ಉಳಿದಿರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.  4. ಇಪಿಎಫ್ ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು. 5.ಶಾಸನಬದ್ಧ ಸೌಕರ್ಯಗಳಾದ ವಾರದ ರಜೆ ರಾಷ್ಟ್ರೀಯ ಹಬ್ಬದ ರಜೆ ಹೆರಿಗೆ ರಜೆಗಳನ್ನು ನೀಡಬೇಕು. ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ದುಪ್ಪಟ್ಟು ವೇತನ ನೀಡಬೇಕು. 6.ಮಾಸಿಕ ವೇತನವನ್ನು ಪ್ರತಿ ತಿಂಗಳು 5ರ ಒಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ವೇತನ ಚೀಟಿ ನೀಡಬೇಕು. 7.ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ ನಿವೃತ್ತಿ ವೇತನಕ್ಕೆ ಒಳಪಡಿಸಿ ಅಲ್ಲಿಯವರೆಗೆ ₹5 ಲಕ್ಷ ಇಡು ಗಂಟು ನೀಡಬೇಕು ಮತ್ತು ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು. 8.ಕಾರ್ಮಿಕರಿಗೆ ಹತ್ತಿ ಬಟ್ಟೆಯ ಸಮವಸ್ತ್ರ ಹಾಗೂ ಕೈಗವಸು ತಲೆಯ ಸ್ಕಾರ್ಫ್ ಏಪ್ರಾನ್ ಗಳನ್ನು ಖಾತ್ರಿಪಡಿಸಬೇಕು. ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು.  9.ಪ್ರತಿ 3 ತಿಂಗಳಿಗೊಮ್ಮೆ ಸಂಘದ ಪದಾಧಿಕಾರಿಗಳನ್ನೊಳಗೊಂಡು ಕುಂದು ಕೊರತೆ ಸಭೆ ನಡೆಸಿ ತೀರ್ಮಾನ ಕೈಗೊಂಡಿರುವುದರ ಕುರಿತು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT