ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ: ನಮ್ಮ ಹೋರಾಟ ಸಂಸತ್‌ ತಲುಪಬೇಕು- ದೇವದಾಸ್‌ ಮನದಾಳ

ಬಳ್ಳಾರಿ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎ.ದೇವದಾಸ್‌ ಮನದಾಳ
Published 3 ಮೇ 2024, 5:27 IST
Last Updated 3 ಮೇ 2024, 5:27 IST
ಅಕ್ಷರ ಗಾತ್ರ

ಬಳ್ಳಾರಿ: ಜನರೊಂದಿಗಿದ್ದು ನಿತ್ಯ ನಡೆಸುವ ಹೋರಾಟವನ್ನು ಸಂಸತ್ತಿನ ಒಳಗೆ ಒಯ್ಯಬೇಕು ಎಂಬುದು ಬಳ್ಳಾರಿ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ ಎ.ದೇವದಾಸ್‌ ಅವರ ಬಯಕೆ. 

ಎರಡು ಪ್ರಬಲ ರಾಜಕೀಯ ಪಕ್ಷಗಳ ನಡುವೆ ಸೆಣಸುತ್ತಿರುವ ಅವರು ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವ ಬಗೆಯನ್ನೂ ವಿವರಿಸಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.  

ಪ್ರ

ಈ ಚುನಾವಣೆಯಲ್ಲಿ ಜನರ ಸ್ಪಂದನೆ ಹೇಗಿದೆ? 

ಕ್ಷೇತ್ರದಾದ್ಯಂತ ಓಡಾಡಿದ್ದೇನೆ. ರಾಜಕೀಯದ ಬಗ್ಗೆ ಜನರಲ್ಲಿ ಬೇಸರದ ಭಾವನೆ ಇದೆ. ಆದರೆ, ಲೋಕಸಭಾ ಚುನಾವಣೆ ಜನರ ಭವಿಷ್ಯ ನಿರ್ಧರಿಸುತ್ತದೆ ಎಂದು ನಾವು ಜನರಿಗೆ ಮನದಟ್ಟು ಮಾಡಿದ್ದೇವೆ. ನಮ್ಮಲ್ಲಿ ಹೊಸತನ ನೋಡಿದ್ದಾರೆ. ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಳ್ಳುತ್ತಿದ್ದಾರೆ. 

ಪ್ರ

ಎರಡು ಪ್ರಬಲ ರಾಷ್ಟ್ರೀಯ ರಾಷ್ಟ್ರೀಯ ಪಕ್ಷಗಳ ನಡುವೆ ಸೆಣಸುತ್ತಿದ್ದೀರಿ. ನಿಮಗೆ ಏಕೆ ಮತ ನೀಡಬೇಕು?

‘ಎನ್‌ಡಿಎ’, ‘ಇಂಡಿಯಾ’ ಎಂದು ದೇಶದಲ್ಲಿ ಎರಡು ರಾಜಕೀಯ ಒಕ್ಕೂಟಗಳನ್ನು ಮಾಡಿಕೊಳ್ಳಲಾಗಿದೆ. ಇವೆರಡೂ ಜನಪರವಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಬಂಡವಾಳಶಾಹಿಗಳ ಪರ ಇವೆ. ‌ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷ 40 ವರ್ಷಗಳಿಂದ ಜನರ ನಡುವೆ ಇದ್ದು ಕೆಲಸ ಮಾಡಿದೆ. ಸಮಸ್ಯೆಗಳ ವಿರುದ್ಧ ನಿತ್ಯ ಹೋರಾಟ ಮಾಡಿದೆ. ನಿಮ್ಮಂಥವರು ಗೆಲ್ಲಬೇಕು ಎಂದು ಜನರೇ ಹೇಳುತ್ತಿದ್ದಾರೆ. 

ಪ್ರ

ಎಡಪಕ್ಷಗಳಲ್ಲಿ ಒಗ್ಗಟ್ಟಿಲ್ಲ ಎಂಬ ಮಾತಿದೆ. ಇದರ ಬಗ್ಗೆ ಏನು ಹೇಳುತ್ತೀರಿ? 

ಎಡಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸಲು ನಾವು ಪ್ರಯತ್ನಿಸಿದೆವು. ಪರ್ಯಾಯ ರಾಜಕೀಯ ಮಾಡಬೇಕು ಎಂದು ನಾವು ಬಯಸಿದೆವು. ಇದೇ ವಿಚಾರವನ್ನು ಸಿಪಿಎಂ, ಸಿಪಿಐ ಪಕ್ಷಗಳಿಗೆ ನಾವು ತಿಳಿಸಿದ್ದಾಗಿದೆ. ಆದರೆ, ನಮ್ಮ ಮುಂದಿರುವ ರಾಜಕೀಯ ರಾಕ್ಷಸನನ್ನು ಎದುರಿಸಲು ನಮ್ಮಲ್ಲಿ ಶಕ್ತಿ ಇಲ್ಲ ಎಂದು ಅವರು ಕೈಚೆಲ್ಲಿದರು. ನಾವು ಕಾಂಗ್ರೆಸ್‌ ಜತೆ ಇರುತ್ತೇವೆ ಎಂದು ಹೇಳಿದರು. ಅವರ ನಿಲುವು ನಮಗೆ ಒಪ್ಪಿಗೆಯಾಗಲಿಲ್ಲ. ನಮ್ಮದೇ ನೈಜ ಕಮ್ಯುನಿಸ್ಟ್‌ ಪಕ್ಷ. 

ಪ್ರ

ಬಳ್ಳಾರಿ ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳೇನು? 

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನ ಆಗಿಲ್ಲ. ಇಲ್ಲಿ ಒಳಚರಂಡಿ ವ್ಯವಸ್ಥೆಗಳು ಸರಿ ಇಲ್ಲ. ಬಳ್ಳಾರಿ ನಗರಕ್ಕೆ ಬೈಪಾಸ್‌ ರಸ್ತೆ ಆಗಬೇಕು. ಸುಧಾ ಕ್ರಾಸ್‌ ಬಳಿ ಮೇಲ್ಸೇತುವೆ ಆಗಬೇಕು. ಬಳ್ಳಾರಿ, ವಿಜಯನಗರ ಒಣ ಬೇಸಾಯದ ಜಿಲ್ಲೆಗಳು. ತುಂಗಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಯಾಗುತ್ತಿಲ್ಲ. ಸಮಾನಂತರ ಜಲಾಶಯ ಕಟ್ಟಬೇಕೆಂಬ ಕೂಗು ಹಾಗೇ ಇದೆ.

ಪ್ರ

ಸಂಸದರಾಗಿ ಆಯ್ಕೆಯಾದರೆ ಮಾಡಲೇಬೇಕು ಎಂದುಕೊಂಡಿರುವ ಕೆಲಸಗಳೇನು?

ಪಶ್ಚಿಮ ಬಂಗಾಳದ ಜಯನಗರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ನಮ್ಮ ಪಕ್ಷದ ತರುಣ್‌ ಮಂಡಲ್‌ ಅವರು ಕ್ಷೇತ್ರವನ್ನು ಮಾದರಿಯಾಗಿ ಮಾಡಿದ್ದಾರೆ. ಸಂಸದರ ವೇತನ ಹೆಚ್ಚಳವನ್ನು ವಿರೋಧಿಸಿದ ಏಕೈಕ ಸಂಸದ ಅವರು. ಆದರೂ ವೇತನ ಹೆಚ್ಚಾಯಿತು. ಆ ದುಡ್ಡನ್ನು ಅವರು ಕ್ಷೇತ್ರದ ಮಕ್ಕಳಿಗೆ ವಿನಿಯೋಗಿಸಿದರು. ಸ್ಕಾಲರ್‌ಶಿಪ್‌ ನೀಡಿದರು. ನಾನು ಗೆದ್ದರೆ ಮಕ್ಕಳಿಗೆ ಸ್ಕಾಲರ್‌ಶಿಪ್‌ ಒದಗಿಸುತ್ತೇನೆ. ಶಾಲೆಗಳ ಅಭಿವೃದ್ಧಿಯಾಗಬೇಕು. ಆರೋಗ್ಯಕ್ಕೆ ಆದ್ಯತೆ ನೀಡುತ್ತೇನೆ. ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸಿಕೊಡುತ್ತೇನೆ. 

ಪ್ರ

ಕ್ಷೇತ್ರದ ಮತದಾರರಿಗೆ ಏನಾದರೂ ಹೇಳುವುದಿದೆಯೇ?

ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷ ಈಗಾಗಲೇ ಜನರ ಜತೆಗಿದ್ದು ಹೋರಾಟಗಳನ್ನು ನಡೆಸಿದೆ. ಬೆಳಗ್ಗೆ ಎದ್ದರೆ ಜನರ ಜತೆ ಇರುವವರು ನಾವು. ಜನ ನಮ್ಮನ್ನು ಗೆಲ್ಲಿಸಿದರೆ ಇಷ್ಟು ದಿನ ಇಲ್ಲಿ ನಡೆದ ಹೋರಾಟ ಸಂಸತ್‌ ಪ್ರವೇಶಿಸಲಿದೆ. ಅದಕ್ಕಾಗಿ ನಮ್ಮನ್ನು ಬೆಂಬಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT