ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳದ ಮರಳಿಗೆ ಮುಗಿಬಿದ್ದ ದಂಧೆಕೋರರು

Last Updated 21 ಸೆಪ್ಟೆಂಬರ್ 2021, 14:01 IST
ಅಕ್ಷರ ಗಾತ್ರ

ಹೂವಿನಹಡಗಲಿ: ತುಂಗಭದ್ರಾ ನದಿ ತೀರದಲ್ಲಿ ಮರಳು ಅಕ್ರಮ ಚಟುವಟಿಕೆಗೆ ಒಂದಿಷ್ಟು ಕಡಿವಾಣ ಬೀಳುತ್ತಿದ್ದಂತೆ ದಂಧೆಕೋರರು ತಾಲ್ಲೂಕಿನ ಪ್ರಮುಖ ಹಳ್ಳಗಳನ್ನು ಬಗೆಯಲು ಶುರು ಮಾಡಿದ್ದಾರೆ.

ಗ್ರಾಮೀಣ ಭಾಗದ ಬಡ ಜನರು, ವಸತಿ ಯೋಜನೆ ಫಲಾನುಭವಿಗಳು ಮನೆ, ಶೌಚಾಲಯ ನಿರ್ಮಾಣ ಹಾಗೂ ಸಣ್ಣ ಪುಟ್ಟ ಕಟ್ಟಡ ನಿರ್ಮಾಣ ಕೆಲಸಗಳಿಗೆ ಈವರೆಗೆ ಹಳ್ಳದ ಮರಳು ಬಳಕೆ ಮಾಡುತ್ತಿದ್ದರು. ಮಾನವೀಯತೆ ನೆಲೆಯಲ್ಲಿ ಇದನ್ನು ಯಾರೂ ಅಡ್ಡಿಪಡಿಸುತ್ತಿರಲಿಲ್ಲ.

ಆದರೆ, ಇತ್ತೀಚಿಗೆ ಕೆಲವರು ಹಳ್ಳವನ್ನು ಬಗೆದು, ಟ್ರ್ಯಾಕ್ಟರ್, ಲಾರಿಗಳಲ್ಲಿ ಮರಳು ತುಂಬಿ ದುಬಾರಿ ಬೆಲೆಗೆ ಮಾರಾಟ ಮಾಡತೊಡಗಿದ್ದಾರೆ. ಮಾನ್ಯರಮಸಲವಾಡದ ಕಲ್ಲು ಹಳ್ಳ, ಇಟ್ಟಿಗಿ-ಕೊಟ್ಟೂರು ಮಾರ್ಗದಲ್ಲಿರುವ ಅಲಬೂರು ಹಳ್ಳ ಹಾಗೂ ತಾಲ್ಲೂಕಿನ ಇತರೆ ಪ್ರಮುಖ ಹಳ್ಳಗಳಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆದಿದೆ. ಸ್ಥಳೀಯ ಸಂಸ್ಥೆಗಾಗಲೀ, ಸರ್ಕಾರಕ್ಕಾಗಲೀ ಯಾವುದೇ ರಾಜಸ್ವ ಪಾವತಿಸದೇ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದ ಹೊರ ವಲಯದಲ್ಲಿರುವ ಕಲ್ಲು ಹಳ್ಳದಿಂದ ಈಚೆಗೆ ಟ್ರ್ಯಾಕ್ಟರ್ ನಲ್ಲಿ ಮರಳು ಸಾಗಿಸುತ್ತಿರುವಾಗ ಹಿರೇಹಡಗಲಿ ಪಿಎಸ್ಐ ದಾದಾವಲಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಟ್ರ್ಯಾಕ್ಟರ್ ತಡೆದಿದ್ದಾರೆ. ಆಗ ಟ್ರ್ಯಾಕ್ಟರ್ ಬಿಡುವಂತೆ ರಾಜಕೀಯ ಪ್ರಭಾವ ಬೀರಲು ಯತ್ನಿಸಿದ ಗ್ರಾಮದ ವ್ಯಕ್ತಿ ಹಾಗೂ ಪಿಎಸ್ಐ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ.

‘ಹಳ್ಳದ ಮರಳು ಮಾರಿಕೊಳ್ಳುವವರ ಟ್ರ್ಯಾಕ್ಟರ್ ಗಳನ್ನು ಸುಮ್ಮನೆ ಬಿಡುತ್ತೀರಿ, ಮನೆ, ಶೌಚಾಲಯ ಕಟ್ಟಿಕೊಳ್ಳಲು ಮರಳು ಕೊಂಡೊಯ್ಯುವವರ ಮೇಲೆ ಕ್ರಮ ಜರುಗಿಸುತ್ತೀರಿ. ಇದ್ಯಾವ ನ್ಯಾಯ?’ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ಗ್ರಾಮಸ್ಥರು ಪೊಲೀಸರ ನಡುವೆ ಕೆಲವೊತ್ತು ಮಾತಿನ ಚಕಮಕಿ ನಡೆದಿದೆ. ಸಿಪಿಐ ರಮೇಶ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ, ಮರಳು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ಅನ್ನು ಅಲ್ಲಿಂದ ಬಿಡಿಸಿದ್ದಾರೆ. ನಂತರ ಮರಳು ಸಾಗಣೆ ಮಾಡಿದ ಆರೋಪಿ ಡಂಬಳ ಬಸವರಾಜ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿಗೆ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT