ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಸವರ್ಣೀಯರೇ ಭಕ್ತರು, ದಲಿತರೇ ಅರ್ಚಕರು

ಚಿಮ್ಮನಹಳ್ಳಿ ಗ್ರಾಮ: ಚಿಮ್ಮನಹಳ್ಳಿ ದುರ್ಗಾಂಬಿಕೆ ದೇವಸ್ಥಾನ
ಸಿ.ಶಿವಾನಂದ
Published 10 ಫೆಬ್ರುವರಿ 2024, 19:31 IST
Last Updated 10 ಫೆಬ್ರುವರಿ 2024, 19:31 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ): ತಾಲ್ಲೂಕಿನ ಚಿಮ್ಮನಹಳ್ಳಿ ಗ್ರಾಮದ ಐತಿಹಾಸಿಕ ದುರ್ಗಾಂಬಿಕೆ, ಮರಿಯಮ್ಮದೇವಿ ಮತ್ತು ಸಮಾದೆಮ್ಮ ದೇವಸ್ಥಾನದಲ್ಲಿ 200 ವರ್ಷಗಳಿಂದ ದಲಿತರೇ ಅರ್ಚಕರಾಗಿದ್ದಾರೆ. ಭಕ್ತರಲ್ಲಿ ಬಹುತೇಕ ಮಂದಿ ಸವರ್ಣೀಯರು ಮತ್ತು ಮುಸ್ಲಿಮರು ಇದ್ದಾರೆ

ದಾವಣಗೆರೆ, ಗದಗ, ಕೊಪ್ಪಳ, ಬಳ್ಳಾರಿ, ಜಗಳೂರು ಮತ್ತು ಆಂಧ್ರಪ್ರದೇಶದ ರಾಯದುರ್ಗದಿಂದ ದೇವಸ್ಥಾನಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಬರುತ್ತಾರೆ. ಜಾತ್ರೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತವೆ.

ವಂಶಪಾರಂಪಾರ್ಯವಾಗಿ ಪೂಜಾರಿಗಳಾದ ಅಸ್ಪೃಶ್ಯ ದಲಿತರ ನಾಲ್ಕನೇ ತಲೆಮಾರು ಪೂಜಾ ಕೈಂಕರ್ಯದಲ್ಲಿ ತೊಡಗಿದೆ. ಅವಿಭಕ್ತ ಕುಟುಂಬದ ಪೂಜಾರಿ ಮನೆತನದ ಧರ್ಮಕರ್ತರಾದ ಭರಮಪ್ಪ, ಅರ್ಜುನಪ್ಪ, ನಾಗಪ್ಪ, ಪುಷ್ಪಾ, ನಾಗರಾಜ ಮತ್ತು ಸಿದ್ದಪ್ಪ ಅವರು ದೇವಸ್ಥಾನದಲ್ಲಿನ ಧಾರ್ಮಿಕ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.  ಅರ್ಚಕ ಕುಟುಂಬದ ಎಲ್ಲರೂ ಸಸ್ಯಹಾರಿಗಳು. ದೇವರಿಗೆ ಹುರುಳಿ ಹೋಳಿಗೆ ನೈವೇದ್ಯ ನೀಡುವುದು ಇಲ್ಲಿನ ಸಂಪ್ರದಾಯ.

‘ದೇವಸ್ಥಾನಕ್ಕೆ ವೀರಶೈವರು, ಲಿಂಗಾಯತರು, ಕುರುಬರು, ವಾಲ್ಮೀಕಿ, ಉಪ್ಪಾರರು, ಗಂಗಾಮತಸ್ಥರು ಸೇರಿ ಎಲ್ಲ ಸವರ್ಣೀಯ ಜನಾಂಗದವರು ಬರುತ್ತಾರೆ, ಭಕ್ತಿಭಾವದಿಂದ ಪಾಲ್ಗೊಂಡು ಅರ್ಚಕರಿಗೆ ನಮಿಸುತ್ತಾರೆ. ಇಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರೂ ಪಾಲ್ಗೊಳ್ಳುತ್ತಾರೆ’ ಎಂದು ಅರ್ಚಕ ಪೂಜಾರಿ ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವಸ್ಥಾನದ ಪಟ್ಟದ ಕುದುರೆ ಇದೆ, ಗೌರಿ ಹುಣ್ಣಿಮೆಯ ಮುಂಚೆ ಬಳ್ಳಾರಿ-ವಿಜಯನಗರ ಜಿಲ್ಲೆಗಳ 36 ಗ್ರಾಮಗಳಲ್ಲಿ ಸಂಚರಿಸುತ್ತದೆ. ಭಕ್ತರ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರ ಅನುಕೂಲಕ್ಕೆ ಸರ್ಕಾರದಿಂದ ಸಮುದಾಯ ಭವನ ನಿರ್ಮಿಸಿಕೊಡಬೇಕಿದೆ. ದೇವಸ್ಥಾನದ ಕಟ್ಟಡ ಹಳೆಯದಾಗಿದ್ದು ನವೀಕರಣ ಆಗಬೇಕಿದೆ’ ಎಂದರು.

ಫೆಬ್ರುವರಿ 19ರಂದು ದುರ್ಗಾಂಬಿಕೆ ದೇವಿಯ ಕಲಶ ಸ್ಥಾಪನೆ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸುವರು.

–ಪೂಜಾರಿ ಸಿದ್ದಪ್ಪ ಅರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT