ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎದುರಾಳಿಗಳನ್ನು ಹತ್ತಿಕ್ಕುತ್ತಿರುವ ಪ್ರಧಾನಿ ಮೋದಿ: ಎಎಪಿ ಆರೋಪ

Published 31 ಮಾರ್ಚ್ 2024, 14:12 IST
Last Updated 31 ಮಾರ್ಚ್ 2024, 14:12 IST
ಅಕ್ಷರ ಗಾತ್ರ

ಬಳ್ಳಾರಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆ. ಭವಿಷ್ಯದಲ್ಲಿ ತಮಗೆ ಎದುರಾಳಿಯಾಗಬಹುದಾದ ರಾಜಕೀಯ ಪಕ್ಷಗಳನ್ನು ಹಾಗೂ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಕುತಂತ್ರದಿಂದ ಹತ್ತಿಕ್ಕುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ. 

ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಅರವಿಂದ ಕೇಜ್ರಿವಾಲ್‌ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮತ್ತು ಬಿಜೆಪಿ ನಡೆ ವಿರೋಧಿಸಿ ಬಳ್ಳಾರಿಯ ಸುಧಾ ಸರ್ಕಲ್ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಇಂಡಿಯಾ ಒಕ್ಕೂಟದಿಂದ ಭಾನುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ನಂತರ, ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಸಲ್ಲಿಸಿದರು. 

‘ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಸೇರಿದಂತೆ ಎಲ್ಲ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೂ ಮೂಗುದಾರ ತೊಡಿಸಿ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಇದು ಅತ್ಯಂತ ಕಳವಳಕಾರಿ ವಿಚಾರ‘ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.  

‘ಅಬಕಾರಿ ನೀತಿ ಹಗರಣಕ್ಕೆ ಸಂಬಂಧಪಟ್ಟಂತೆ ಕಳೆದ ಎರಡು ವರ್ಷಗಳಲ್ಲಿ ಸುಮಾರು 800 ಅಧಿಕಾರಿಗಳು ನಿರಂತರವಾಗಿ ತನಿಖೆ ನಡೆಸಿದ್ದಾರೆ. 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಆದರೆ ಇದುವರೆಗೆ ಅವರಿಗೆ ಅಕ್ರಮ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಆದರೂ ದೆಹಲಿ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಬಂಧಿಸಲಾಗಿದೆ. ಇದು ದೆಹಲಿ ಸರ್ಕಾರವನ್ನು ಕಟ್ಟಿಹಾಕುವ ಪ್ರಯತ್ನ ಎಂಬುದು ಜನಸಾಮಾನ್ಯರಿಗೂ ಅರಿವಾಗುತ್ತಿದೆ‘ ಎಂದು ಅದರಲ್ಲಿ ಹೇಳಲಾಗಿದೆ.  

ತಪ್ಪಿತಸ್ಥರನ್ನು ಬಿಟ್ಟು ನಿರಪರಾಧಿಗಳ ಮೇಲೆ ಆರೋಪ ಹೊರಿಸಿ ಬಂಧಿಸುತ್ತಿರುವುದು ಕಳವಳಕಾರಿ.ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು. ಪ‍್ರಜಾಪ್ರಭುತ್ವ ಉಳಿಸಬೇಕು ಎಂದು ಮನವಿ ಮಾಡಲಾಗಿದೆ. 

ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ನಾರಾ ಪ್ರತಾಪ್ ರೆಡ್ಡಿ, ಕೊರ್ಲಗುಂದಿ ದೊಡ್ಡಕೇಶವ ರೆಡ್ಡಿ, ಪದ್ಮಾವತಿ ಆಚಾರ್, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT