ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ದಶಕಗಳಿಂದ ಹದಗೆಟ್ಟ ನಾರಾಯಣಪುರ ಗ್ರಾಮದ ರಸ್ತೆ: ಸಂಚಾರ ಸಂಕಷ್ಟ

Published 22 ಸೆಪ್ಟೆಂಬರ್ 2023, 3:19 IST
Last Updated 22 ಸೆಪ್ಟೆಂಬರ್ 2023, 3:19 IST
ಅಕ್ಷರ ಗಾತ್ರ

–ಯರ‍್ರಿಸ್ವಾಮಿ ಬಿ.

ತೋರಣಗಲ್ಲು: ಹೋಬಳಿಯ ಯು.ರಾಜಾಪುರ ಗ್ರಾಮದ ಕ್ರಾಸ್‌ನಿಂದ ನಾರಾಯಣಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸುಮಾರು 30ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಇದುವರೆಗೂ ರಸ್ತೆಯಾಗದ ಕಾರಣ ವಾಹನ ಸವಾರರು ಮತ್ತು ಜನರು ತುಂಬಾ ಪ್ರಾಯಾಸದಿಂದ ಸಂಚರಿಸುತ್ತಿದ್ದಾರೆ.

5.5 ಕಿಮೀ ಉದ್ದದ ರಸ್ತೆಯು ಬಹುತೇಕ ಗುಡ್ಡಗಾಡು ರಸ್ತೆಯಾಗಿದೆ. ನಿತ್ಯ ನೂರಾರು ಕಬ್ಬಿಣ ಅದಿರು ಲಾರಿಗಳು ಸಂಚರಿಸುವ ಪ್ರಮುಖ ಗಣಿಗಾರಿಕೆಯ ರಸ್ತೆಯಾಗಿದೆ. ಈ ಗ್ರಾಮೀಣ ರಸ್ತೆಯು ಅದಿರು ಲಾರಿಗಳ ಅಬ್ಬರಕ್ಕೆ ನಲುಗಿದ್ದು, ರಸ್ತೆಯುದ್ದಕ್ಕೂ ಭಾರಿ ಗಾತ್ರದ ಗುಂಡಿಗಳಿವೆ. ಎದುರಿಗೆ ಬರುವ ವಾಹನಗಳು ಕಾಣದಂತೆ ದಟ್ಟವಾದ ಕೆಂಪು ದೂಳು ಆವರಿಸಿಕೊಳ್ಳುವುದರಿಂದ ಜನರು ರೋಸಿ ಹೋಗಿದ್ದಾರೆ.

ಮೆಟ್ರಿಕಿ, ವಿಠಲಾಪುರ ಹಾಗೂ ಯು.ರಾಜಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳ ಜನರಿಗೆ ಸಂಡೂರು ತಾಲ್ಲೂಕು ಕೇಂದ್ರಕ್ಕೆ ತೆರಳಲು ಈ ರಸ್ತೆಯು ಬಹಳ ಅನುಕೂಲವಾಗಿದೆ. ನೂತನ ರಸ್ತೆ ಕಾಮಗಾರಿ ಹಮ್ಮಿಕೊಳ್ಳುವಂತೆ ಹಲವಾರು ಬಾರಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗುತ್ತಿಲ್ಲ ಎಂದು ಈ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮಾಳಾಪುರ ಗ್ರಾಮದಿಂದ ಕೆರೆರಾಂಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಐದು ತಿಂಗಳ ಹಿಂದೆ 2 ಕಿಮೀ ವರೆಗೆ ಡಾಂಬರಿಕರಣ ರಸ್ತೆ ಮಾಡಿ, ಉಳಿದ 1 ಕಿಮೀ ರಸ್ತೆಗೆ ಎರಡು ಬದಿಯಲ್ಲಿ ಜಲ್ಲಿಕಲ್ಲು ಹಾಕಿ ಬಿಟ್ಟಿದ್ದರಿಂದ ಜನರು ನಿತ್ಯ ಸಂಚಾರಕ್ಕಾಗಿ ಪರದಾಡುವುದಲ್ಲದೆ, ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಬನ್ನಿಹಟ್ಟಿ ಗ್ರಾಮದ ಖನಿಜ ತನಿಖಾ ಠಾಣೆಯಿಂದ ವಡ್ಡು ಗ್ರಾಮದ ಮೂಲಕ ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದವರೆಗೂ 2017ರಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 6.4 ಕಿಮೀ ರಸ್ತೆಯನ್ನು ₹33.99 ಕೋಟಿ ವೆಚ್ಚದಲ್ಲಿ ನೂತನ ಬೈಪಾಸ್ ರಸ್ತೆಯನ್ನು ಆರಂಭಿಸಲಾಗಿದೆ. ಕೇವಲ 4 ಕಿಮೀ ರಸ್ತೆಯನ್ನು ಮಾತ್ರ ನಿರ್ಮಿಸಲಾಗಿದ್ದು ಇನ್ನೂಳಿದ ರಸ್ತೆಯ ಕಾಮಗಾರಿಯು 5 ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಹೊಸದರೋಜಿ, ತೋರಣಗಲ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿಮೀ ನೂತನ ರಸ್ತೆ ಕಾಮಗಾರಿಯನ್ನು ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ ₹4.40 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ರೈಲ್ವೆ ಇಲಾಖೆಯ ತಾಂತ್ರಿಕ ತೊಂದರೆಯಿಂದ ಸುಮಾರು ಆರು ತಿಂಗಳಿಂದ ರಸ್ತೆ ಕಾಮಗಾರಿಯು ಸ್ಥಗಿತಗೊಂಡಿದೆ.

ಹೊಸಮಾದಾಪುರ ಗ್ರಾಮದಿಂದ ಹಳೆ ಮಾದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲುವೆಯ ಅಂಚಿನ 1ಕಿ.ಮೀ. ರಸ್ತೆಯು ದುರಸ್ತಿಗೊಂಡಿದ್ದು, ರೈತರ ಅನುಕೂಲಕ್ಕಾಗಿ ನೂತನ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎನ್ನುವುದು ಜನರ ಒತ್ತಾಯ.

ಸಂಡೂರು ಕ್ಷೇತ್ರದ ವ್ಯಾಪ್ತಿಯ ಕುಡತಿನಿಯ ಗೌತಮನಗರ ದಿಂದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ತೆರಳುವ 2 ಕಿಮೀ ರಸ್ತೆಯು ಹದಗೆಟ್ಟು ಗುಂಡಿಗಳಿಂದ ಆವೃತವಾಗಿದೆ. ಇದೇ ಮಾರ್ಗದಲ್ಲಿ ಬಿಟಿಪಿಎಸ್ ನ ರೈಲ್ವೆ ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಸಣ್ಣ ಮಳೆಗೂ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಜನರ ಸಂಚಾರಕ್ಕೆ ಕಂಟಕವಾಗಿದೆ.

‘ತಾಲ್ಲೂಕಿನ ಬನ್ನಿಹಟ್ಟಿ, ತಾರಾನಗರ, ಧರ್ಮಾಪುರ ಹಾಗೂ ರಾಮಘಡ ಸೇರಿದಂತೆ ಒಟ್ಟು ಆರು ಬೈಪಾಸ್ ರಸ್ತೆಗಳನ್ನು ನಿರ್ಮಿಸಲು ಸರ್ಕಾದಿಂದ ಅನುದಾನ ಬಿಡುಗಡೆಯಾಗಿದೆ. ಇನ್ನೂಳಿದ ನೂತನ ರಸ್ತೆಗಳನ್ನು ನಿರ್ಮಿಸಲು ಸೂಕ್ತ ಕ್ರಮವಹಿಸಲಾಗಿದೆ’ ಎಂದು ಸಂಡೂರು ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಎಇಇ ಕೃಷ್ಣನಾಯ್ಕ್ ಪ್ರತಿಕ್ರಿಯಿಸಿದರು.

ತೋರಣಗಲ್ಲು ಹೋಬಳಿಯ ಮಾಳಾಪುರ ಗ್ರಾಮದಲ್ಲಿ ಐದು ತಿಂಗಳಿಂದ ಸ್ಥಗಿತಗೊಂಡ ರಸ್ತೆ ಕಾಮಗಾರಿ
ತೋರಣಗಲ್ಲು ಹೋಬಳಿಯ ಮಾಳಾಪುರ ಗ್ರಾಮದಲ್ಲಿ ಐದು ತಿಂಗಳಿಂದ ಸ್ಥಗಿತಗೊಂಡ ರಸ್ತೆ ಕಾಮಗಾರಿ
ಸಂಡೂರು ತಾಲ್ಲೂಕಿನಲ್ಲಿ ಬಹುಪಾಲ ರಸ್ತೆಗಳು ಅಭಿವೃದ್ಧಿ ಆಗಿರುವುದು ಸಂತಸದ ವಿಚಾರ. ಆದರೆ ರಾಮಘಡ ನಾರಾಯಣಪುರ ಗ್ರಾಮಗಳ ಹದಗೆಟ್ಟ ರಸ್ತೆಗಳಿಗೆ ಹಲವಾರು ದಶಕಗಳಿಂದ ಮುಕ್ತಿ ಸಿಗದಿರುವುದು ಬೇಸರದ ವಿಚಾರ.
ಎಸ್.ಕಾಲೂಬಾ ತಾಳೂರು ಗ್ರಾಮದ ಮುಖಂಡ
ಸಂಡೂರು ತಾಲ್ಲೂಕಿನ ನಾರಾಯಣಪುರ ರಾಮಘಡ ರಸ್ತೆಗಳನ್ನು ನೂತನವಾಗಿ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದ ತ್ವರಿತವಾಗಿ ಸರ್ವೆ ನಡೆಸಲಾಗುವುದು.
ಕೃಷ್ಣಾ ನಾಯ್ಕ್ ಲೋಕೋಪಯೋಗಿ ಇಲಾಖೆಯ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT