ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಜಾ ಚಾಕೊಲೆಟ್‌ ಮಾರಾಟ: ಬಿಹಾರದ ವ್ಯಕ್ತಿ ಸೆರೆ

Published 31 ಮೇ 2024, 16:16 IST
Last Updated 31 ಮೇ 2024, 16:16 IST
ಅಕ್ಷರ ಗಾತ್ರ

ಬಳ್ಳಾರಿ: ಗಾಂಜಾ ಮಿಶ್ರಿತ ಚಾಕೊಲೆಟ್‌ ಮಾರಾಟ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. 

ಸಿರುಗುಪ್ಪ ತಾಲ್ಲೂಕಿನ ಅಂಕಲಿ ಮಠ ದೇವಸ್ಥಾನದ ಬಳಿಯ ರೈಸ್‌ಮಿಲ್‌ ಮುಂಭಾಗ ಗುಡಿಸಲೊಂದರಲ್ಲಿ ಚಾಕೊಲೆಟ್‌ ಮಾರಾಟ ನಡೆಯುತ್ತಿರುವುದಾಗಿ ಅಬಕಾರಿ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಮೇರೆಗೆ ಕಪಾಲ್‌ ಪಾಸ್ವಾನ್‌ ಎಂಬಾತನ ಗುಡಿಸಲಿನ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಆತನ ಬಳಿ 261  (ಒಟ್ಟು 1.350 ಕೆ.ಜಿ) ಗಾಂಜಾ ಮಿಶ್ರಿತ ಚಾಕೊಲೆಟ್‌ಗಳು ಪತ್ತೆಯಾಗಿದ್ದು, ಅದನ್ನು ಜಫ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹2,600 ಎಂದು ಅಂದಾಜಿಸಲಾಗಿದೆ. 

ಬಂಧಿತ ಕಪಾಲ್‌ ಪಾಸ್ವಾನ್‌ ಬಿಹಾರದ ದರ್ಬಾಂಗ್‌ ತಾಲೂಕಿನ ದೇವಕುಲಿ ಗ್ರಾಮದವನು. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಆಶಾರಾಣಿ, ಅಬಕಾರಿ ನಿರೀಕ್ಷಕ ಶ್ರೀಧರ್‌ ನಿರೋಣಿ, ಅಬಕಾರಿ ಉಪ ನಿರೀಕ್ಷಕ ಬಿ.ವೀರಣ್ಣ ಹಾಗೂ ಸಿಬ್ಬಂದಿ ಉಮೇಶ್‌, ದೇವರಾಜ, ರಾಘವೇಂದ್ರ, ಲಕ್ಷ್ಮಣ, ಮಹಾಂತೇಶ್, ಹರೀಶ್‌ ಮತ್ತಿತರರು ಇದ್ದರು. 

ಪಡಿತರ ಅಕ್ಕಿ ಅಕ್ರಮ ಸಂಗ್ರಹ: ವಶ

ತೆಕ್ಕಲಕೋಟೆ: ಸಮೀಪದ ಉತ್ತನೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ ನೇತೃತ್ವದ ತಂಡ ದಾಳಿ ನಡೆಸಿ ₹ 25,375 ಮೌಲ್ಯದ 25 ಚೀಲದಲ್ಲಿ 8 ಕ್ವಿಂಟಲ್ 75 ಕೆಜಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಕಾಳಿಂಗ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಿರುಗುಪ್ಪ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಜರಿದ್ದರು. ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ತಿಂಗಳಿಂದ ವ್ಯಕ್ತಿ ನಾಪತ್ತೆ

ಹೊಸಪೇಟೆ(ವಿಜಯನಗರ): ಮನೆಯಿಂದ ಹೋದ ವ್ಯಕ್ತಿಯೊಬ್ಬರು ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾದ ಬಗ್ಗೆ ಸಮೀಪದ ಕಮಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿ.ಎಸ್.ಪಾಲಮ್ಮ ಅವರ ಪುತ್ರ ವಿರೇಶ್ ನಾಪತ್ತೆಯಾದ ವ್ಯಕ್ತಿ.

ವಿರೇಶ್ ಅವರು ಒಂದೂವರೆ ವರ್ಷದ ಹಿಂದೆ ಲಕ್ಷ್ಮಿದೇವಿ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರು. ತಾಯಿ ಪಾಲಮ್ಮ ಅವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಮಾ.13ರಂದು ರಾತ್ರಿ ನೋಡೆಲೆಂದು ತಾಯಿ ಮನೆಗೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ತಾಯಿ ಪಾಲಮ್ಮ ಅವರು ಮಗನಿಗೆ ಸತ್ತೀಯಾ, ಬದುಕಿದ್ದೀಯಾ ಅಂತ ನೋಡೆಲೆಂದು ಬಂದಿದ್ದೇಯಾ ಅಂತ ಕೇಳಿದ್ದಕ್ಕೆ ಎದ್ದು ಹೋದ ವಿರೇಶ್ ಅವರು, ಅವರ ವಾಸವಿದ್ದ ಮನೆಗೆ ಹೋಗದೆ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಪಾಲಮ್ಮ ಅವರು ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT