ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಹುಸ್ಕೂರು ಮದ್ದೂರಮ್ಮ ಜಾತ್ರೆ

100 ಅಡಿಗೂ ಎತ್ತರದ ತೇರುಗಳನ್ನು ಎಳೆದು ತಂದ ಗ್ರಾಮಸ್ಥರು
Published 7 ಏಪ್ರಿಲ್ 2024, 16:16 IST
Last Updated 7 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಶನಿವಾರ ವೈಭವದಿಂದ ನಡೆಯಿತು. ಸಹಸ್ರಾರು ಮಂದಿ ಭಕ್ತರು ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು.

ವಿವಿಧ ಗ್ರಾಮಗಳ ಗ್ರಾಮಸ್ಥರು 100 ಅಡಿಗೂ ಎತ್ತರದ ತೇರು ತಯಾರಿಸಿ, 5–6 ಕೀ.ಮಿ ಎತ್ತು ಮತ್ತು ಟ್ರ್ಯಾಕ್ಟರ್‌ ಮೂಲಕ ಜಾತ್ರೆಗೆ ಎಳೆದು ತಂದಿದ್ದರು.

ಲಕ್ಷ್ಮೀನಾರಾಯಣಪುರ, ರಾಯಸಂದ್ರ, ದೊಡ್ಡನಾಗಮಂಗಲ, ಸಿಂಗೇನಅಗ್ರಹಾರ, ಸಂಜೀವನಗರ ಗ್ರಾಮಗಳ ತೇರುಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದವು. ಸಂಜೀವನಗರ ತೇರು ಇದೇ ಮೊದಲ ಬಾರಿ ಜಾತ್ರೆಯಲ್ಲಿ ಪಾಲ್ಗೊಂಡಿತು.

ಲಕ್ಷ್ಮೀನಾರಾಯಣಪುರ, ದೊಡ್ಡನಾಗಮಂಗಲ, ರಾಯಸಂದ್ರ ಗ್ರಾಮಗಳ ತೇರುಗಳು ಸುಮಾರು 6ಕಿ.ಮೀ. ದೂರದಿಂದ ಬಂದವು. 100ಅಡಿಗೂ ಎತ್ತರದ ತೇರುಗಳನ್ನು ರಸ್ತೆಗಳಲ್ಲಿ ಎತ್ತುಗಳು ಎಳೆದು ತರುವುದು ವಿಶೇಷವಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ಜನರು ವೈಭವದ ತೇರುಗಳನ್ನು ಕಣ್ತುಂಬಿಕೊಂಡರು. ತೇರುಗಳೊಂದಿಗೆ ಬರುವ ಯುವಕರು ಉತ್ಸಾಹದಿಂದ ತೇರನ್ನು ಎಳೆಯುವ ಕಾರ್ಯದಲ್ಲಿ ಭಾಗಿಯಾದರು.

ಸುಮಾರು 120ಅಡಿಗೂ ಎತ್ತರದ ಲಕ್ಷ್ಮೀನಾರಾಯಣಪುರದ ಕುರ್ಜು ದೇವಾಲಯದ ಆವರಣಕ್ಕೆ ಮೊದಲು ಬಂದಿತು. 100ಅಡಿಗೂ ಎತ್ತರದ ತೇರುಗಳನ್ನು ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಗ್ರಾಮದಲ್ಲಿ ಭಕ್ತರು ಸಿದ್ದಪಡಿಸಿ ಶುಕ್ರವಾರ ತಮ್ಮ ಗ್ರಾಮಗಳಲ್ಲಿ ಪೂಜೆ ಸಲ್ಲಿಸಿ ಶನಿವಾರ ಮಧ್ಯಾಹ್ನ 12ರ ವೇಳೆಗೆ ತಮ್ಮ ಗ್ರಾಮದಿಂದ ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣಕ್ಕೆ ತೇರುಗಳನ್ನು ಎತ್ತು ಮತ್ತು ಟ್ರ್ಯಾಕ್ಟರ್‌ ಮೂಲಕ ಎಳೆದು ತಂದಿದ್ದರು.

ಹೊಲ–ಗದ್ದೆಗಳನ್ನು ಜೆಸಿಬಿಗಳ ಮೂಲಕ ದಾರಿ ಮಾಡಿಕೊಂಡು ತೇರು ಎಳೆದು ತರುವ ವಿಶಿಷ್ಟ ರಥೋತ್ಸವ ಇದಾಗಿದ್ದು, ತಮ್ಮ ಗ್ರಾಮಗಳಿಂದ ದೇವಾಲಯದ ಆವರಣಕ್ಕೆ ಬರಲು 5-6 ತಾಸು ಸಮಯ ಹಿಡಿಯಿತು.

ತೇರಿನ ಹಾದಿಯುದ್ದಕ್ಕೂ ತಮಟೆ ವಾದನದೊಂದಿಗೆ ಭಕ್ತರು ಕುಣಿಯುತ್ತಾ ಸಂಭ್ರಮದಿಂದ ತೇರುಗಳನ್ನು ಎಳೆದು ತಂದರು. ತೇರಿನೊಂದಿಗೆ ಬಂದ ಗ್ರಾಮದ ಮಹಿಳೆಯರು, ಯುವಕ, ಯುವತಿಯರು ತಮಟೆಯ ವಾದನಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.

ತೇರು ಬರುವ ಹಾದಿಯಲ್ಲಿ ಗ್ರಾಮಗಳ ಜನರು ರಾಸುಗಳಿಗೆ ಬೂಸ, ಮೇವು ನೀಡಿ ಎತ್ತುಗಳಿಗೆ ಆಹಾರ ಪೂರೈಕೆ ಮಾಡಿದರು. ಬರುವ ಜನರಿಗೆ ದಾರಿಯುದ್ದಕ್ಕೂ ಅರವಂಟಿಕೆಗಳನ್ನು ಸ್ಥಾಪಿಸಿ ಕೋಸಂಬರಿ, ಮಜ್ಜಿಗೆ, ಪಾನಕ ವಿತರಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಒಂದೊಂದು ತೇರು ದೇವಾಲಯದ ಆವರಣಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರ ಉತ್ಸಾಹ ಮುಗಿಲುಮುಟ್ಟುತ್ತಿತ್ತು. ಮದ್ದೂರಮ್ಮ ದೇವಿಯ ಜಯಘೋಷ ಮಾಡುತ್ತಾ ದೇವಾಲಯದ ಆವರಣ ತಲುಪಿದರು.

100 ಅಡಿಗೂ ಹೆಚ್ಚು ಎತ್ತರದ ವಿವಿಧ ಗ್ರಾಮಗಳ ತೇರುಗಳನ್ನು ಎತ್ತುಗಳು ಎಳೆದುಕೊಂಡು ಹಳ್ಳ ದಿಣ್ಣೆಗಳೆನ್ನದೇ ಸಾಗಿ ಬರುವ ಆ ದೃಶ್ಯ ಅಧ್ಭುತವಾಗಿತ್ತು. ಪ್ರತಿ ತೇರು ಸಹ 10-12 ಟನ್ ತೂಕವಿತ್ತು. ಇದನ್ನು ಎಳೆದು ತರಬೇಕಾದರೆ ನೇತೃತ್ವ ವಹಿಸಿರುವವರು ಎತ್ತುಗಳ ಜೊತೆಗಿರುವವರಿಗೆ ಹಾಗೂ ವಾಲದಂತೆ ಹಗ್ಗಗಳನ್ನು ಹಿಡಿದಿರುವವರಿಗೆ ಆಗಿಂದ್ದಾಗೆ ಮೈಕ್ ಮೂಲಕ ಸೂಚನೆ ನೀಡುತ್ತಾ, ತೇರು‌ ಯಶಸ್ವಿಯಾಗಿ ಜಾತ್ರೆ ತಲುಪಿಸಿದರು.

ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಲಕ್ಷ್ಮೀನಾರಾಯಣಪುರದ ತೇರನ್ನು ಎತ್ತುಗಳ ಮೂಲಕ ಎಳೆದು ತರುತ್ತಿರುವ ನೋಟ
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಲಕ್ಷ್ಮೀನಾರಾಯಣಪುರದ ತೇರನ್ನು ಎತ್ತುಗಳ ಮೂಲಕ ಎಳೆದು ತರುತ್ತಿರುವ ನೋಟ
ಪುಟ್ಟ ಬಾಲಕನಿಗೂ ತೇರನ್ನು ಎಳೆಯುವ ಸಂಭ್ರಮ
ಪುಟ್ಟ ಬಾಲಕನಿಗೂ ತೇರನ್ನು ಎಳೆಯುವ ಸಂಭ್ರಮ
ಮೂರು ಗ್ರಾಮಗಳ ತೇರುಗಳು ದೇವಾಲಯದ ಬಳಿ ಸಂಗಮವಾಗಿರುವುದು
ಮೂರು ಗ್ರಾಮಗಳ ತೇರುಗಳು ದೇವಾಲಯದ ಬಳಿ ಸಂಗಮವಾಗಿರುವುದು
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯ ನೋಟ
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯ ನೋಟ
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ಬಿಸಿಲಿನ ಬೇಗೆ ತಣಿಸಲು ನೀರು ಮಜ್ಜಿಗೆ ಪಾನಕ ವಿತರಿಸಲಾಗುತ್ತಿತ್ತು
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ಬಿಸಿಲಿನ ಬೇಗೆ ತಣಿಸಲು ನೀರು ಮಜ್ಜಿಗೆ ಪಾನಕ ವಿತರಿಸಲಾಗುತ್ತಿತ್ತು

ಕಿ.ಮೀ ಗಟ್ಟಲೆ ವಾಹನ ದಟ್ಟಣೆ

ಬೆಂಗಳೂರು ತಮಿಳುನಾಡು ಸೇರಿದಂತೆ ನೂರಾರು ಗ್ರಾಮಗಳ ಸಹಸ್ರಾರು ಜನರು ಹುಸ್ಕೂರಿನ ಜಾತ್ರೆ ಕಣ್ತುಂಬಿಕೊಳ್ಳಲು ಆಗಮಿಸಿದ್ದರಿಂದ ಹುಸ್ಕೂರು ರಸ್ತೆಯಲ್ಲಿ ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಗಿತು. ತೇರುಗಳು ಆಗಮಿಸುವ ಮಾರ್ಗದಲ್ಲಿ ಕಿ.ಮೀ.ಗೂ ಹೆಚ್ಚು ದೂರ ವಾಹನಗಳು ಜಮಾವಣೆಗೊಂಡಿದ್ದವು. ಪೊಲೀಸರು ಹರಸಾಹಸ ಮಾಡಿ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದರು. ಪೊಲೀಸ್‌ ಚೌಕಿಯನ್ನು ನಿರ್ಮಿಸಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಚಲನವಲನ ಬಗ್ಗೆ ಗಮನಹರಿಸಿ ಬಿಗಿ ಭದ್ರತೆ ಏರ್ಪಡಿಸಿದ್ದರು. ಪೊಲೀಸ್‌ ಬಂದೋಬಸ್ತ್‌ : ಸುಮಾರು 250ಕ್ಕೂ ಹೆಚ್ಚು ಮಂದಿ ಪೊಲೀಸ್‌ ಸಿಬ್ಬಂದಿ ಭದ್ರೆತೆಗೆ ನಿಯೋಜನೆಗೊಂಡಿದ್ದರು. ಒಂದು ಮೀಸಲು ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. 25ಕ್ಕೂ ಹೆಚ್ಚು ಮಂದಿ ಪೊಲೀಸ್‌ ಅಧಿಕಾರಿಗಳು ಭದ್ರತೆಯಲ್ಲಿ ಭಾಗವಹಿಸಿದ್ದರು. 100ಕ್ಕೂ ಹೆಚ್ಚು ಮಂದಿ ಹೆಬ್ಬಗೋಡಿ ಎಸ್‌ಎಫ್‌ಎಸ್‌ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಟ್ರಾಫಿಕ್‌ ನಿಯಂತ್ರಣದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT