ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌| ತಹಶೀಲ್ದಾರ್‌ ಆದೇಶ ಉಲ್ಲಂಘಿಸಿ ಕರಗ

ಕರಗ ಆಚರಿಸಿದವರ ವಿರುದ್ಧ ಕ್ರಮಕ್ಕೆ ವಹ್ನಿಕುಲ ಸೇವಾ ಸಂಘ ಒತ್ತಾಯ
Last Updated 8 ಏಪ್ರಿಲ್ 2023, 4:15 IST
ಅಕ್ಷರ ಗಾತ್ರ

ಆನೇಕಲ್: ಆನೇಕಲ್‌ನ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ ಕರಗ ಮಹೋತ್ಸವದ ಅಚರಣೆಯು ವಿವಾದದ ರೂಪ ಪಡೆದಿದ್ದು, ತಹಶೀಲ್ದಾರ್‌ರ ಆದೇಶ ಉಲ್ಲಂಘಿಸಿ ಕರಗ ಆಚರಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶುಕ್ರವಾರ ತಾಲ್ಲೂಕು ಕಚೇರಿಗೆ ಬಂದ ವಹ್ನಿಕುಲ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಮಹಿಳೆಯರು ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ತಹಶೀಲ್ದಾರ್ ಕಚೇರಿ ಪರವಾಗಿ ಶಿರಸ್ತೇದಾರ್ ಚೇತನ್ ಮನವಿ ಪತ್ರ ಸ್ವೀಕರಿಸಿದರು.

ವಹ್ನಿಕುಲ ಸೇವಾ ಸಂಘದ ಅಧ್ಯಕ್ಷ ಎಂ.ಸೋಮನಾಥ್‌ ಮಾತನಾಡಿ, ‘ಆನೇಕಲ್‌ ಕರಗ ಆಚರಣೆ ನಡೆಸುವ ಸಂಬಂಧ ಒಂದು ತಿಂಗಳಿನಿಂದ ಹಲವಾರು ಸಭೆಗಳನ್ನು ನಡೆಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕರಗ ಮತ್ತು ಪಲ್ಲಕ್ಕಿ ಉತ್ಸವ ಹೊರತುಪಡಿಸಿ ದೇವಾಲಯದ ಪ್ರಧಾನ ಅರ್ಚಕರು ದೇವಾಲಯದ ಒಳಾಂಗಣದಲ್ಲಿ ಸಾಂಕೇತಿಕವಾಗಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಏಪ್ರಿಲ್ ನಾಲ್ಕರಂದು ಆದೇಶಿದ್ದರು. ಆದರೆ, ಈ ಆದೇಶ ಉಲ್ಲಂಘಿಸಿ ದೇವಾಲಯದಲ್ಲಿ ಕರಗ ಆಚರಿಸಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ತಹಶೀಲ್ದಾರ್‌ ಆದೇಶ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವಾಲಯವನ್ನು ತಹಶೀಲ್ದಾರ್‌ ಅವರು ವಶಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಕರಗದ ಆಚರಣೆಗೆ ವಿಧಿವಿಧಾನಗಳಿವೆ. ಕುಡಿ ಕಟ್ಟುವುದು, ಜಲಧಿ ಕರಗ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡದೇ ತರಾತರಿಯಲ್ಲಿ ದೇವಾಲಯದಲ್ಲಿ ಕರಗ ಮಾಡಲಾಗಿದೆ. ಕರಗ ಆಚರಣೆಗೆ ಯಾಕಿಷ್ಟು ತರಾತುರಿ ಮಾಡಲಾಯಿತು ಎಂದು ಪ್ರಶ್ನಿಸಿದರು.

ಪುರಸಭಾ ಸದಸ್ಯ ಪ್ರಕಾಶ್, ದೊರೆಸ್ವಾಮಿ, ಯಲ್ಲಪ್ಪ, ಲೋಕೇಶ್, ಧರ್ಮರಾಜು, ಶಂಕರ್‌, ಶ್ರೀನಿವಾಸ್, ವಿಜಯಕುಮಾರ್, ಸತೀಶ್‌, ಗಿರೀಶ್, ನವೀನ್‌ಕುಮಾರ್, ನಾಗಮ್ಮ, ಯಶೋಧಾ, ನಂದಿನಿ, ಮಮತಾ, ರಾಗಿಣಿ, ಪೂಜಾ, ಉಷಾ, ರಾಕೇಶ್, ಸಿ.ಮುನಿರಾಜು, ಮೋಹನ್‌ ಇದ್ದರು.

ಆನೇಕಲ್‌ ಐತಿಹಾಸಿಕ ಕರಗ: ಆನೇಕಲ್‌ ಧರ್ಮರಾಯಸ್ವಾಮಿ ಕರಗ ಮಹೋತ್ಸವವು ಐತಿಹಾಸಿಕ ಉತ್ಸವವಾಗಿದ್ದು, ಸಹಸ್ರಾರು ಜನರು ಭಾಗಿಯಾಗುತ್ತಿದ್ದ ಮಹೋತ್ಸವ. ಆದರೆ, ಎರಡು ಗುಂಪುಗಳ ನಡುವಿನ ವಿವಾದಿಂದ ಆನೇಕಲ್‌ನ ಐತಿಹಾಸಿಕ ಕರಗದ ಆಚರಣೆಗೆ ಅಡ್ಡಿಯಾಗಿದೆ. ಆನೇಕಲ್‌ ತಾಲ್ಲೂಕಿನ ಮಾಯಸಂದ್ರ, ತೆಲಗರಹಳ್ಳಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ ಸೇರಿದಂತೆ ವಿವಿಧೆಡೆ ವಿಜೃಂಭಣೆಯ ಕರಗ ಮಹೋತ್ಸವಗಳು ನಡೆದಿವೆ. ಆದರೆ ಆನೇಕಲ್‌ನ ಆಚರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದರಿಂದ ಸಹಸ್ರಾರು ಭಕ್ತರಲ್ಲಿ ನಿರಾಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT