ಧರ್ಮ, ಸಂಸ್ಕಾರ ಕಲಿಸಿದಾಗ ಮಕ್ಕಳಲ್ಲಿ ಪ್ರಜ್ಞಾವಂತಿಕೆ: ಸಾಯಿ ರಮೇಶ್‌ ಬಾಬು

7
ಶ್ರೀಕೃಷ್ಣ–ರಾಧೆಯರ ವೇಷಭೂಷಣ ಸ್ಪರ್ಧೆ ಉದ್ಘಾಟನೆ

ಧರ್ಮ, ಸಂಸ್ಕಾರ ಕಲಿಸಿದಾಗ ಮಕ್ಕಳಲ್ಲಿ ಪ್ರಜ್ಞಾವಂತಿಕೆ: ಸಾಯಿ ರಮೇಶ್‌ ಬಾಬು

Published:
Updated:
Deccan Herald

ವಿಜಯಪುರ: ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಯಲ್ಲೆ ಧರ್ಮ, ಮತ್ತು ಸಂಸ್ಕಾರವನ್ನು ಕಲಿಸಿದಾಗ ಮಕ್ಕಳು ಪ್ರಜ್ಞಾವಂತರಾಗಿ ಬೆಳೆಯುತ್ತಾರೆ ಎಂದು ಚಿತ್ರ ನಿರ್ಮಾಪಕ ಸಾಯಿ ರಮೇಶ್ ಬಾಬು ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಜೇಸಿಐ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಕೃಷ್ಣ–ರಾಧೆಯರ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಸಂಸ್ಕಾರವೆಂಬುದು ಶಾಲಾ ಹಂತದಿಂದಲೇ ಬರಬೇಕು. ವಿದ್ಯಾರ್ಥಿ ಜೀವನದಿಂದಲೇ ಪ್ರತಿಯೊಬ್ಬರು ಸಾಧನಾಶೀಲರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿ ದೇಶಸೇವೆ ಮಾಡಿ ಜಗತ್ತಿಗೆ ಮಾದರಿಯಾಗಬೇಕು ಎಂದರು.

ಪ್ರತಿಯೊಬ್ಬರಿಗೂ ಶಿಕ್ಷಣದ ಅಗತ್ಯವಿದೆ. ಪಾಲಕರೂ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯ ತಿಳಿದು ಅವರು ಬಯಸುವ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಪ್ರಭಂಜನ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಡಾ.ವಿ.ಎನ್.ರಮೇಶ್ ಮಾತನಾಡಿ, ಮಕ್ಕಳೇ ಈ ದೇಶದ ಆಸ್ತಿ. ಅವರು ಶಿಕ್ಷಣದ ಜೊತೆಗೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡು ಉತ್ತಮ ನಾಗರಿಕರಾದರೆ ರಾಷ್ಟ್ರ ಅಭಿವೃದ್ಧಿಯಾಗುತ್ತದೆ ಎಂದರು.

ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಸನ್ನಡತೆ ಮತ್ತು ಸದ್ಬುದ್ಧಿ ಕಲಿಸಬೇಕು. ವಿದ್ಯೆ ಎಂಬ ಮಹಾನ್‌ ಜ್ಞಾನವನ್ನು ಪ್ರತಿಯೊಬ್ಬ ಮನುಷ್ಯನಿಗೆ ಉಣಬಡಿಸಿದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು.

ರಾಯಲ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಚಂದ್ರಮುಖಿ ರಮೇಶ್ ಮಾತನಾಡಿ, ’ವಿದ್ಯೆಗೆ ಹೆಚ್ಚು ಒತ್ತು ಕೊಟ್ಟಿರುವ ರಾಜ್ಯ, ದೇಶದಲ್ಲಿ ಪ್ರಗತಿ ಹೊಂದಿದೆ. ಅದಕ್ಕಾಗಿ ಸಮಾಜ, ಸರ್ಕಾರ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯ’ ಎಂದರು.

‘ನಾವು ಹೇಗೆ ಬದುಕಬೇಕೆಂಬ ಚಿಂತನೆ ಮಾಡಬೇಕು. ಆ ಚಿಂತನೆ ನಾವು ಮಾಡಿದಾಗ ಮಾತ್ರ ಯಶಸ್ಸಿನ ಫಲ ಖಂಡಿತವಾಗಿ ಸಿಗುತ್ತದೆ’ ಎಂದರು.

ಸ್ಪರ್ಧೆಯಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆ ವೇಷಧಾರಿಗಳಾಗಿ ಗಮನ ಸೆಳೆದರು. ನೃತ್ಯರೂಪಕ ಸೇರಿ ಭಕ್ತಿಪ್ರಧಾನವಾದ ನೃತ್ಯಗಳು ನಂದಗೋಕುಲದಲ್ಲಿ ಶ್ರೀಕೃಷ್ಣನ ಬಾಲ್ಯದ ದಿನಗಳನ್ನು ನೆನಪಿಸಿದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಚಿತ್ರನಟಿ ಮೀರಾ, ರವಿಕುಮಾರ್, ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ, ಜೇಸಿಐ ಸಂಸ್ಥೆಯ ಅಧ್ಯಕ್ಷ ನಾಗೇಶ್, ಶಿಕ್ಷಕರಾದ ಜಿ.ಎಸ್.ರವೀಂದ್ರ, ಉಮಾದೇವಿ, ಭಾರತಿ, ನಯಿಮುನ್ನೀಸಾ, ಜೇಸಿಐ ಕಾರ್ಯದರ್ಶಿ ವೆಂಕಟೇಶ್, ಶೈಲಜಾ, ಅಶ್ವಿನಿ, ಗಾಯಿತ್ರಿ, ಮುಖೇಶ್ ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !