ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷಗಳ ನಿರ್ನಾಮವೇ ಬಿಜೆಪಿ ಗುರಿ

ಬಿಜೆಪಿ ಕಾರ್ಯವೈಖರಿ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ
Last Updated 5 ಜುಲೈ 2022, 4:38 IST
ಅಕ್ಷರ ಗಾತ್ರ

ಕುಂದಾಣ (ದೇವನಹಳ್ಳಿ ತಾಲ್ಲೂಕು): ‘ಬಿಜೆಪಿ ಈ ಮೊದಲು ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣವೇ ತನ್ನ ಧ್ಯೇಯವೆಂದು ಹೇಳುತ್ತಿತ್ತು. ಪ್ರಸ್ತುತ ಅಸ್ತಿತ್ವದಲ್ಲಿರುವ ಎಲ್ಲಾ ಪಕ್ಷಗಳನ್ನು ಮುಗಿಸಿ ವಿಪಕ್ಷಗಳೇ ಇಲ್ಲದ ಪ್ರಜಾತಂತ್ರ ವ್ಯವಸ್ಥೆ ರೂಪಿಸಲು ಮುಂದಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ತಾಲ್ಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಚೌಡೇಶ್ವರಿ, ಕಾಶಿ ವಿಶ್ವನಾಥ ದೇವಾಲಯ ಪ್ರತಿಷ್ಠಾಪನೆ, ಬ್ರಹ್ಮ ಕಲಶಾಭಿ‍ಷೇಕ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉತ್ತರ ಭಾರತದಲ್ಲಿ ಬಿಜೆಪಿಯ ಕಾರ್ಯಸೂಚಿ ಫಲಿಸಲಿದೆ. ದಕ್ಷಿಣ ಭಾರತದ ರಾಜಕೀಯವೇ ಬೇರೆ. ಅವರ ತಂತ್ರಗಳಿಗೆ ಇಲ್ಲಿನ ಜನರೇ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಉಳಿವಿಗೆ ದಕ್ಷಿಣ ಭಾರತದ ಭೂಮಿ ಅವಕಾಶ ಕಲ್ಪಿಸಲಿದೆ. ಕಾದು ನೋಡಿ ಎಂದು ಭವಿಷ್ಯ ನುಡಿದರು.

ಪ್ರಾದೇಶಿಕ ಪಕ್ಷಗಳನ್ನು ಕುಟುಂಬ ರಾಜಕಾರಣವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ 75 ವರ್ಷಗಳಿಂದಲೂ ಸ್ಥಳೀಯ ಪಕ್ಷಗಳನ್ನು ಮುಗಿಸಲು ಎಲ್ಲಾ ರಾಷ್ಟ್ರೀಯ ಪಕ್ಷಗಳು ಸತತ ಪ್ರಯತ್ನ ಮಾಡುತ್ತಿವೆ. ಆದರೆ, ದೇಶದ ಸಂವಿಧಾನದಲ್ಲಿರುವ ಆಶಯವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ದೇಶ ಇರುವವರೆಗೂ ಪ್ರಾದೇಶಿಕ ಪಕ್ಷಗಳು ಅಸ್ತಿತ್ವದಲ್ಲಿರುತ್ತವೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಪಕ್ಷಗಳು ಯಾವ ರಾಷ್ಟ್ರೀಯ ಪಕ್ಷಗಳಿಗೆ ಗುಲಾಮರಲ್ಲ. ನಾವು ನೀಡುವ ಮನವಿಯನ್ನು ಅವರು ಪುರಸ್ಕರಿಸದೆ ವಿರೋಧಿ ಧೋರಣೆ ತೋರುತ್ತಾರೆ. ಕುಟುಂಬ ರಾಜಕಾರಣ ಅಂತ್ಯ ಮಾಡುತ್ತೇವೆಂದು ಹೇಳಿಕೊಂಡು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ದಮನಕಾರಿ ನೀತಿ ಹೊಂದುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಗರು ಇಂದು ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವಾಗಿಲ್ಲ. ಪ್ರತಿನಿತ್ಯ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಚುನಾಯಿತ ಸರ್ಕಾರಗಳೇ ಪ್ರಜೆಗಳ ಕ್ಷೇಮಾಭಿವೃದ್ಧಿ ಕುರಿತು ಆಲೋಚನೆ ಮಾಡದೆ ಹೋದರೆ ಹೇಗೆ? ಎಂದು ಪ್ರಶ್ನಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕಾರ್ಯಾಧ್ಯಕ್ಷ ಲಕ್ಷ್ಮಣ್, ಕುಂದಾಣ ಹೋಬಳಿ ಮಾಜಿ ಅಧ್ಯಕ್ಷ ಮುನಿರಾಜು, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ, ಮಾಜಿ ಅಧ್ಯಕ್ಷೆ ಮಂಗಳಾ ನಾರಾಯಣಸ್ವಾಮಿ, ಸದಸ್ಯರಾದ ದಿನ್ನೇಸೋಲೂರು ಶ್ರೀನಿವಾಸ್, ಭವ್ಯಾ ವಸಂತ್, ಮುನೇಗೌಡ, ವೆಂಕಟಮ್ಮ, ಲಕ್ಷ್ಮಿನರಸಮ್ಮ, ಮಂಜುನಾಥ್, ನರಸಿಂಹರಾಜು, ನಾಗರಾಜು, ಆಂಜಿನಮ್ಮ, ಪ್ರಧಾನ ಅರ್ಚಕ ನಾಗೇಶ್, ಪುರಸಭಾ ಸದಸ್ಯ ಎಸ್‌. ನಾಗೇಶ್, ಮುಖಂಡರಾದ ನೆರಗನಹಳ್ಳಿ ಶ್ರೀನಿವಾಸ್, ಪ್ರಭಾಕರ್, ದಿನ್ನೂರು ರಾಮಣ್ಣ, ಮುನಿರಾಜ್, ಸೋಲೂರು ಮನು, ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT