ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು, ಗ್ರಾಹಕರಿಗೆ ಅನುಕೂಲ

ತರಕಾರಿ ಮಾರುಕಟ್ಟೆ ಅತ್ತಿಬೆಲೆಗೆ ಸ್ಥಳಾಂತರಕ್ಕೆ ಸಂಸದ ಡಿ.ಕೆ ಸುರೇಶ್‌ ಸಲಹೆ
Last Updated 19 ಏಪ್ರಿಲ್ 2020, 15:07 IST
ಅಕ್ಷರ ಗಾತ್ರ

ಆನೇಕಲ್: ಸಿಂಗೇನಅಗ್ರಹಾರದ ಬಳಿ ಸ್ಥಾಪಿಸಿರುವ ತಾತ್ಕಾಲಿಕ ತರಕಾರಿ ಮಾರುಕಟ್ಟೆಯನ್ನು ಅತ್ತಿಬೆಲೆ ಸಮೀಪದ ಆರ್‌ಟಿಒ ಕಚೇರಿ ಬಳಿಯಿರುವ 16 ಎಕರೆ ಖಾಲಿಯಿರುವ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ ಮಾರುಕಟ್ಟೆಯಾಗಿ ಬೆಳೆಸಲು ಎಲ್ಲ ಸೌಲಭ್ಯ ಕಲ್ಪಿಸಿಕೊಡಲು ಸಾಧ್ಯವಿದೆ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆ ಆರ್‌ಟಿಒ ಕಚೇರಿ ಬಳಿಯ ಖಾಲಿ ಜಾಗ ಪರಿಶೀಲಿಸಿ ಮಾತನಾಡಿದರು. ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯಲ್ಲಿದ್ದ ಎಪಿಎಂಸಿ ತರಕಾರಿ ಮಾರುಕಟ್ಟೆಯನ್ನು ಈಚೆಗೆ ತಾಲ್ಲೂಕಿನ ಸಿಂಗೇನಅಗ್ರಹಾರದ ಹಣ್ಣು ಮಾರುಕಟ್ಟೆ ಪಕ್ಕದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಇಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ ಮತ್ತು ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆವಿಶಾಲವಾಗಿಲ್ಲ. ನೂರಾರು ವಾಹನಗಳು ಪ್ರತಿನಿತ್ಯ ಸಂಚರಿಸಿದರೆ ತೊಂದರೆ ಯಾಗುತ್ತದೆ. ಹಾಗಾಗಿ ಈ ಸ್ಥಳವನ್ನು ಹಣ್ಣು ಮಾರುಕಟ್ಟೆಗೆ ಉಪಯೋಗಿಸಿಕೊಂಡು ಅತ್ತಿಬೆಲೆ ಬಳಿ ಖಾಲಿ ಉಳಿದಿರುವ ಆರ್‌ಟಿಒ ಮತ್ತು ವಾಣಿಜ್ಯ ಇಲಾಖೆಯ ಚೆಕ್‌ಪೋಸ್ಟ್‌ನ 16 ಎಕರೆ ವಿಶಾಲ ಸ್ಥಳಕ್ಕೆ ಶಾಶ್ವತವಾಗಿ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿದರೆ ರೈತರಿಗೆ, ಗ್ರಾಹಕರಿಗೆ ಉಪಯುಕ್ತವಾಗುತ್ತದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇದೆ. ಎಸ್‌ಟಿಆರ್‌ಆರ್‌ ರಸ್ತೆ ಸಮೀಪದಲ್ಲೇ ಹಾದು ಹೋಗುತ್ತದೆ. ಹಾಗಾಗಿ ಎಲ್ಲಾ ಭಾಗಗಳಿಗೂ ಸುಲಭವಾಗಿ ಸಂಪರ್ಕ ಕಲ್ಪಿಸುವ ಈ ಭಾಗದಲ್ಲಿ ತರಕಾರಿ ಮಾರುಕಟ್ಟೆ ಮತ್ತು ಹೂವಿನ ಮಾರುಕಟ್ಟೆ ತೆರೆದರೆ ಉಪಯುಕ್ತವಾಗುತ್ತದೆ. ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶಗಳಿವೆ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಅತ್ತಿಬೆಲೆ ತಮಿಳುನಾಡಿನ ಹೊಸೂರು ಗಡಿಭಾಗ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವುರಿಂದ ಇಲ್ಲಿ ಮಾರುಕಟ್ಟೆ ಸ್ಥಾಪನೆಯಾದರೆ ತಮಿಳುನಾಡು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವ ಹೊಸಕೋಟೆ, ಮಾಲೂರು, ಆನೇಕಲ್‌ ವಿಧಾನಸಭಾ ಕ್ಷೇತ್ರಗಳ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿರುವುದರಿಂದ ಹಲವು ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗಳಿಗೆ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿದೆ. ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ. ದರಪಟ್ಟಿಯನ್ನು ಕಡ್ಡಾಯವಾಗಿ ಅಂಗಡಿಗಳ ಮುಂದೆ ಹಾಕಬೇಕು. ಹೆಚ್ಚಿನ ಬೆಳೆಗೆ ಒತ್ತಾಯಿಸುವ ವ್ಯಾಪಾರಿಗಳ ಲೈಸೆನ್ಸ್‌ ರದ್ದುಪಡಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ದೊಡ್ಡಹಾಗಡೆ ಹರೀಶ್‌, ಅತ್ತಿಬೆಲೆ ವೇಣು, ಆನಂದ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT