ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ನಲ್ಲೂರು ಟೋಲ್‌ ಪ್ರಾರಂಭ

ದೊಡ್ಡಬಳ್ಳಾಪುರ- ಹೊಸಕೋಟೆ ಹೆದ್ದಾರಿ ಮುಕ್ತ
Published 17 ನವೆಂಬರ್ 2023, 16:06 IST
Last Updated 17 ನವೆಂಬರ್ 2023, 16:06 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌’ನ (ಎಸ್‌ಟಿಆರ್‌ಆರ್) ಮೊದಲ ಹಂತದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.

ನ.17ರಿಂದ ಟೋಲ್ ಪಾವತಿ ಆರಂಭಗೊಂಡಿದೆ. ದೇವನಹಳ್ಳಿ ಬಳಿಯ ನಲ್ಲೂರು ಟೋಲ್ ಪ್ಲಾಜಾದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಲಘು ವಾಹನಗಳಿಗೆ ₹70 (ಏಕಮುಖ ಸಂಚಾರ) 24 ಗಂಟೆಯೊಳಗೆ ಒಂದು ಸುತ್ತಿನ ಪ್ರಯಾಣಕ್ಕೆ ₹105, ಬಸ್‌, ಟ್ರಕ್‌ಗಳು ಕ್ರಮವಾಗಿ ₹240 ಮತ್ತು ₹360 ಪಾವತಿಸಬೇಕಿದೆ. ಈ ದರ ಬರುವ ಮಾರ್ಚ್‌ 31ರವರೆಗೆ ಜಾರಿಯಲ್ಲಿರುತ್ತದೆ. ದ್ವಿಚಕ್ರ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲಾಗುವುದು.

ಬೆಂಗಳೂರು ನಗರವನ್ನು ಸುತ್ತುವರೆದಂತೆ ದಾಬಸ್‌ಪೇಟೆಯಿಂದ ರಾಮನಗರದವರೆಗೆ ಸಂಪರ್ಕ ಸೇತುವಾಗಲಿರುವ 288 ಕಿ.ಮೀ ಉದ್ದದ ‘ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌’ ಇದಾಗಿದೆ. ಈ ರಸ್ತೆ ಪೂರ್ಣಗೊಂಡರೆ ಬೇರೆ ಬೇರೆ ಪ್ರದೇಶಗಳಿಗೆ ತೆರಳಬೇಕಿರುವ ವಾಣಿಜ್ಯ ವಾಹನಗಳು ಬೆಂಗಳೂರು ನಗರ ಪ್ರವೇಶಿಸದೆ ಹೊರವಲಯದ ಮೂಲಕ ಸಾಗಬಹುದಾಗಿದೆ. ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು, ವಾಹನಗಳು ನಿಗದಿತ ಸ್ಥಳವನ್ನು ತ್ವರಿತವಾಗಿ ತಲುಪಲು ಈ ಮಾರ್ಗ ಅನುಕೂಲ ಕಲ್ಪಿಸಲಿದೆ.

₹17 ಸಾವಿರ ಕೋಟಿ ವೆಚ್ಚದ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ಹಂತಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅವುಗಳಲ್ಲಿ ದೊಡ್ಡಬಳ್ಳಾಪುರ-ಹೊಸಕೋಟೆ ಹೊರವಲಯ ರಸ್ತೆ (34.15 ಕಿ.ಮೀ) ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಗೆಜೆಟೆಡ್‌ ಎಂಜಿನಿಯರ್‌ ಮಹೇಶ್‌ ಚಂದ್ರ ತಿಳಿಸಿದರು.

ಸ್ಥಳೀಯರಿಗೆ ದ್ವಿಚಕ್ರ ವಾಹನ ಉಚಿತವಾಗಿ ಹಾಗೂ ಟೋಲ್‌ನಿಂದ 5 ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಇರುವ ಹಳದಿ ಬೋರ್ಡ್‌ ಸೇರಿದಂತೆ ಬಿಳಿ ಬೋರ್ಡ್‌ ಕಾರುಗಳು ಉಚಿತ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ಸ್ಥಳೀಯ ಗುರುತಿನ ಚೀಟಿ ತೋರಿಸಬೇಕಿದೆ ಎಂದು ತಿಳಿಸಿದರು.

ಮೊದಲ ದಿನ ಸ್ಥಳದಲ್ಲಿ ನಲ್ಲೂರು ದೇವನಹಳ್ಳಿ ಟೋಲ್‌ ಕಾರ್ಯಾಚರಣೆ ವ್ಯವಸ್ಥಾಪಕ ಮುರುಳಿಧರ್, ರಾಷ್ಟ್ರೀಯ ಹೆದ್ದಾರಿ ಟೋಲ್‌ ವ್ಯವಸ್ಥಾಪಕ ರಾಜಶೇಖರ್‌ ಸ್ಥಳೀಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT