ಬುಧವಾರ, ಅಕ್ಟೋಬರ್ 16, 2019
22 °C
ಕೋಡಿ ಹರಿದ ಕೊಯಿರಾ ಕೆರೆಗೆ ಬಾಗಿನ ಅರ್ಪಿಸಿದ ಸಿ.ಎಸ್‌.ಕರೀಗೌಡ

ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಂಬಿಕೆ ಬೇಕು

Published:
Updated:
Prajavani

ದೇವನಹಳ್ಳಿ: ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಪ್ರೇರಣೆ ನೀಡುವ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟಾಗ ಮಾತ್ರ ಪಾರದರ್ಶಕ ಅಭಿವೃದ್ಧಿ ಕೆಲಸಗಳಾಗಲು ಸಹಕಾರಿ ಎಂದು ಎಪಿಎಂಸಿ ನಿರ್ದೇಶಕ ಸಿ.ಎಸ್‌.ಕರೀಗೌಡ ಹೇಳಿದರು.

ಇಲ್ಲಿನ ಕೊಯಿರಾ ಕೆರೆ ಕೋಡಿ ಹರಿದ ಕಾರಣ ಗ್ರಾಮಸ್ಥರ ಮನವಿ ಮೇರೆಗೆ ದಂಪತಿ ಸಮೇತ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ನೀರಾವರಿ ಮತ್ತು ಉತ್ತಮ ಮಳೆ ವಾರ್ಷಿಕವಾಗಿ ಸುರಿಯುತ್ತಿದೆ. ಈ ಬಯಲು ಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿನ ರೈತರು ಕಷ್ಟಜೀವಿಗಳು. ವಾರ್ಷಿಕ 850 ಮಿಲಿಮೀಟರ್‌ ಮಳೆ ಸುರಿದರೂ ಯಾಕೆ ಇಲ್ಲಿ ಅಂತರ್ಜಲ ಕೊರತೆ ಹೆಚ್ಚು ಇದೆ ಎಂದು ಚಿಂತಿಸಿದಾಗ ಕೆರೆಗಳು ಅಭಿವೃದ್ಧಿಯಾಗದಿರುವುದು, ವಿಪರೀತ ನೀಲಗಿರಿ ಮರಗಳ ತೋಪುಗಳು ಮಳೆಕೊಯ್ಲು ಬಗ್ಗೆ ಅರಿವಿಲ್ಲದಿರುವುದು ಗಮನಿಸಿ ದಾನಿಗಳಿಂದ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದೆ’ ಎಂದು ಹೇಳಿದರು.

‘ಆರಂಭದಲ್ಲಿ ದೇವನಹಳ್ಳಿ ಚಿಕ್ಕ ಸಿಹಿನೀರಿನ ಕೆರೆ ಆರಂಭಿಸಿದ ನಂತರ ಒಂದೊಂದು ಗ್ರಾಮದವರು ನಾಮುಂದು ತಾಮುಂದೆ ಎಂದು ಬಂದರು. ಪ್ರಸ್ತುತ ದೇವನಹಳ್ಳಿ ತಾಲ್ಲೂಕಿನಲ್ಲಿ 12 ಕೆರೆಗಳು, ಜಿಲ್ಲೆಯಲ್ಲಿ ಒಟ್ಟು 31 ಕೆರೆಗಳಲ್ಲಿ ಹೂಳು ತೆಗೆಯುವ ಪ್ರಯತ್ನದ ಅಂಗವಾಗಿ ಕೆಲವು ಕೋಡಿ ಬಿದ್ದಿವೆ. ಕೆಲವು ಅರ್ಧಭಾಗ ತುಂಬಿವೆ. ಕೆಲವು ಕೆರೆಗಳಲ್ಲಿ ಸಂಪೂರ್ಣ ಹೂಳು ಎತ್ತುವ ಕಾಮಗಾರಿ ಆಗಿಲ್ಲ; ಮಳೆ ಸುರಿಯುತ್ತಿರುವುದರಿಂದ ಹಿನ್ನಡೆಯಾಗಿದೆ’ ಎಂದು ಹೇಳಿದರು.

ಶೇಕಡ 50ರಷ್ಟು ಮಳೆ ನೀರು ನೀಲಗಿರಿ ಮರಗಳೇ ಹೀರುತ್ತಿವೆ. ಜಿಲ್ಲೆಯಲ್ಲಿರುವ ಸಿನಿಮಾ ಮಂದಿರಗಳು ಕಲ್ಯಾಣ ಮಂಟಪಗಳು, ಕೋಳಿ ಫಾರಂಗಳು ಕಾರ್ಖಾನೆಗಳು ಸರ್ಕಾರಿ ಕಟ್ಟಡಗಳು ಸಾವಿರ ಚದರಡಿಗಿಂತ ಮೇಲ್ಪಟ್ಟ ಮನೆಗಳಿಗೆ ಮಳೆ ಕೊಯ್ಕು ಅಳವಡಿಸಲು ಒಟ್ಟು 15 ಸಾವಿರ ನೋಟಿಸ್‌ ನನ್ನ ಅವಧಿಯಲ್ಲಿ ನೀಡಲಾಗಿತ್ತು. ಅಂದಾಜು 5 ಸಾವಿರಕ್ಕೂ ಹೆಚ್ಚು ಕಡೆ ಮಳೆ ನೀರು ಸಂಗ್ರಹ ವ್ಯವಸ್ಥೆ ವ್ಯವಸ್ಥೆ ಆಗಿದೆ. ಈಗಾಗಲೇ ಮಳೆ ನೀರನ್ನು ಸಂಪುಗಳಿಗೆ ನೀರು ತುಂಬಿಸಿ ಕೊಂಡಿರುವವರು ಖುಷಿಯಾಗಿದ್ದಾರೆ’ ಎಂದು ಹೇಳಿದವರು.

‘ಕೊಯಿರಾ ಕೆರೆಯಲ್ಲಿ ಶೇ.40 ರಷ್ಟು ಮಾತ್ರ ಹೂಳು ತೆಗೆಯಲಾಗಿದೆ. ಬೆಂಗಳೂರು ರೋಟರಿ ಸಂಸ್ಥೆಯಿಂದ ₹50 ಲಕ್ಷ ವೆಚ್ಚ ಮಾಡಲು ಸಿದ್ದರಿದ್ದರು. ಅಷ್ಠರಲ್ಲಿ ಮಳೆ ಬಂದಿದೆ. ನೀರು ಖಾಲಿಯಾದ ನಂತರ ಕಾಮಗಾರಿ ಪೂರ್ಣಗೊಳಿಸಲು ನನ್ನ ಸಹಕಾರವಿದೆ. ಆರಂಭದಲ್ಲಿ ಕೆಲವರಿಂದ ಅಪಹಾಸ್ಯಕ್ಕೂ ಒಳಗಾಗಿದ್ದೆ. ಸಮಾಜ ಅಂತಹದ್ದು ಏನೂ ಮಾಡಲು ಸಾಧ್ಯವಿಲ್ಲ. ಮಳೆ ನೀರು ತಡೆದು ನಿಲ್ಲಿಸಿದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲು ಸಾಧ್ಯ ತುಂಬಿರುವ ಕೆರೆಯನ್ನು ನೋಡುವುದೇ ಖುಷಿ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್‌, ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌, ಕಾರ್ಯದರ್ಶಿ ಕೆ.ಎನ್‌ ಬಾಬು, ತಾಲ್ಲೂಕು ಘಟಕ ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಮುಖಂಡರಾದ ಚಿಕ್ಕೇಗೌಡ, ರವಿಕುಮಾರ್‌, ಚಂದ್ರಶೇಖರ್‌ ಇದ್ದರು.

Post Comments (+)