ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ ಬದಲಿಗೆ ರೈತರಿಗೆ ನೇರ ಪಾವತಿ

Last Updated 31 ಮೇ 2018, 19:30 IST
ಅಕ್ಷರ ಗಾತ್ರ

-ಎಂ. ಎಸ್. ಶ್ರೀರಾಮ್

ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಈ ಬಿಕ್ಕಟ್ಟು ಈಗ ಉದ್ಭವಿಸಿದ್ದಲ್ಲ. ಕಳೆದ ಮೂರು ದಶಕಗಳಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೆ ಕೇವಲ ತೇಪೆ ಕಾರ್ಯವನ್ನು ಮಾತ್ರ ಮಾಡಿದ್ದರ ಪರಿಣಾಮವೇ ಇಂದಿನ ಬಿಕ್ಕಟ್ಟು. ಪ್ರಸ್ತುತ ಕೇಂದ್ರದಲ್ಲಿ ಆಡಳಿತ ಸೂತ್ರ ಹಿಡಿದವರು ಆಗಾಗ ಹೇಳುವಂತೆ ಇದೇಕೆ ಏಳು ದಶಕಗಳ ಕಥೆಯಲ್ಲ. ಕೇವಲ ಮೂರೇ ದಶಕಗಳ ಕಥೆ ಎಂಬುದಕ್ಕೆ ಕಾರಣವಿದೆ. ಹಾಗೆಯೇ ಮೂರು ದಶಕಗಳಿಗಿಂತ ಹಿಂದೆ ಮಾಡಿದ ಉಪಾಯಗಳು ಈಗೇಕೆ ಪ್ರಯೋಜನಕಾರಿಯಲ್ಲ ಎಂಬುದನ್ನೂ ಇಲ್ಲಿ ಚರ್ಚಿಸೋಣ.

ಮೊದಲಿಗೆ ತಕ್ಷಣದ ತೇಪೆ ಕಾರ್ಯದ ಸಂಗತಿಯನ್ನು ನೋಡೋಣ. ರೈತರ ಆತ್ಮಹತ್ಯೆಗಳು ಅವಿರತವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಸಾಲ ಮನ್ನಾ ಸಾಕಾಗುವುದಿಲ್ಲ. ಏಕೆಂದರೆ ಇದರಿಂದ ಲಾಭವಾಗುವುದು ಸಾಂಸ್ಥಿಕ ಮೂಲಗಳಿಂದ ಸಾಲ ಪಡೆದ ರೈತರಿಗೆ ಮಾತ್ರ. ಅದೂ ಬ್ಯಾಂಕುಗಳು ಸಾಲ ಮನ್ನಾವನ್ನು ಒಪ್ಪಿ ಮುಂದಿನ ಬೆಳೆಗೆ ಸಾಲವನ್ನು ಕೊಡುವುದಾದರೆ ಮಾತ್ರ. ಹಾಗಾಗದಿದ್ದರೆ ಅದರ ಲಾಭ ಕೇವಲ ಬ್ಯಾಂಕುಗಳಿಗೆ ಸೀಮಿತವಾಗುತ್ತದೆ.  ವ್ಯಾಪಕ ಮಟ್ಟದಲ್ಲಿ ಸಾಲ ಮನ್ನಾ ಮಾಡಲು ಸರ್ಕಾರದ ಬೊಕ್ಕಸದಲ್ಲಿ ಹಣವೂ ಇಲ್ಲ. ರೈತರಿಗೆ ತಕ್ಷಣಕ್ಕೆ ಬೇಕಿರುವುದು ಮುಂದಿನ ಬೆಳೆಗೆ ಬೇಕಾದ ಹೂಡಿಕೆ. ತಾವು ಕೃಷಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಬರಬಹುದೆನ್ನುವ ನಂಬಿಕೆ. ಸಾಲ ಮನ್ನಾ ಈ ವಿಷಯಕ್ಕೆ ಒಂದು ದುರ್ಬಲ ಅಸ್ತ್ರವೇ ಸರಿ.

ಸಾಲ ಮನ್ನಾಕ್ಕೆ ಇರಬಹುದಾದ ಆರ್ಥಿಕ ಶಕ್ತಿ ಸರ್ಕಾರಕ್ಕೆ ಇರುವುದಾದರೆ, ಆ ದುಡ್ಡನ್ನು ರೈತರಿಗೇ ನೇರ ಪಾವತಿ ಮಾಡುವುದೇ ಹೆಚ್ಚು ಉತ್ತಮ. ಅದರಿಂದಾಗಿ ಸಾಂಸ್ಥಿಕ ಮೂಲಗಳಿಂದ ಸಾಲ ಪಡೆದ ರೈತರಿಗಲ್ಲದೇ ಬಡ್ಡಿ ವ್ಯಾಪಾರಿಗಳಿಂದ ಸಾಲ ಪಡೆದವರಿಗೂ, ಸಾಲ ಪಡೆದು ಮರುಪಾವತಿಸಿದ ರೈತರಿಗೂ, ಸಾಲವನ್ನೇ ಪಡೆಯದ ರೈತರಿಗೂ ಸಮಾನವಾಗಿ ಸಹಾಯವನ್ನು ಮಾಡಿದಂತಾಗುತ್ತದೆ. ಇದು ಸಾಧ್ಯವೇ?

ಇದಕ್ಕೊಂದು ಮಾದರಿಯಾಗಿ ನಮ್ಮ ಪಕ್ಕದ ತೆಲಂಗಾಣ ಜಾರಿಮಾಡಿರುವ ರೈತಬಂಧು ಯೋಜನೆಯಿದೆ. ಆ ರೂಪುರೇಷೆಗಳನ್ನು ಆಧಾರವಾಗಿಟ್ಟುಕೊಂಡು ನಮ್ಮ ಸರ್ಕಾರವೂ ಬಿತ್ತನೆಯ ಕಾಲಕ್ಕೆ ಒಂದು ಯೋಜನೆಯನ್ನು ತಯಾರಿಸಬಹುದು. ಇದು ತಕ್ಷಣದ ತೇಪೆಯೂ ಮುಂದುವರೆಸಬಹುದಾದ ಸಮಾಜ ಕಲ್ಯಾಣದ ಯೋಜನೆಯಾಗಿಯೂ ಪ್ರಸ್ತುತ. ಸಾಲ ಮನ್ನಾಕ್ಕಿಂತ ಇದು ಉತ್ತಮ ಹಾಗೂ ಸಮಾನತೆಯ ಮಾರ್ಗ.

ತೇಪೆಯ ನಂತರ ಏನು?: ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ (ನಂತರ ಶ್ವೇತ ಕ್ರಾಂತಿ)ಯನ್ನು ಬಿಟ್ಟರೆ ಬೇರೆ ಯಾವುದೇ ಸಫಲ ಕಾರ್ಯಕ್ರಮಗಳು ಕಾಣುವುದಿಲ್ಲ. ಹಸಿರು ಕ್ರಾಂತಿ ಆದದ್ದು ಹೇಗೆ? ಮತ್ತೊಂದು ಹಸಿರು ಕ್ರಾಂತಿ ಏಕೆ ಆಗುತ್ತಿಲ್ಲ?  ಆಗಬೇಕಾದ ಹಸಿರುಕ್ರಾಂತಿಯ ರೂಪುರೇಷೆಗಳೇನು? ಈ ಪ್ರಶ್ನೆಗಳನ್ನು ಪರಿಶೀಲಿಸೋಣ. ಭಾರತದ ಮಟ್ಟಿಗೆ ನಿಜವಾದ ಹಸಿರು ಕ್ರಾಂತಿಯಾದದ್ದು 60ರ ದಶಕದಲ್ಲಿ. ಅದು ತುಸು ಮಟ್ಟಿಗೆ 70ರ ದಶಕಕ್ಕೂ ಮುಂದುವರೆಯಿತು ಎನ್ನಬಹುದು. ಇದಕಿದ್ದ ಕಾರಣ ಜವಹರಲಾಲ ನೆಹರೂ ಮತ್ತು ಇಂದಿರಾ ಗಾಂಧಿಯವರ ಆಡಳಿತಾವಧಿಯ ದೂರದೃಷ್ಟಿಯಲ್ಲಿ. (ಆ ಕಾಲದ ದೂರದೃಷ್ಟಿ ವರ್ತಮಾನಕ್ಕೆ ಸರಿಹೊಂದುವುದಿಲ್ಲ ಎನ್ನುವುದನ್ನೂ ನೆನಪಿನಲ್ಲಿಟ್ಟುಕೊಳ್ಳೋಣ).

60-70ರ ದಶಕದ ಹಸಿರು ಕ್ರಾಂತಿ ಫಲಪ್ರದವಾಗುವುದರ ಹಿಂದೆ ಅನೇಕ ಅಂಶಗಳಿದ್ದವು. 1954ರಲ್ಲಿ ನಡೆಸಿದ ಅಖಿಲ ಭಾರತ ಋಣ ಸರ್ವೆ ವರದಿಯಂತೆ ಭಾರತೀಯ ಸ್ಟೇಟ್ ಬ್ಯಾಂಕಿನ ರಾಷ್ಟ್ರೀಕರಣ, ಸರ್ಕಾರದ ಪಾಲುದಾರಿಕೆಯಲ್ಲಿ ಸ್ಥಾಪನೆಯಾದ ಸಹಕಾರ ಸಂಘಗಳ ಆಂದೋಲನದಿಂದಾಗಿ ರೈತರು ತಮ್ಮದೇ ಸಂಸ್ಥೆಗಳಲ್ಲಿ, ಸಮೀಪದಲ್ಲಿ ಸುಲಭವಾಗಿ ಸಾಲ ದೊರೆಯುವ ವ್ಯವಸ್ಥೆಯೊಂದು ಸೃಷ್ಟಿಯಾಯಿತು. ನೆಹರೂ ಅವರ ದೂರದೃಷ್ಟಿಯಿಂದ ನಿರ್ಮಾಣವಾದ ಆಧುನಿಕ ಭಾರತದ ದೇವಾಲಯಗಳೆಂದು ಕರೆಸಿಕೊಂಡ ದೊಡ್ಡ ಅಣೆಕಟ್ಟು ಯೋಜನೆಗಳು ಕೃಷಿಗೆ ನೀರಾವರಿಯನ್ನು ಒದಗಿಸಿದುವು.  ಕೃಷಿ ತಜ್ಞ (1970ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ) ನೋರ್ಮನ್ ಬೋರ್ಲಾಗ್ ಅವರನ್ನು ಅಂದಿನ ಕೃಷಿ ಮಂತ್ರಿಗಳಾದ ಸಿ.ಸುಬ್ರಮಣ್ಯಂ ಅವರು ನಮ್ಮ ದೇಶಕ್ಕೆ ಬರಮಾಡಿಕೊಂಡು ವಿಸ್ತೃತ ಕ್ಷಾಮವನ್ನು ಕಂಡಿದ್ದ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಅದೇ ಕಾಲಕ್ಕೆ ಎಂ.ಎಸ್.ಸ್ವಾಮಿನಾಥನ್ ಭಾರತೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಶೋಧನೆ ನಡೆಸಿ, ಮಿಶ್ರ ತಳಿಯ ಗೋಧಿ ಮತ್ತು ಭತ್ತವನ್ನು ಆವಿಷ್ಕಸಿದ್ದರು. ಇಂದಿನ ಸರ್ಕಾರ ‘ದೇಶದ್ರೋಹಿ’ ಎಂಬಂತೆ ಕಾಣುವ ಫೋರ್ಡ್ ಫೌಂಡೇಶನ್ ಮೂಲ ಬೀಜಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಭಾರತದಲ್ಲಿ ಕೃಷಿ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲು ಧನ ಮತ್ತು ತಾಂತ್ರಿಕ ಸಹಾಯವನ್ನು ಮಾಡಿತ್ತು. ದೇಶದಲ್ಲಿ ರಸಗೊಬ್ಬರ ಕಾರ್ಖಾನೆಗಳು ಆರಂಭಗೊಂಡವು. ಮತ್ತು ಈ ಎಲ್ಲವನ್ನೂ ರೈತರಿಗೆ ತಲುಪಿಸಲು ಕೃಷಿ ತಜ್ಞರು ಗ್ರಾಮಗಳಲ್ಲಿ ಓಡಾಡುತ್ತಿದ್ದರು.

ಎರಡನೇ ಘಟ್ಟದಲ್ಲಿ ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿ ಬ್ಯಾಂಕುಗಳೂ ಗ್ರಾಮೀಣ ಪ್ರದೇಶಗಳಿಗೆ ಹೋಗುವಂತೆ ಮಾಡಿದ್ದರಷ್ಟೇ ಅಲ್ಲದೆ ಕೃಷಿಗೆ ವಿಶೇಷವಾಗಿ ಸಾಲ ನೀಡುವ ಏರ್ಪಾಟನ್ನು ಮಾಡಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ರೋಹಿಣಿ ಪಾಂಡೆ ಮತ್ತು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ಗೆ ಸೇರಿದ ರಾಬನ್ ಬರ್ಗಸ್ ಒಂದು ಅಧ್ಯಯನದಲ್ಲಿ ಬ್ಯಾಂಕುಗಳು ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ತೆರೆದಿದ್ದರಿಂದ ಬಡತನವು ಕಡಿಮೆಯಾಯಿತು ಎನ್ನುವುದನ್ನು ಸಾಕ್ಷ್ಯಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ನಾನು ಹೇಳಹೊರಟಿರುವುದು ಇಷ್ಟೇ. ಸಾಲ ಮನ್ನಾದ ತೇಪೆಯಿಂದ ಕೃಷಿಯ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ. ಹಿಂದಿನ ಹಸಿರು ಕ್ರಾಂತಿಯ ಯಶಸ್ಸಿನ ಹಿಂದೆ ಸಹಕಾರ ಸಂಘಗಳು, ಕೃಷಿ ಸಾಲ, ರಸಗೊಬ್ಬರ, ಕೃಷಿ ಸಂಶೋಧನೆಯಿಂದ ಬಂದ ಮಿಶ್ರತಳಿ ಬೀಜ, ಅಣೆಕಟ್ಟುಗಳಿಂದ ಬಂದ ನೀರಾವರಿ, ಕೀಟನಾಶಕಗಳು ಮತ್ತು ಮಾರುಕಟ್ಟೆಯ ಎಲ್ಲ ಅಂಶಗಳೂ ಇದ್ದವು. ಈಗ ಎರಡನೆ ಹಸಿರು ಕ್ರಾಂತಿಯೊಂದು ನಡೆಯಬೇಕಾದರೆ ಮೊದಲನೆಯದ್ದರ ಯಶಸ್ಸಿಗೆ ಕಾರಣವಾದ ಅಂಶಗಳಷ್ಟೇ ಸಾಕಾಗುವುದಿಲ್ಲ.

ಅರವತ್ತರ ದಶಕದ ಆಲೋಚನಾ ಲಹರಿಗೂ ಇಂದಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಯಡಿಯೂರಪ್ಪನವರು ಪ್ರಸ್ತಾಪಿಸಿದ್ದ ₹ 1.5 ಲಕ್ಷ ಕೋಟಿಯ ಸುಜಲಾಂ ಸುಫಲಾಂ ಯೋಜನೆಯಡಿ ದೊಡ್ಡ ನೀರಾವರಿ ಯೋಜನೆಗಳನ್ನೂ ಜಾರಿಗೊಳಿಸುವ ಅದರಲ್ಲೂ ಮುಖ್ಯವಾಗಿ ಅಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಮಾತಾಡಿದ್ದರು. ಬಿಜೆಪಿಯ ಪ್ರಣಾಳಿಕೆಯಲ್ಲಿ ನಿಖರವಾಗಿ ಅಲ್ಲದೇ ಹೋದರೂ ನದಿಗಳ ಜೋಡಣೆಯ ಪ್ರಸ್ತಾಪವೂ ಇತ್ತು. ಕಾಂಗ್ರೆಸ್ ಪಕ್ಷ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಮಾತಾಡುತ್ತಿದೆ. ಜನತಾದಳ (ಜಾ) ದೊಡ್ಡ ನೀರಾವರಿಯ ಮಾತಾಡಿಲ್ಲ. ಅರ್ಧ ಮುಗಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳ್ಳಿಸುವುದು ಆದ್ಯತೆ ಆಗಬೇಕು ನಿಜ. ಆದರೆ ಪರಿಸರದ ಬಗ್ಗೆ ಎಚ್ಚರ, ಭೂಸ್ವಾಧೀನ ಮಾಡಿಕೊಳ್ಳುವುದಲ್ಲಿರುವ ಸಂಕೀರ್ಣತೆಗಳನ್ನೂ ಗಮನಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ, ಸೂಕ್ಷ್ಮ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಮಾತಾಡಬೇಕಾಗಿದೆ. ಹನಿ ಮತ್ತು ತುಂತುರು ನೀರಾವರಿ ಹಾಗೂ ಕಡಿಮೆ ನೀರು ಬಳಸಿ ಬೆಳೆತೆಗೆಯುವ ತಂತ್ರಜ್ಞಾನವನ್ನು ವಿಸ್ತಾರವಾಗಿ ಉಪಯೋಗಿಸಿಕೊಳ್ಳಬೇಕಾದ ವಿಚಾರ ಮಾಡಬೇಕಾಗಿದೆ.

ಮಿಶ್ರತಳಿ ಬೀಜಗಳನ್ನು ಆವಿಷ್ಕರಿಸಿದ ಸ್ವಾಮಿನಾಥನ್ ಅವರೇ ಈಗ ಸಾವಯವ ಕೃಷಿಯ ಮಾತಾಡುತ್ತಿದ್ದಾರೆ. ಹಸಿರು ಕ್ರಾಂತಿಯಾದ ಪಂಜಾಬಿನಲ್ಲೇ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಕೀಟನಾಶಕಗಳು ಮಣ್ಣಿಗೆ ಸೇರಿ ಮಣ್ಣಿನ ಗುಣಮಟ್ಟವನ್ನು ನಾಶಮಾಡಿರುವುದನ್ನು ನಾವು ಕಂಡಿದ್ದೇವೆ. ನೀರನ್ನು ಕಡಿಮೆ ಬಳಸುವ ಸಿಸ್ಟಮ್ಯಾಟಿಕ್ ರೈಸ್ ಇಂಟೆನ್ಸಿಫಿಕೇಷನ್  ಅಥವಾ ಕ್ರಮಬದ್ಧವಾಗಿ ಹೆಚ್ಚು ಇಳವರಿ ಪಡೆಯುವ ತಂತ್ರದ ಬಳಕೆ ಅಗತ್ಯ. ಹಾಗೆಯೇ ಕೀಟನಾಶಕ ರಹಿತ ಕೃಷಿಯನ್ನು ಕೈಗೊಳ್ಳಬೇಕಾಗಿದೆ. ದೊಡ್ಡ ಯೋಜನೆಗಳಿಗಿಂತ ವಿಕೇಂದ್ರೀಕೃತ ಉಪಕ್ರಮಗಳು ಈ ಬಗೆಯ ಕೃಷಿಗೆ ಪೂರಕ.

ಮೂರೂ ಪಕ್ಷಗಳ ಪ್ರಣಾಳಿಕೆಗಳನ್ನು ಕಂಡಾಗ ನಮಗೆ ವೇದ್ಯವಾಗುವುದು ಎಲ್ಲರೂ ಮಾರುಕಟ್ಟೆಗೆ ಸಂಬಂಧಿಸಿದ ಘೋಷಣೆಗಳನ್ನೇ ಹೆಚ್ಚಾಗಿ ಮಾಡಿದ್ದಾರೆ ಎಂಬುದು. ಮಾರುಕಟ್ಟೆಯ ಸುಧಾರಣೆ, ಶೀತಲೀಕರಣ ಘಟಕಗಳು, ಆಹಾರ ಪಾರ್ಕುಗಳು ಎಲ್ಲಾ ಪ್ರಣಾಳಿಕೆಗಳಲ್ಲಿಯೂ ಮಾರುಕಟ್ಟೆ ಮೂಲಸೌಕರ್ಯದ ಮಾತೇ ತುಂಬಿಕೊಂಡಿದೆ. ಇದರ ಬದಲಿಗೆ ಕೃಷಿ ಕ್ಷೇತ್ರದ ವೈವಿಧ್ಯ, ಇಳುವರಿಯ ಹೆಚ್ಚುವಿಕೆ, ನೀರು ಮತ್ತು ಇತರ ಸಂಪನ್ಮೂಲಗಳ ಜಾಗರೂಕ ಬಳಕೆ ಮತ್ತು ಉತ್ಪಾದಕತೆಯ ಮಾತನ್ನು ನಾವು ಹೆಚ್ಚಾಗಿ ಆಡಬೇಕಾಗಿದೆ. ಮೂಲ ಬಿಕ್ಕಟ್ಟಿರುವುದು ಉತ್ಪಾದನೆ-ಉತ್ಪಾದಕತೆಯಲ್ಲಿ. ಮಾರುಕಟ್ಟೆಯಲ್ಲಿ ಬಿಕ್ಕಟ್ಟಾದರೆ ಸರ್ಕಾರ ಮಧ್ಯ ಪ್ರವೇಶಿಸಿ ತೇಪೆಯ ಕೆಲಸವನ್ನು ಯಾವತ್ತಿದ್ದರೂ ಮಾಡಬಹುದು. ಈಗ ಬೇಕಿರುವುದು ಸುಸ್ಥಿರವಾದ ‘ಮೋರ್ ಕ್ರಾಪ್ ಪರ್ ಡ್ರಾಪ್’ ಅಥವಾ ಪ್ರತೀ ಹನಿಗೂ ಹೆಚ್ಚು ಬೆಳೆಯುವ ಯೋಜನೆ. ರಾಸಾಯನಿಕ ಗೊಬ್ಬರ, ವಿದ್ಯುತ್ತು, ನೀರಿನ ಅತಿಬಳಕೆ, ಕೀಟನಾಶಕಗಳ ಅವಿರತ ಬಳಸುವಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಾ ಹೋಗುತ್ತಿದೆ. ಅದನ್ನು ಕಡಿಮೆ ಮಾಡುವುದರ ಮಾರ್ಗ ಈಗಿನ ಸಮಸ್ಯೆಗೆ ಮುಖ್ಯ ಪರಿಹಾರ. ಇದಕ್ಕೆ ವಿಕೇಂದ್ರೀಕೃತವಾದ, ಸ್ಥಳೀಯವಾದ ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ.

ಚುನಾವಣೆಗೆ ಮುನ್ನ ‘ಪ್ರಜಾವಾಣಿ’ ಏರ್ಪಡಿಸಿದ್ದ ಸಂವಾದದಲ್ಲಿ ಕುಮಾರಸ್ವಾಮಿಯವರು ಇಸ್ರೇಲಿ ತಂತ್ರಜ್ಞರನ್ನು ಭಾರತಕ್ಕೆ ಕರೆತಂದು ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುವ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸುವುದಾಗಿ ಹೇಳಿದ್ದರು. ಅಷ್ಟು ದೂರ ಹೋಗುವುದೇ ಬೇಕಿಲ್ಲ. ಟಾಟಾ ದತ್ತಿ ನಿಧಿಗಳು ನಡೆಸುತ್ತಿರುವ ಸಮಗ್ರ ಜೀವನೋಪಾಯಕ್ಕಾಗಿ ಸಾಮೂಹಿಕ ಉಪಕ್ರಮಗಳ ಕಾರ್ಯಕ್ರಮದಲ್ಲಿ ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಲ್ಲಿ ‘ಲಖ್ಪತಿ ಕಿಸಾನ್ ಯೋಜನಾ’ ಎನ್ನುವ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಹೆಚ್ಚಾಗಿ ಆದಿವಾಸಿಗಳಿರುವ ಪ್ರದೇಶದಲ್ಲಿರುವ ಈ ಯೋಜನೆಯಿಂದ ಕಲಿಯಬಹುದಾದದ್ದು ಬಹಳಷ್ಟು ಇರಬಹುದು.

ಈ ಯೋಜನೆ, ಒಂದು ನಿಯಮಿತ ಅವಧಿಯಲ್ಲಿ ರೈತರು ವರ್ಷಕ್ಕೆ ಒಂದು ಲಕ್ಷ ಆದಾಯ ಪಡೆಯುವಂತೆ ಮಾಡುತ್ತದೆ. ಪ್ರತಿ ಗ್ರಾಮದಲ್ಲೂ ಅಲ್ಲಿರುವ ರೈತರ ಜೊತೆ ಮಾತುಕತೆ ನಡೆಸಿ, ಅವರಿಗಿರುವ ಸಂಪನ್ಮೂಲಗಳನ್ನು ಅರ್ಥಮಾಡಿಕೊಂಡು ಮುಖ್ಯವಾಗಿ ಕೃಷಿಯ ಉತ್ಪಾದಕತೆ ಮತ್ತು ಒಂದೇ ಬೆಳೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶ. ಭತ್ತದಂತಹ ಬೆಳೆಯಿದ್ದರೆ ಅದನ್ನು ಕ್ರಮಬದ್ಧ ಬೆಳವಣಿಗೆಯ ತಂತ್ರದ ವ್ಯಾಪ್ತಿಗೆ ತರುವುದು. ಮತ್ತು ಒಂದಿಷ್ಟು ಜಾಗದಲ್ಲಿ ವರ್ಷಕ್ಕೆ ಮೂರಾದರೂ ತರಕಾರಿ ಬೆಳೆಯುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ರೈತನ ಶ್ರಮ ಕಡಿಮೆ ಮಾಡುವುದಕ್ಕೆ ಒತ್ತು ನೀಡಲಾಗಿದೆ. ಇದರ ಫಲವಾಗಿ ಕಳೆಗೆ ಅವಕಾಶವೇ ಇಲ್ಲದಿರುವ ಉಪಾಯಗಳು, ಹನಿ ನೀರಾವರಿ ಮತ್ತು ಅದರ ಮೂಲಕವೇ ರಸಗೊಬ್ಬರ ಪೂರೈಕೆಯಂಥ ತಂತ್ರಗಳು ಇಳುವರಿಯನ್ನು ಕ್ರಾಂತಿಕಾರಕವಾಗಿ ಹೆಚ್ಚಿಸಿದೆ. ಭೂಮಿ ಇಲ್ಲದವರಿಗೆ ಸ್ಥಳೀಯ ಸಂಪನ್ಮೂಲಕ್ಕನುಸಾರವಾಗಿ ಮೇಕೆ, ಹಂದಿ, ಕೋಳಿ, ಮೀನುಗಾರಿಕೆ, ರೇಷ್ಮೆಯಂತಹ ಇತರ ಉಪಾಧಿಗಳನ್ನೂ, ಅಲ್ಲೇ ಇದ್ದ ಉದ್ಯಮಶೀಲ ಯುವಕರು ನರ್ಸರಿಗಳು ಸ್ಥಾಪಿಸುವಂತೆ ಮಾಡಿ ತರಕಾರಿ ಸಸಿಗಳು ಸ್ಥಳೀಯವಾಗಿಯೇ ರೈತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಸುಮಾರು ಐದು ವರ್ಷದ ಅವಧಿಯಲ್ಲಿ  ಒಂದು ಗ್ರಾಮದಲ್ಲಿರುವ ಅಷ್ಟೂ ಸಣ್ಣ ರೈತರು ಲಖ್ಪತಿಗಳಾಗುವುದನ್ನ ನಾವು ಕಂಡಿದ್ದೇವೆ. ಇದು ಒಂದು ಉದಾಹರಣೆಯಷ್ಟೇ. ಪ್ರದಾನ್ ಸಂಸ್ಥೆಯವರು ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹಿತ್ತಿಲ ಜಾಗವನ್ನು ಕೋಳಿಸಾಕಣೆಗೆ ಬಳಸುವುದನ್ನು ಕಲಿಸಿ ಕುಟುಂಬಗಳ ಪೌಷ್ಟಿಕತೆಯನ್ನು ನಿಯಮಿತ ಆದಾಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಯಾವುದೇ ರೈತರು, ಸಾಲ ಮನ್ನಾ ಮಾಡಬೇಕೆಂದು ಕೇಳುವ ಪರಿಸ್ಥಿತಿಯಾಗಲೀ ಅಥವಾ ಬಿಕ್ಕಟ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಾಗಲೀ ಉಂಟಾಗಿಲ್ಲ.

ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಬ್ಯಾಂಕುಗಳು ಬೇರೆ ಬೇರೆ ಬಗೆಯಲ್ಲಿ ನಷ್ಟದತ್ತ ಸಾಗುತ್ತಿವೆ. ಈ ಬ್ಯಾಂಕುಗಳಿಗೆ ಪರ್ಯಾಯವಾಗಿ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಬರುವ ಸಹಕಾರ ಸಂಘಗಳಿಗೆ ಕಾಯಕಲ್ಪ ಮಾಡುವ ಯೋಜನೆಯನ್ನು ಕುಮಾರಸ್ವಾಮಿಯವರು ಹಮ್ಮಿಕೊಳ್ಳಬೇಕಾಗಿದೆ. ಪತ್ತಿನ ಸಹಕಾರ ವ್ಯವಸ್ಥೆಯನ್ನು ಕೇರಳದ ಮಾದರಿಯಾಗಿ ಎರಡು ಹಂತಗಳಿಗೆ ಇಳಿಸಿದರೆ ಸ್ಥಳೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಕಾಯಕಲ್ಪ ಮಾಡಿದಂತೆ ಆಗುತ್ತದೆ. ಪ್ರಾಥಮಿಕ ಹಂತದಲ್ಲಿರುವ ಪತ್ತಿನ ಸಹಕಾರ ಸಂಘಗಳ ಸವಾಲುಗಳನ್ನೂ ಗುರುತಿಸಿ ಅದಕ್ಕೊಂದು ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳಬೇಕಿದೆ – ಅದರಿಂದಾಗಿ ಕೃಷಿ ಸಾಲಕ್ಕೂ, ಉತ್ಪನ್ನಗಳ ಮಾರಾಟಕ್ಕೂ ಅನುಕೂಲವಾಗಬಹುದು. ಕರ್ನಾಟಕದಲ್ಲೇ ಹುಟ್ಟಿದ ಹೊಸ ತಲೆಮಾರಿನ ಮೂರು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳೂ ಇವೆ. ಅವುಗಳನ್ನು ನಮ್ಮ ಕೃಷಿಕ್ಷೇತ್ರಕ್ಕೆ ಹಣಕಾಸಿನ ಸಹಾಯ ಮಾಡುವಂತೆ ಪ್ರೇರೇಪಿಸಬೇಕಾಗಿದೆ.

ಕೃಷಿ ಬಿಕ್ಕಟ್ಟಿನ ಪರಿಹಾರವನ್ನು ನೀಡುವ ಅನೇಕ ಸಣ್ಣ ಪುಟ್ಟ ಯೋಜನೆಗಳು ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯಲ್ಲಿ ದೇಶದ ಹಲವೆಡೆ ಜಾರಿಗೆ ಬಂದಿವೆ. ಇವುಗಳನ್ನು ಸಮಗ್ರವಾಗಿ ಗ್ರಹಿಸಿ ಕರ್ನಾಟಕಕ್ಕೆ ಬೇಕಿರುವ ಕೃಷಿ ಬಿಕ್ಕಟ್ಟು ನಿರ್ವಹಣೆಯ ದೀರ್ಘಕಾಲೀನ ಯೋಜನೆಯನ್ನು ರೂಪಿಸುವುದಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಬೇಕು. ಪರಿಸರ ಸ್ನೇಹಿಯಾದ ಈ ವಿಕೇಂದ್ರೀಕೃತ ಉಪಾಯಗಳು ಸರ್ಕಾರದ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಆದರೆ ರೈತರು ತಮ್ಮ ಮೇಲಿನ ಹೊರೆಯನ್ನು ನಿವಾರಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತವೆ.

ಲೇಖಕರು ಐಐಎಂ–ಬಿಯಲ್ಲಿ ಸಂದರ್ಶಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT