ಭಾನುವಾರ, ಫೆಬ್ರವರಿ 23, 2020
19 °C
ಸರ್ಕಾರಿ ಜಾಗದ ಮೇಲೆ ಎಲ್ಲರ ಕಣ್ಣು * ಭೂಮಾಫಿಯಾ ಕೈವಾಡ * ಸ್ಥಳೀಯರ ಆರೋಪ

ಸ್ಮಶಾನ ಒತ್ತುವರಿಗೆ ಕಡಿವಾಣ ಬೀಳುವುದೇ ?  

ವಡ್ಡನಹಳ್ಳಿ ಭೋಜ್ಯಾನಾಯ್ಕ್ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸ್ಮಶಾನದ ಜಾಗ ಒತ್ತುವರಿಯಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಮೇಲೆ ಪಾಳು ಕೊಂ‍ಪೆಯಾಗಿದ್ದ ಸ್ಮಶಾನ, ಗೋಮಾಳ, ಖರಾಬು ಸರ್ಕಾರಿ ಜಾಗದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನಗರ ಪ್ರದೇಶದ ಮುಖ್ಯ ರಸ್ತೆಯಲ್ಲಿ ಚದರಡಿ ₹2ಸಾವಿರದಿಂದ ₹6ಸಾವಿರದವರೆಗೆ ಇದೆ. ಒತ್ತುವರಿದಾರರಿಗೆ ಕಡಿವಾಣ ಹಾಕುವವರು ಯಾರು ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸ್ಮಶಾನ ಇರುವ ಬಹುತೇಕ ಜಾಗದಲ್ಲಿ ಮೃತರ ನೆನಪಿಗಾಗಿ ನಿರ್ಮಾಣ ಮಾಡಿರುವ ಸಮಾಧಿಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ನೆಲಸಮ ಮಾಡಲಾಗಿದೆ. ರಾತ್ರೋರಾತ್ರಿ ತಡೆಗೋಡೆ ನಿರ್ಮಾಣ ಮಾಡಿಕೊಂಡು ಅತಿಕ್ರಮ ಪ್ರವೇಶ ಮಾಡಲಾಗಿದೆ. ಸತ್ತವರನ್ನು ಹೂಳಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ಅಳಲು. 

‘ಸರ್ಕಾರ 2016ರಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಸರ್ಕಾರಿ ಜಾಗ, ಗೋಮಾಳ, ರಾಜ ಕಾಲುವೆ, ಕೆರೆಯಂಗಳ ಮತ್ತು ಸ್ಮಶಾನ ಒತ್ತುವರಿ ತೆರವುಗೊಳಿಸಿ ಸ್ಮಶಾನ ಮತ್ತು ಕೆರೆಯಂಗಳ ಹದ್ದುಬಸ್ತು ಮಾಡಿ ತಂತಿಬೇಲಿ ತಡೆಗೋಡೆ ನಿರ್ಮಿಸುವಂತೆ ಭೂಮಾಪನ ಇಲಾಖೆ ಹಾಗೂ ಸ್ಥಳೀಯ ಪುರಸಭೆ ಹಾಗೂ ನಗರ ಸಭೆಗಳಿಗೆ ಆದೇಶ ಮಾಡಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ನಾಲ್ಕಾರು ದಿನ ಒತ್ತುವರಿ ಜಾಗಗಳ ಆಳತೆ ಮಾಡಿ ಕೈಬಿಟ್ಟಿರುವುದು ಹೊರತುಪಡಿಸಿದರೆ ನಂತರ ಯಾವುದೇ ತೆರವು ಕಾರ್ಯಾಚರಣೆ ನಡೆಸಿಲ್ಲ. ಅಧಿಕಾರಿಗಳ ಕಣ್ಮಂದೆಯೇ ಒತ್ತುವರಿಯಾಗುತ್ತಿದ್ದರೂ ಕಡಿವಾಣ ಹಾಕುವ ಪ್ರಯತ್ನ ನಡೆದಿಲ್ಲ. ಇದರಲ್ಲಿ ಭೂಮಾಫಿಯಾ ಕೈವಾಡ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಣದ ದುರಾಸೆಗಾಗಿ ಸಾರ್ವಜನಿಕರಿಗೆ ಮೀಸಲಿಟ್ಟ ಸ್ಮಶಾನ ಜಾಗ ಅಪೋಶನ ಮಾಡುತ್ತಾ ಹೋದರೆ ಭವಿಷ್ಯದಲ್ಲಿ ಮೃತರನ್ನು ಪೌರಕಾರ್ಮಿಕರು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು. ದೇವನಹಳ್ಳಿ ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧೆಡೆ ಇರುವ ರುದ್ರಭೂಮಿ ವಿಸ್ತೀರ್ಣ 800ಎಕರೆಗೂ ಹೆಚ್ಚು ಎಂದು ಸಂಬಂಧಿಸಿದ ಇಲಾಖೆ ದಾಖಲೆಗಳಲ್ಲಿ ನಮೂದು ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)