ಭಾನುವಾರ, ಆಗಸ್ಟ್ 18, 2019
21 °C

ರಾಸುಗಳ ಮೇವಿಗಾಗಿ ದ್ರಾಕ್ಷಿ ಸೊಪ್ಪಿಗೆ ಮೊರೆಹೋದರು !

Published:
Updated:
Prajavani

ವಿಜಯಪುರ: ತೀವ್ರ ಮಳೆಯ ಅಭಾವದಿಂದಾಗಿ ದನಕರುಗಳಿಗೆ ಹಸಿರು ಮೇವಿನ ಕೊರತೆಯಿಂದಾಗಿ ರೈತರು ಅನಿವಾರ್ಯವಾಗಿ ಹೆಚ್ಚು ರಾಸಾಯನಿಕ ಔಷಧಿಗಳನ್ನು ಸಿಂಪರಣೆ ಮಾಡಿ ಬೆಳೆಯುತ್ತಿರುವ ದ್ರಾಕ್ಷಿ ಸೊಪ್ಪನ್ನು ಮೇವಿಗಾಗಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ ಎಂದು ರೈತ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನೆ ನಂಬಿಕೊಂಡು ಜೀವನ ಮಾಡುತ್ತಿರುವ ರೈತ ಕುಟುಂಬಗಳು ಬೇಸಿಗೆಯಲ್ಲೆ ಮೇವಿಗಾಗಿ ಪರದಾಡಿದ್ದಾರೆ. ಕೆಲವು ರೈತರು ರಾಸುಗಳನ್ನು ಮಾರಾಟ ಮಾಡಿಬಿಟ್ಟಿದ್ದಾರೆ. ಕನಿಷ್ಠ ಮಳೆಗಾಲದಲ್ಲಾದರೂ ಹಸಿರು ಮೇವು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ರಾಸು ಉಳಿಸಿಕೊಂಡು ಹಸಿರು ಮೇವು ಖರೀದಿ ಮಾಡಿಕೊಂಡು ಬಂದು ಮೇಯಿಸುತ್ತಿದ್ದೇವು. ಮೇವಿನ ಖರೀದಿಗಾಗಿಯೇ ಸಾಕಷ್ಟು ಸಾಲ ಮಾಡಿಕೊಂಡಿದ್ದೇವೆ. ಈಗಲೂ ಖರೀದಿ ಮಾಡಲಿಕ್ಕೆ ಕಷ್ಟವಾಗುತ್ತಿದೆ’ ಎಂದರು.

ರೈತ ಪಿಳ್ಳಪ್ಪ ಮಾತನಾಡಿ, ‘ಬೇಸಿಗೆಯಲ್ಲಿ ಬೇವಿನ ಮರಗಳಲ್ಲಿನ ಸೊಪ್ಪು ಬಿಟ್ಟಿಲ್ಲ, ಅರಳಿ ಸೊಪ್ಪು, ಹೊಂಗೆ ಸೊಪ್ಪನ್ನು ಹಾಕಿ ರಾಸುಗಳನ್ನು ಕಾಪಾಡಿಕೊಂಡಿದ್ವಿ, ಸರ್ಕಾರದಿಂದ ಭತ್ತದ ಹುಲ್ಲನ್ನು ವಿತರಣೆ ಮಾಡುತ್ತಿದ್ದರು. ಈಗ ನಿಲ್ಲಿಸಿಬಿಟ್ಟಿದ್ದಾರೆ. ಆದ್ದರಿಂದ ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈಗಲೇ ಇಂತಹ ಪರಿಸ್ಥಿತಿ ಇದ್ರೆ, ಮುಂದೆ ಏನ್ ಮಾಡಬೇಕು ಎನ್ನುವುದೇ ತೋಚುತ್ತಿಲ್ಲ’ ಎಂದರು.

ಈಗ ರೈತರಿಗೆ ಇರುವ ಏಕೈಕ ದಾರಿ ದ್ರಾಕ್ಷಿ ತೋಟಗಳಿಂದ ಸೊಪ್ಪು ತಂದು ರಾಸುಗಳಿಗೆ ಹಾಕುತ್ತಿದ್ದೇವೆ.
ಇದು ಜಾಸ್ತಿಯಾದರೆ ಗಂಜಲ ರಕ್ತಮಿಶ್ರಿತವಾಗಿರುವಂತೆ ಬರುತ್ತದೆ. ಇದನ್ನು ಹಾಕದಿದ್ದರೆ ಬೇರೆ ವಿಧಿಯಿಲ್ಲ. ರಾಸಾಯನಿಕ ಔಷಧಿಗಳನ್ನು ಹೆಚ್ಚು ಸಿಂಪಡಣೆ ಮಾಡಿರುತ್ತಾರೆ. ಈ ಸೊಪ್ಪನ್ನು ರಾಸುಗಳು ನಿರಂತರವಾಗಿ ತಿನ್ನುವುದರಿಂದ ಒಂದು ವೇಳೆ ಗರ್ಭ ಧರಿಸಲಿಕ್ಕೇನಾದರೂ ಸಮಸ್ಯೆಯಾಗುತ್ತಾ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ ಎಂದರು.

ಪಶು ವೈದ್ಯ ಇಲಾಖೆಯ ವೈದ್ಯ ಡಾ.ನಾರಾಯಣಸ್ವಾಮಿ ಮಾತನಾಡಿ, ‘ಮಳೆಯ ಕೊರತೆಯಿಂದಾಗಿ ರೈತರು ರಾಸುಗಳಿಗೆ ಮೇವು ಒದಗಿಸಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಪುನಃ ಮೇವು ವಿತರಣೆ ಮಾಡಲಾಗುತ್ತಿದೆ. ದ್ರಾಕ್ಷಿ ತೋಟಗಳಿಗೆ ರಾಸಾಯನಿಕ ಔಷಧಿಗಳು ಸಿಂಪಡಣೆ ಮಾಡಿದ ನಂತರ ಮೂರು ದಿನಗಳವರೆಗೂ ಸೊಪ್ಪು ರಾಸುಗಳಿಗೆ ಕೊಡಬಾರದು. ನಂತರ ಸ್ವಲ್ಪ ಒಣಗಿಸಿ ಕೊಡಬಹುದು ದ್ರಾಕ್ಷಿ ಸೊಪ್ಪಿನಲ್ಲೂ ಉತ್ತಮ ಪೋಷಕಾಂಶಗಳು ಇರುತ್ತವೆ’ ಎಂದರು.

 

Post Comments (+)