ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ‌ ಶುರು

ಮೊದಲ ಸ್ಥಾನ ಪಡೆಯಲು ತರಬೇತಿ । ನಾಳೆ ತಾಯಂದಿರ ಸಮಾವೇಶ
Published 28 ಡಿಸೆಂಬರ್ 2023, 15:39 IST
Last Updated 28 ಡಿಸೆಂಬರ್ 2023, 15:39 IST
ಅಕ್ಷರ ಗಾತ್ರ

ಹೊಸಕೋಟೆ: ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದ, ಹೊಸಕೋಟೆ ತಾಲ್ಲೂಕು ಈ ಬಾರಿ ಮೊದಲನೇ ಸ್ಥಾನ ಪಡೆಯಲು ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಿದೆ.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು‌ ಅವರನ್ನು ಶಿಕ್ಷಣ ಇಲಾಖೆ ಹಾಗೂ ಆಯಾಯ ಶಾಲೆಗಳು ಅಣಿಗೊಳಿಸುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆ ಸೇರಿ 26 ಶಾಲೆಗಳಿವೆ.  1,844 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸಕೋಟೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಶೇ 98.03 ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಪಡೆದಿತ್ತು. ಈ ಬಾರಿ ಮೊದಲ ಸ್ಥಾನಕ್ಕೇರಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಕಳೆದ ಐದು ವರ್ಷಗಳ ಎಸ್‌ಎಸ್‌ಎಲ್‌ಸಿ ಮುಖ್ಯಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರ ಸಮೇತ ಸಿದ್ಧಪಡಿಸಿರುವ ಪ್ರಶ್ನೋತ್ತರ ಭಂಡಾರ, ಜಿಲ್ಲಾ ಮಟ್ಟದಲ್ಲಿ ಇಲಾಖೆ ಸಿದ್ಧಪಡಿಸಿರುವ ಬೆಳಗು ಎಂಬ ಎರಡೂ ಪುಸ್ತಕಗಳನ್ನು ವಿತರಿಸಲಾಗಿದೆ. ಅಲ್ಲದೆ ವಿಷಯ ಪರಿಣಿತರಿಂದ ಸಮಯ ಮತ್ತು ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮುಖ್ಯ ಶಿಕ್ಷಕರಿಂದ ಅಂತರ ಶಾಲಾ ಸಾಧನ ಮಟ್ಟ ಪರೀಕ್ಷಾ ತರಬೇತಿ, ಶಿಕ್ಷಕರಿಗೆ ವಿದ್ಯಾರ್ಥಿಗಳ ದತ್ತು ನೀಡುವುದು ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು‌ ಅಣಿಗೊಳಿಸಲಾಗುತ್ತಿದೆ.

Cut-off box - ನಾಳೆ ತಾಯಂದಿರ ಸಮಾವೇಶ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಸಿದ್ಧಗೊಳಿಸಲು ಇದೇ ಡಿ.30ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ತಾಯಂದಿರ ಸಮಾವೇಶವನ್ನು ಹರಳೂರು ಗುಡ್ಡದ ಸಪ್ತ ಮಾತೃಕೆಯರ ದೇಗುಲ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ 1500ಕ್ಕೂ ಹೆಚ್ಚು ತಾಯಂದಿರುವ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಡಯಟ್‌ನ ಹಿರಿಯ ಉಪನ್ಯಾಸಕ ಡಾ.ಎಚ್.ಆರ್.ಚಂದ್ರಶೇಖರ್ ಡಿಡಿಪಿಐ ಕೃಷ್ಣಮೂರ್ತಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಲಿದ್ದಾರೆ ಎಂದು ಬಿಇಒ ಎಸ್.ಕೆ.ಪದ್ಮನಾಭ್ ತಿಳಿಸಿದರು. ಮನೆಯೇ ಮೊದಲ ಪಾಠಶಾಲೆ ಎಂಬ ಪರಿಕಲ್ಪನೆಯಿಂದ ವಿದ್ಯಾಭ್ಯಾಸ ಪ್ರಾರಂಭವಾಗುತ್ತದೆ. ಆದ್ದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮೇಲೆ ಶಿಕ್ಷಕರು ಎಷ್ಟು ಪರಿಣಾಮ ಬೀರುತ್ತಾರೆ ತಾಯಂದಿರುವ ಅಷ್ಟೇ ಪರಿಣಾಮ ಬೀರುತ್ತಾರೆ. ಹೀಗಾಗಿ ಉತ್ತಮ ಫಲಿತಾಂಶಕ್ಕೆ ಮಕ್ಕಳನ್ನು ಹೇಗೆ ಪ್ರೇರೇಪಿಸಬೇಕು ಎಂಬುದು ಸಮಾವೇಶದಲ್ಲಿ ತಿಳಿಸಿಕೊಡಲಾಗುವುದು ಎಂದು ಬಿಇಒ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT