ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿಯಿಂದ ಹಿರೇ ಅಮಾನಿ ಕೆರೆಗೆ ಜೀವಕಳೆ

ತ್ಯಾಜ್ಯನೀರು ಸಂಸ್ಕರಿಸಿ ತುಂಬಿಸಿವ ಯೋಜನೆ ಇದಾಗಿದೆ
ಅಕ್ಷರ ಗಾತ್ರ

ದೇವನಹಳ್ಳಿ: ‘ಮರಳು ದಂಧೆಯ ಪರಿಣಾಮಕೆರೆಯಲ್ಲಿ ತ್ಯಾಜ್ಯ ತುಂಬಿತ್ತು. ನೀರು ಕುಡಿಯಲು ಹೋಗಿ ಮರಳಿನ ಗುಂಡಿಗಳಲ್ಲಿ ಬಿದ್ದು ಹಲವು ಜಾನುವಾರುಗಳು ಅಸು ನೀಗಿವೆ. ಹೂಳು ಹೊರಹಾಕಿ ‘ದೂದ್ ಗಂಗಾ’ ಮಾದರಿಯಲ್ಲಿ ಕೆರೆ ಅಭಿವೃದ್ಧಿ ಪಡಿಸಿ ಎಂದು ಅದೆಷ್ಟೋ ಬಾರಿ ಮನವಿ ಮಾಡಲಾಗಿತ್ತು’ ಎಂದು ಹಿಂದಿನ ದಿನಗಳನ್ನು ನೆನೆದರು ಹತ್ತು ವರ್ಷಗಳಿಂದ ಮೀನು ಸಾಗಾಣಿಕೆಗೆ ಕೆರೆ ಗುತ್ತಿಗೆ ಪಡೆದಿರುವ ಬೆಸ್ತರ ಸಂಘ ತಾಲ್ಲೂಕು ಘಟಕ ಸಂಸ್ಥಾಪಕ ಅಧ್ಯಕ್ಷ ಎಂ.‌ಆಂಜಿನಪ್ಪ.

ದೇವನಹಳ್ಳಿ ನಗರದಿಂದ ಮುಕ್ಕಾಲು ಕಿ.ಮೀ ದೂರವಿರುವ ಹಿರೇ ಅಮಾನಿ ಕೆರೆಯಿಂದ ಮರಳುಅಕ್ರಮವಾಗಿ ಲೂಟಿಯಾಗಿ ವಿಮಾನ ನಿಲ್ದಾಣದ ವಿವಿಧ ಕಾಮಗಾರಿಗಳಿಗೆ ಸಾಗಾಟ ಮಾಡಿದ ದಂಧೆಕೋರರು ಶ್ರೀಮಂತರಾದರು. ಒಂದೇ ಕೆರೆಯಲ್ಲಿ ಅಕ್ರಮ ಮರಳು ದಂಧೆಯಡಿ ಹತ್ತಾರು ಪ್ರಕರಣ ಠಾಣೆಯಲ್ಲಿ ದಾಖಲಾದವು. ಐದು ವರ್ಷಗಳಿಂದ ಮರಳು ದಂಧೆ ನಿಂತಿದೆ. ಆದರೆ ಅದರ ಪರಿಣಾಮವಾಗಿ ಕೆರೆಯಂಗಳದಲ್ಲಿ ಮಣ್ಣಿನ ರಾಶಿ ಬೆಟ್ಟದಂತಿದೆ. ಮಾತ್ರವಲ್ಲ ಕೆರೆಯಂಚಿನಲ್ಲಿ ಆಳವಾದ ಗುಂಡಿಗಳಿದ್ದು ಕೆರೆಗೆ ಬರುವ ನೀರು ಈ ಗುಂಡಿಗಳಲ್ಲೇ ಇಂಗಿ ಹೋಗುತ್ತಿದೆ. ಹಾಗಾಗಿ ತೂಬಿನವರೆಗೆ ನೀರು ಹರಿಯುವುದೇ ಇಲ್ಲ ಎನ್ನುತ್ತಾರೆ ಕೆರೆಯ ಅಕ್ಕಪಕ್ಕದ ಗ್ರಾಮದ ಸ್ಥಳೀಯರು.

ಕೆರೆ ಅಭಿವೃದ್ಧಿಯಾಗಿ ನೀರು ತುಂಬಿದರೆ ದೇವನಹಳ್ಳಿ ನಗರ ಹಾಗೂ ಕೆರೆಯ ಸುತ್ತಲಿನ ಐದಾರು ಕಿ.ಮೀ ವ್ಯಾಪ್ತಿಯಲ್ಲಿನ ನೂರಾರು ಕೊಳವೆ ಬಾವಿಗಳಿಗೆ ಮರುಜೀವ ಸಿಗಲಿದೆ. ಕೆರೆಯ ಪಕ್ಕದಲ್ಲಿ ಜಿಲ್ಲಾ ಮಟ್ಟದ ಅರಣ್ಯ ಇಲಾಖೆಯ ವೃಕ್ಷ ಉದ್ಯಾನವಿದೆ. ಕೆರೆಯು ನೀರಿನಿಂದ ಭರ್ತಿಯಾದರೆ ಅದಕ್ಕೆ ಇನ್ನಷ್ಟು ಕಳೆ ಬರುತ್ತದೆ. ಜೊತೆಗೆ ಪಕ್ಷಿಸಂಕುಲ ಹೆಚ್ಚಲಿದೆ. ಎನ್ನುತ್ತಾರೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೋಡಿಮಂಚೇನಹಳ್ಳಿ ನಾಗೇಶ್.

ಕೆರೆ ಜಲಾನಯನ ಪ್ರದೇಶದ ಒಟ್ಟು ವಿಸ್ತೀರ್ಣ 11.82 ಚ.ಕಿ.ಮೀ. ಈ ಪೈಕಿ ಜಲಾವೃತ ಪ್ರದೇಶದ ವಿಸ್ತೀರ್ಣ 87 ಹೆಕ್ಟೇರ್. ಅಚ್ಟುಕಟ್ಟು ಪ್ರದೇಶದ ವಿಸ್ತೀರ್ಣ 45.02 ಹೆಕ್ಟೇರ್ ಆಗಿದೆ. ಕೆರೆಯ ನೀರಿನ ಸಾಮರ್ಥ್ಯ 15.947 ಕ್ಯೂಬಿಕ್ ಮೀಟರ್ ಇದ್ದು ಟೆಂಡರ್‌ನಲ್ಲಿ ಪ್ರಸ್ತಾಪಿಸಿರುವಂತೆ ಪ್ರಸ್ತುತ 1.5 ಲಕ್ಷ ಕ್ಯೂಬಿಕ್ ಮೀಟರ್ ಹೂಳು ತೆಗೆಯಬೇಕಿದ್ದು 40 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಪಡೆದಿರುವ ಕಂಪನಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು.

ಬೆಂಗಳೂರಿನ ನಾಗವಾರ ಮತ್ತು ಹೆಬ್ಬಾಳ ಕೆರೆಯ ತ್ಯಾಜ್ಯ ನೀರು ಸಂಸ್ಕರಿಸಿ ಪೈಪ್ ಲೈನ್ ಮೂಲಕಕೆರೆಗೆ ತುಂಬಿಸುವ ಯೋಜನೆ ಇದಾಗಿದೆ. ಕೆಲವೇ ತಿಂಗಳಲ್ಲಿ ನೀರು ಹರಿಸುವ ಯೋಜನೆ ಆರಂಭಗೊಳ್ಳಲಿದ್ದು ಕೆರೆ ಅಭಿವೃದ್ಧಿ ಕೆಲಸವನ್ನು ತ್ವರಿತವಾಗಿ ಮುಗಿಸುವಂತೆ ಸರ್ಕಾರ ಆದೇಶಿಸಿದೆ ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು.

ಸರ್ಕಾರದ ಅನುದಾನದ ಮೇರೆಗೆ ಸಂಬಂಧ ಪಟ್ಟ ಇಲಾಖೆಕೆರೆ ಅಭಿವೃದ್ಧಿ ಕೆಲಸವನ್ನು ಮಾಡುತ್ತದೆ. ನಾನು ಖಾಸಗಿಯಾಗಿ ಕೆರೆ ಅಭಿವೃದ್ಧಿ ಅಭಿಯಾನ ಆರಂಭಿಸಿದ್ದೇನೆ. ಅಭಿವೃದ್ಧಿ ಕಾರ್ಯ ಯಾರು ಮಾಡಿದರೂ ಮೂಲ ಉದ್ದೇಶ ಜಲಮೂಲ ರಕ್ಷಣೆ ಆಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕರೀಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT