ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಬಗೆರೆ: ಗೋಶಾಲೆ ಹಸುಗಳ ಮೇಲೆ ಚಿರತೆ ದಾಳಿ

Last Updated 2 ಸೆಪ್ಟೆಂಬರ್ 2022, 6:09 IST
ಅಕ್ಷರ ಗಾತ್ರ

ತೂಬಗೆರೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಗೆ ಸೇರಿದ ಎರಡು ಹಸುಗಳ ಮೇಲೆ ಚಿರತೆ ದಾಳಿ ಮಾಡಿದೆ. ಹಸುಗಳು ಗಂಭೀರವಾಗಿ ಗಾಯಗೊಂಡಿವೆ. ಇದೇ ಗೋಶಾಲೆಗೆ ಸೇರಿದ ಒಂದು ಹಸು ಕಾಣೆಯಾಗಿದ್ದು, ಚಿರತೆ ದಾಳಿಗೆ ತುತ್ತಾಗಿರುವ ಶಂಕೆ ವ್ಯಕ್ತವಾಗಿದೆ.

ಬುಧವಾರ ಮಧ್ಯಾಹ್ನ ಗೋಶಾಲೆ ಸಮೀಪದಲ್ಲಿ ಹಸುಗಳು ಮೇಯುತ್ತಿದ್ದಾಗ ಈ ಘಟನೆ ನಡೆದಿದೆ. ಒಂದು ಹಸು ನಿತ್ರಾಣಗೊಂಡು ಕುಸಿದು ಬಿದ್ದಿದೆ. ಮತ್ತೊಂದು ದಾಳಿಗೆ ಪ್ರತಿರೋಧ ಒಡ್ಡಿ ತಪ್ಪಿಸಿಕೊಂಡು ಬಂದಿದೆ. ಕೂಡಲೇ ಮೇಯಲು ತೆರಳಿದ್ದ ಎಲ್ಲಾ ಹಸುಗಳನ್ನು ಸಿಬ್ಬಂದಿ ಕರೆ ತಂದಿದ್ದಾರೆ. ಗಂಭೀರ ಗಾಯವಾಗಿರುವ ಹಸುವಿಗೆ ಹೆಚ್ಚಿನ ಚಿಕಿತ್ಸೆ ನೀಡಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಾಟಿ ಕ್ಷೇತ್ರದ ಬೆಟ್ಟದ ಸಾಲುಗಳು, ಮಾಕಳಿ ದುರ್ಗ ಮೊದಲಾದ ಕಡೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಮಾಕಳಿ ಸಮೀಪ ರೈಲಿಗೆ ಸಿಕ್ಕಿ ಚಿರತೆಯೊಂದು ಮೃತಪಟ್ಟಿತ್ತು.

ಬುಧವಾರ ರಾತ್ರಿ ತಾಲ್ಲೂಕಿನ ಗಡಿ ಗ್ರಾಮವಾದ ಬಾಲೇನಹಳ್ಳಿಗೆ ನುಗ್ಗಿರುವ ಚಿರತೆ ರೈತರಾದ ನಂಜಪ್ಪ ಹಾಗೂ ಮುನಿಯಪ್ಪ ಎಂಬುವರ ಮನೆ ಬಳಿಯ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಮೇಕೆಗಳ ಮೇಲೆ ದಾಳಿ ಮಾಡಿದೆ. ಎರಡು ಮೇಕೆಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಚಿರತೆಯು ಗ್ರಾಮದಿಂದ ತೆರಳುವ ವೇಳೆ ಚಿಕ್ಕನಹಳ್ಳಿ ರಸ್ತೆಯಲ್ಲಿ ಒಂಟಿ ಮನೆಗೆ ನುಗ್ಗಿ ಕೋಳಿ ತಿನ್ನಲು ಮುಂದಾಗಿದ್ದು, ಎಚ್ಚರಗೊಂಡ ಮನೆ ಮಾಲೀಕರು ಜೋರಾಗಿ ಕೂಗಾಟ ನಡೆಸಿ ಓಡಿಸಿದ್ದಾರೆ.

ಬಾಲೇನಹಳ್ಳಿಯಲ್ಲಿ ಮೂರು ದಿನಗಳ ಹಿಂದೆಯಷ್ಟೇ ಗ್ರಾಮದ ಅಂಚಿನ ಮನೆಯ ಆವರಣಕ್ಕೆ ನುಗ್ಗಿದ್ದ ಚಿರತೆಯು ನಾಯಿ ಮತ್ತು ಕೋಳಿಯನ್ನು ತಿಂದು ಹಾಕಿತ್ತು. ಪದೇ ಪದೇ ತೂಬಗೆರೆ ಹೋಬಳಿಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ದಾಳಿ ನಡೆಸುತ್ತಲೇ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಬಾಲೇನಹಳ್ಳಿಗೆ ವಲಯ ಅರಣ್ಯಾಧಿಕಾರಿ ಮುನಿರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಚಿರತೆ ದಾಳಿಯಿಂದ ಮೇಕೆಗಳು ಮೃತಪಟ್ಟು ನಷ್ಟಕ್ಕೆ ಒಳಗಾಗಿದ್ದ ರೈತರಾದ ನಂಜಪ್ಪ ಹಾಗೂ ಮುನಿಯಪ್ಪ ಅವರ ದಾಖಲೆ ಪಡೆದ ಅಧಿಕಾರಿಗಳು ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪದೇ ಪದೇ ಚಿರತೆ ದಾಳಿಯಿಂದ ಗ್ರಾಮದಲ್ಲಿ ಉಂಟಾಗುತ್ತಿರುವ ಆತಂಕದ ಸ್ಥಿತಿಯನ್ನು ಅಧಿಕಾರಿಗಳಿಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ‘ವನ್ಯಜೀವಿಗಳ ಸಂರಕ್ಷಣೆ ಅರಣ್ಯ ಇಲಾಖೆಯ ಕರ್ತವ್ಯ. ಗ್ರಾಮಕ್ಕೆ ಲಗ್ಗೆ ಇಟ್ಟು ಉಪಟಳ ನೀಡುವ ಅವುಗಳನ್ನು ಸೆರೆಹಿಡಿದು ದೂರದ ಅಭಯಾರಣ್ಯಕ್ಕೆ ಬಿಡಲಾಗುತ್ತಿದೆ. ನಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT