ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಟಿ.ಸಿ.ಎಲ್ ಕಾಯ್ದೆ ಸಮಗ್ರ ತಿದ್ದುಪಡಿಯಾಗಲಿ

ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಆಗ್ರಹ
Last Updated 29 ಆಗಸ್ಟ್ 2019, 13:53 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯದಲ್ಲಿ ದಲಿತರಿಗಾಗಿ ಜಾರಿಮಾಡಿರುವ ಪಿ.ಟಿ.ಸಿ.ಎಲ್ ಕಾಯ್ದೆ ( ಕೆಲ ಜಮೀನುಗಳ ವರ್ಗಾವಣೆಗೆ ಕಡಿವಾಣ) ಸಮಗ್ರ ತಿದ್ದುಪಡಿ ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿತು.

ಇಲ್ಲಿನ ಪತ್ರಕರ್ತರ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಭೀಮದಳ ರಾಜ್ಯ ಘಟಕ ಅಧ್ಯಕ್ಷ ವೈ.ಎಸ್. ದೇವೋರ್, ‘ದೇವರಾಜು ಅರಸು ಮತ್ತು ಬಸವಲಿಂಗಪ್ಪ ರವರ ದೂರದೃಷ್ಟಿ ಚಿಂತನೆಯಿಂದ ದಲಿತರ ಭೂಮಿಗೆ ರಕ್ಷಣಾತ್ಮಕವಾಗಿ 1978 ರಲ್ಲಿ ಪಿ.ಟಿ.ಸಿ.ಎಲ್.ಕಾಯ್ದೆ ಜಾರಿಗೆ ಬಂದಿದೆ’ ಎಂದರು.

‘ಇದನ್ನು ಸಹಿಸದ ಬಲಾಢ್ಯರು ಕಾಯ್ದೆಯಲ್ಲಿನ ಕೆಲವೊಂದು ಲೋಪದೋಷಗಳನ್ನು ಬಳಸಿ ಕಾಯ್ದೆ ವಿರುದ್ಧ ಸರ್ಕಾರದ ಆದೇಶಗಳನ್ನು ನ್ಯಾಯಾಲಯದ ಮೂಲಕ ತೀರ್ಪುಗಳನ್ನು ಹೊರಡಿಸಲು ಸಫಲರಾಗುತ್ತಿದ್ದಾರೆ. ಲೋಪದೋಷಗಳನ್ನು ಸರಿಪಡಿಸದಿದ್ದರೆ ಕಾಯ್ದೆಗೆ ಅರ್ಥವಿಲ್ಲ. ಇದೊಂದು ಕಾಟಾಚಾರದ ಕಾಯ್ದೆಯಾಗಲಿದೆ’ ಎಂದು ದೂರಿದರು.

ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಬಿ.ಆರ್. ಮುನಿರಾಜು ಮಾತನಾಡಿ, ‘ಕಂದಾಯ ಇಲಾಖೆ ಪರಿಶಿಷ್ಟರ ಪಿ.ಟಿ.ಸಿ.ಎಲ್ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಎಸ್ಸಿ ಎಸ್ಟಿ ಭೂಪರಭಾರೆ ನಿಷೇಧ ಕಾಯ್ದೆ 1978 ಮತ್ತು 1979 ನಿಯಮಾವಳಿಗೆ ಸಮಗ್ರ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಆಯ್ಕೆಗೊಂಡಿರುವ ಪರಿಶಿಷ್ಟ ಸಮುದಾಯದ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

‘ಪಿ.ಟಿ.ಸಿ.ಎಲ್ ಕಾಯ್ದೆ ಅಡಿಯಲ್ಲಿ ದೂರು ನೀಡಿದ ದಲಿತರ ಭೂಮಿಯನ್ನು ಸ್ಥಳ ಪರಿಶೀಲನೆ ನಡೆಸುತ್ತಿಲ್ಲ. ದೂರು ನೀಡಿದವರನ್ನು ವಿಚಾರಣೆಗೆ ಒಳಪಡಿಸುತ್ತಿಲ್ಲ. ಸಕಾರಣವಿಲ್ಲದೆ ಏಕಾಏಕಿ ವಜಾಗೊಳಿಸಿ ಕಂದಾಯ ಅಧಿಕಾರಿಗಳು ಭೂಮಾಫಿಯಗಳಿಗೆ ಅನುಕೂಲಮಾಡುತ್ತಿದ್ದಾರೆ. ಇದು ನಿರಂತರವಾಗಿದ್ದು ಅಮಾಯಕ ದಲಿತರು ಬೀದಿಪಾಲಾಗುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಘಟಕ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ‘ದಲಿತರನ್ನು ಭೂಹೀನರನ್ನಾಗಿ ಮಾಡುವ ಸಂಚು ಕಾಯ್ದೆ ಜಾರಿಯಾದ ನಂತರ ನಿರಂತರವಾಗಿದೆ’ ಎಂದು ದೂರಿದರು.

‘ಇನಾಂತಿ ಭೂಮಿ ಮೈಸೂರು ರಾಜರು ನೀಡಿದ ಕೊಡುಗೆಯಾದರೂ ತೋಟಿ, ತಳವಾರ, ನೀರಗಂಟಿ ಕೆಲಸದ ಚಾಕರಿಗಾಗಿ ಇಂತಿಷ್ಟು ನೀಡಿರುವ ಭೂಮಿ. 1961 ರಲ್ಲಿನ ಇನಾಂತಿ ಮರುಮಂಜುರಾತಿ ಕಾಯ್ದೆ ಸಹ ಈ ಕಾಯ್ದೆ ಮಾದರಿಯಲ್ಲಿ ಆಗಬೇಕು, ಮರುಮಂಜುರಾತಿಗೆ ತಹಶೀಲ್ದಾರ್ ಗೆ ಪರಮಾಧಿಕಾರವಿದೆ, ಇದು ಸಹ ದುರ್ಬಳಕೆಯಾಗುತ್ತಿದೆ’ ಎಂದು ದೂರಿದರು.

ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು ಹತ್ತಾರು ವರ್ಷ ಅಲೆಯಬೇಕು, ಈ ಹಿಂದಿನ ಗ್ರಾಮಾಂತರ ಜಿಲ್ಲಾಧಿಕಾರಿ ಒಂದು ವರ್ಷದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಪಿ.ಟಿ.ಸಿ.ಎಲ್ ಪ್ರಕರಣ ವಜಾ ಮಾಡಿದ್ದಾರೆ.

ಚೀಮಾಚನಹಳ್ಳಿ ನಾರಾಯಣಸ್ವಾಮಿ ಪ್ರಕರಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಪಿಟಿಸಿಎಲ್‌ ಪ್ರಕರಣಗಳಿಗೆ ತಿದ್ದುಪಡಿ ಮೂಲಕವೇ ಸೂಕ್ತ ಪರಿಹಾರ ಸಿಗಲಿದೆ, ಇದಕ್ಕಾಗಿ ಸೆ. 9 ರಂದು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ. ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಎಂ.ಲಗುಮಯ್ಯ, ಪಿ.ವಿ.ಸಿ.(ಎಸ್) ರಾಜ್ಯ ಘಟಕ ಅಧ್ಯಕ್ಷ ಮುನಿಆಂಜಿನಪ್ಪ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಎ.ಎಂ. ನಾರಾಯಣಸ್ವಾಮಿ ಮಾತನಾಡಿದರು. ದಲಿತ ಸಿಂಹ ಘರ್ಜನೆ ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ, ಸಮತಾದಳ ರಾಜ್ಯ ಘಟಕ ಅಧ್ಯಕ್ಷ ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT