ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಹೈರಾಣಾದ ರೈತರ ಬದುಕು

ನೆಲ ಕಚ್ಚಿದ ರೇಷ್ಮೆ ಉದ್ಯಮ, ನಿರುದ್ಯೋಗ ‍‍ಪ್ರಮಾಣ ಹೆಚ್ಚಳ, ರೈತರ ಆತಂಕ
Last Updated 25 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ವಿಜಯಪುರ: ಬಯಲು ಸೀಮೆ ಭಾಗದಲ್ಲಿನ ರೈತರ ಕುಟುಂಬಗಳಿಗೆ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದ್ದ ರೇಷ್ಮೆ ಉದ್ಯಮ ಈಗ ನೆಲಕಚ್ಚಿದೆ. ಸತತ ಬರಗಾಲಕ್ಕೆ ತುತ್ತಾಗಿರುವ ರೈತರನ್ನು ಈ ಉದ್ಯಮವೂ ಕೈಹಿಡಿದಿಲ್ಲ ಎಂದು ರೈತ ಮುಖಂಡ ಶಿವಣ್ಣ ಆತಂಕ ವ್ಯಕ್ತಪಡಿಸಿದರು.

‘ಅನ್ನದಾತನ ಹಾಡುಪಾಡು ತೀರಾ ನಿಕೃಷ್ಟವಾಗಿದೆ. ಅಂತರ್ಜಲದ ಮಟ್ಟ 1800ಅಡಿಗಳಿಗೆ ಕುಸಿದಿದೆ. ಮಾತ್ರವಲ್ಲ ಅಂತರ್ಜಲ ಕೂಡ ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಸರ್ಕಾರ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಿದೆ. ಆದರೂ ಕಲುಷಿತ ನೀರನ್ನೇ ಕುಡಿಯುವಂತಹ ಸ್ಥಿತಿ ಇದೆ’ ಎಂದು ವಿಷಾದಿಸಿದರು.

‘ಕೆರೆ ಕುಂಟೆಗಳಲ್ಲಿ ಹನಿ ನೀರೂ ಇಲ್ಲ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳಲ್ಲಿನ ನೀರು ಕಡಿಮೆಯಾಗುತ್ತಲೇ ಇದೆ. ಅದನ್ನು ನಂಬಿ ರೈತರು ಹಿಪ್ಪುನೇರಳೆ ನಾಟಿ ಮಾಡಿದ್ದಾರೆ. ಈಗ ಆ ತೋಟಗಳು ನೀರಿಲ್ಲದೆ ಒಣಗಿವೆ. ಪರಿಣಾಮ ನೂರಾರು ವರ್ಷಗಳ ಕಾಲದಿಂದ ರೈತರ ಕೈ ಹಿಡಿದಿದ್ದ ಉದ್ಯಮ ನಷ್ಟದ ಸ್ಥಿತಿ ತಲುಪಿದೆ’ ಎಂದು ಹೇಳಿದರು.

ರೈತ ಹನುಮಂತರಾಯಪ್ಪ ಮಾತನಾಡಿ ‘ಸಾಕಷ್ಟು ಮಂದಿ ನಿರುದ್ಯೋಗಿ ಯುವಕರು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅಲ್ಪಸ್ವಲ್ಪ ನೀರಿರುವವರು ರೇಷ್ಮೆ ಉದ್ಯಮದಲ್ಲೇ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನೀರಿನ ಕೊರತೆಯಿಂದಾಗಿ ಹಿಪ್ಪು ನೇರಳೆ ಗಿಡಗಳು ಒಣಗುತ್ತಿವೆ. ನೀರಾಯಿಸಲು ಅಳವಡಿಸಿದ್ದ ಪೈಪುಗಳು ಒಣಗಿ ತುಂಡಾಗುತ್ತಿವೆ. ಹಾಕಿದ ಬಂಡವಾಳವೂ ಕೈಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕುಟುಂಬ ನಿರ್ವಹಣೆ‌ ಚಿಂತೆ‌ ಜತೆಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಕ್ರಮ ಕೈಗೊಳ್ಳಲಿ: ‌15 ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದ ಅವಕಾಶ ಬಂದಿತ್ತು. ಅಪ್ಪನ ಮಾತಿಗೆ ಕಟ್ಟುಬಿದ್ದು ತೋಟ ನೋಡಿಕೊಳ್ಳಲು ಆ ಕೆಲಸ ಕೈಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡೆ. ಈಗ ನೆಲಬಾವಿ ಮತ್ತು ಕೊಳವೆ ಬಾವಿಗಳಲ್ಲಿ ನೀರಿಲ್ಲ. ತೋಟಗಳು ಪಾಳು ಬಿದ್ದಿವೆ. ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಮೊದಲು ಸಿಕ್ಕಿದ್ದ ಉದ್ಯೋಗಕ್ಕೆ ಹೋಗಿದ್ದರೆ ಸ್ಥಿತಿ ಹೀಗಾಗುತ್ತಿರಲಿಲ್ಲ. ಸರ್ಕಾರ ಈ ಭಾಗದಲ್ಲಿನ ಕೆರೆಗಳಿಗೆ ನೀರು ತುಂಬಿಸಿದರೆ ರೈತರು ಉಳಿಯಲು ಸಾಧ್ಯ. ಇಲ್ಲವಾದರೆ ಸಾಮೂಹಿಕವಾಗಿ ಗುಳೆ ಹೊರಡಬೇಕಾಗುತ್ತದೆ ಎನ್ನುತ್ತಾರೆ ಪದವೀಧರ ಯುವಕ ಅಶೋಕ್‌ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT