ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿ ಅವಧಿ ವಿಸ್ತರಣೆ

ಬೆಂಬಲ ಬೆಲೆ ಯೋಜನೆಯಡಿ ಜೂನ್ 30ರವರೆಗೆ ಖರೀದಿ
Published 20 ಮಾರ್ಚ್ 2024, 14:23 IST
Last Updated 20 ಮಾರ್ಚ್ 2024, 14:23 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದ ರೈತರಿಂದ ರಾಗಿ ಖರೀದಿಯ ಅವಧಿಯನ್ನು ಜೂನ್‌ 30ರವರೆಗೂ ವಿಸ್ತರಿಸಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ಆದೇಶ ಹೊರಡಿಸಿದೆ.

ರೈತರಿಂದ ರಾಗಿ ಖರೀದಿಗೆ ಮಾರ್ಚ್‌ 31 ಕೊನೆಯ ದಿನ ಎಂದು ತಿಳಿಸಲಾಗಿತ್ತು. ಇದರಿಂದಾಗಿ ರಾಗಿ ಖರೀದಿ ಕೇಂದ್ರದ ಬಳಿ ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ಚೀಲಗಳನ್ನು ತುಂಬಿಕೊಂಡು ಬಂದು ಸಾಲುಗಟ್ಟಿ ನಿಲ್ಲುವ ಮೂಲಕ ನೂಕುನುಗ್ಗಲು ಉಂಟಾಗಿತ್ತು. ಈ ಹಿಂದೆ ರಾಗಿ ಖರೀದಿಗೆ ದಿನಾಂಕ ನೀಡಿದ್ದರು ಸಹ ವಿವಿಧ ಕಾರಣಗಳಿಂದಾಗಿ 20 ದಿನಗಳ ತಡವಾಗಿ ಖರೀದಿ ಪ್ರಾರಂಭವಾಗಿತ್ತು.

‘ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2023-24ನೇ ಸಾಲಿನ ಮುಂಗಾರಿನಲ್ಲಿ ತಾಲ್ಲೂಕಿನ ಸಾಸಲು ರಾಗಿ ನೋಂದಣಿ ಕೇಂದ್ರದಲ್ಲಿ 1,449 ಜನ ಹಾಗೂ ದೊಡ್ಡಬಳ್ಳಾಪುರ ನಗರದ ರಾಗಿ ನೋಂದಣಿ ಕೇಂದ್ರದಲ್ಲಿ 7,547 ಜನ ರೈತರು ರಾಗಿ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಂದ ಖರೀದಿ ಮಾಡುತ್ತಿರುವ ರಾಗಿಯನ್ನು ನಗರದ ಎಪಿಎಂಸಿ ಗೋದಾಮು, ಸರ್ಕಾರಿ ಆಸ್ಪತ್ರೆ ಸಮೀಪದ ಗೋದಾಮು ಹಾಗೂ ಗೊಲ್ಲಹಳ್ಳಿ ಸಮೀಪದ ಆಹಾರ ನಿಗಮದ ಗೋದಾಮುಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ’ ಎಂದು ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದ ಅಧಿಕಾರಿ ಮಹೇಶ್‌ ತಿಳಿಸಿದ್ದಾರೆ.

ರಾಗಿ ಖರೀದಿಯ ಅವಧಿಯನ್ನು ಜೂನ್‌ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಹಾಗಾಗಿ ರೈತರು ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗಿ ಖರೀದಿ ಕೇಂದ್ರದ ಬಳಿ ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತುಂಬಿಕೊಂಡು ಹೋಗಿ ಸಾಲುಗಟ್ಟಿ ನಿಲ್ಲಬಾರದು ಎಂದು  ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದ್ದಾರೆ. 

ಖರೀದಿ ಕೇಂದ್ರದಿಂದ ಹೊಸದಾಗಿ ರೈತರಿಗೆ ನೀಡಲಾಗಿರುವ ನಿಗದಿತ ದಿನಾಂಕದಂದೇ ರಾಗಿ ತೆಗೆದುಕೊಂಡು ಹೋಗಬೇಕು. ಈ ಬಾರಿ ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ರೈತರಿಂದ ರಾಗಿ ಖರೀದಿ ಮಾಡಿ ನಿಗದಿತ ಸಮಯಕ್ಕೆ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ. ರಾಗಿ ಖರೀದಿ ಕೇಂದ್ರಗಳ ಬಳಿ ರಾತ್ರಿ ಹಗಲೆನ್ನದೆ ಕಾದು ನಿಲ್ಲುವುದನ್ನು ತಪ್ಪಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT