ಸರ್ಕಾರಿ ಶಾಲೆ ಸಬಲೀಕರಣಕ್ಕೆ ಖಾಸಗಿ ಸಂಸ್ಥೆ ಸಹಯೋಗ

7

ಸರ್ಕಾರಿ ಶಾಲೆ ಸಬಲೀಕರಣಕ್ಕೆ ಖಾಸಗಿ ಸಂಸ್ಥೆ ಸಹಯೋಗ

Published:
Updated:
Deccan Herald

ಆನೇಕಲ್‌ : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಕೈಜೋಡಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಾಬೀಕ್ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಸರ್ಕಾರ ಒಗ್ಗೂಡಿ ಆನೇಕಲ್ ತಾಲ್ಲೂಕಿನಲ್ಲಿ ರೂಪಿಸಿರುವ ವ್ಯವಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಾಬೀಕ್ ಸಂಸ್ಥೆ ದಕ್ಷಿಣ ಏಷ್ಯಾ ಪ್ರಾದೇಶಿಕ ಮುಖ್ಯಸ್ಥ ಜನಾರ್ಧನ್ ರಾಮಾನುಜುಲು ತಿಳಿಸಿದರು.

ಅವರು ತಾಲ್ಲೂಕಿನ ಕೊಮ್ಮಸಂದ್ರದಲ್ಲಿ ಸುಮಾರು ₹ 38 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಾಬೀಕ್ ಸಂಸ್ಥೆಯು ಸರ್ಕಾರ ಹಾಗೂ ರೋಟರಿ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದ್ದು ಖಾಸಗಿ ಶಾಲೆಗಳಿಗಿಂತ ಮಿಗಿಲಾಗಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.

ರೋಟರಿ ಬೆಂಗಳೂರು ದಕ್ಷಿಣದ ಸಿಎಸ್ಆರ್ ಮುಖ್ಯಸ್ಥ ಬಿ.ಆರ್.ಶ್ರೀಧರ್ ಮಾತನಾಡಿ, ಆನೇಕಲ್ ತಾಲ್ಲೂಕಿನ ಹಲಸಹಳ್ಳಿ, ಕೊಮ್ಮಸಂದ್ರ, ನಾರಾಯಣಘಟ್ಟ, ಅಳಿಬೊಮ್ಮಸಂದ್ರ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ತಲಾ ₹14.5 ಲಕ್ಷ ಅನುದಾನ ಕಟ್ದಡ ನಿರ್ಮಾಣಕ್ಕೆ ಮಂಜೂರಾಗಿತ್ತು. ಆದರ ಜತೆ ಸಾಬೀಕ್ ಸಂಸ್ಥೆಯು ಸುಮಾರು ₹ 50ಲಕ್ಷ ಹಾಗೂ ರೋಟರಿ ಸಂಸ್ಥೆ ₹ 20 ಲಕ್ಷ ಅನುದಾನವನ್ನು ನೀಡಿ ಅಂದಾಜು ಒಟ್ಟು ₹ 1.3ಕೋಟಿ ವೆಚ್ಚದಲ್ಲಿ ನಾಲ್ಕು ಶಾಲೆಗಳಲ್ಲಿ ಸಭಾಂಗಣ, ಎರಡು ಶಾಲಾ ಕೊಠಡಿಗಳು, ಅಡುಗೆ ಮನೆ, ಮುಖ್ಯೋಪಾಧ್ಯಾಯರ ಕೊಠಡಿ, ಗ್ರಂಥಾಲಯ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಸುಸಜ್ಜಿತ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಮಾತನಾಡಿ, ಸಾಬೀಕ್ ಮತ್ತು ರೋಟರಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಯೋಜನೆ ಅನುಷ್ಠಾನಗಳಿಸಿದ್ದರಿಂದ ಉತ್ತಮ ಕಟ್ಟಡಗಳು ನಿರ್ಮಣವಾಗಿವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಚಿನ್ನಪ್ಪ ಮಾತನಾಡಿದರು. ಸಾಬೀಕ್ ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಡಾ.ಕಿಶನ್ ಗುರ್ರಂ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ್, ರೋಟರಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಎಚ್.ಆರ್.ಸತೀಶ್, ರೊಟೇರಿಯನ್ ಬಾಲರಾಜು, ಅತ್ತಿಬೆಲೆ–ಸರ್ಜಾಪುರ ರೋಟರಿ ಅಧ್ಯಕ್ಷ ಅಶೋಕ್‌ರೆಡ್ಡಿ, ಎಚ್.ಎನ್.ಅಮರೀಷ್ ಕುಮಾರ್, ವೆಂಕಟಸ್ವಾಮಿರೆಡ್ಡಿ, ಗಣೇಶ್‌ ಫಾರ್ಮರ್, ಪ್ರೇಮಕುಮಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶುಭಾ ಶ್ರೀಧರ್, ಸದಸ್ಯರಾದ ಗೌರಮ್ಮ ಹರೀಶ್, ವೀಣಾ ಶ್ರೀನಿವಾಸ್‌ರೆಡ್ಡಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !