ರಾಗಿ ಬೆಳೆಗೆ ತುಂತುರು ನೀರಾವರಿ

ಗುರುವಾರ , ಏಪ್ರಿಲ್ 25, 2019
21 °C

ರಾಗಿ ಬೆಳೆಗೆ ತುಂತುರು ನೀರಾವರಿ

Published:
Updated:
Prajavani

ವಿಜಯಪುರ: ಕೃಷಿಯನ್ನೇ ಪ್ರಧಾನ ವೃತ್ತಿಯಾಗಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರು, ಇತ್ತೀಚೆಗೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣದಿಂದ ಆತಂಕಗೊಂಡಿದ್ದಾರೆ. ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶಗಳ ಕಡೆಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಇರುವ ಅಲ್ಪ ನೀರಿನಲ್ಲಿ ಬೇಸಿಗೆಯಲ್ಲೂ ಉತ್ತಮ ರಾಗಿ ಬೆಳೆದು ಮಾದರಿಯಾಗಿದ್ದಾರೆ.

ಹೋಬಳಿಯ ಮಿತ್ತನಹಳ್ಳಿ ರೈತ ಮಂಜುನಾಥ್ ಎಂಬುವವರು ತನಗಿರುವ ಕೊಳವೆ ಬಾವಿಯಲ್ಲಿ ಸಿಗುತ್ತಿರುವ ನೀರನ್ನು ಬಳಕೆ ಮಾಡಿಕೊಂಡು ಖುಷ್ಕಿ ಭೂಮಿ ಉಳುಮೆ ಮಾಡಿ, ತುಂತುರು ನೀರಾವರಿಯ ಮೂಲಕ ರಾಗಿಯನ್ನು ಬೆಳೆದಿದ್ದಾರೆ. ಇದರ ಜೊತೆಯಲ್ಲೆ ಅಂತರ ಬೆಳೆಯಾಗಿ ಮುಸುಕಿನ ಜೋಳವನ್ನು ಬೆಳೆದಿರುವುದರಿಂದ ರಾಸುಗಳ ಮೇವಿನ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತಿದೆ ಎನ್ನುತ್ತಾರೆ.

ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳಿನಲ್ಲಿ ರಾಗಿ ಬಿತ್ತನೆಯಾಗಿ, ಡಿಸೆಂಬರ್‌ನಲ್ಲಿ ಕಟಾವು ಮಾಡಿ, ಜನವರಿ–ಫೆಬ್ರುವರಿ ತಿಂಗಳಿನಲ್ಲಿ ಒಕ್ಕಣೆ ಮಾಡಲಾಗುತ್ತದೆ. 

ಈ ಬಾರಿ ತೀವ್ರ ಮಳೆಯ ಕೊರತೆಯಿಂದಾಗಿ ರಾಗಿ ಸೇರಿದಂತೆ ಅವರೆ, ಅಲಸಂದೆ, ತೊಗರಿ, ಸಾಸಿವೆ, ಯಾವ ಬೆಳೆಗಳೂ ಸರಿಯಾಗಿ ಆಗಿಲ್ಲ. ಆದ್ದರಿಂದ ಧವಸ–ಧಾನ್ಯಗಳ ಬೆಲೆಗಳು ಏರಿಕೆಯಾಗುತ್ತಲೇ ಇವೆ. ರಾಗಿ ಒಂದು ಕ್ವಿಂಟಾಲ್‌ಗೆ 3 ಸಾವಿರಕ್ಕೆ ಏರಿಕೆಯಾಗುತ್ತಿರುವುದರಿಂದ ಸಾಮಾನ್ಯ ವರ್ಗದ ಜನರೂ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುವಂತಾಗಿದ್ದು ಜಾನುವಾರುಗಳ ಮೇವಿಗೂ ಪರದಾಟವಾಗುತ್ತಿದೆ. ಇದಕ್ಕೆ ರೈತರೂ ಹೊರತಾಗಿಲ್ಲ.

‘ಬೆಳೆ ಇನ್ನು ಹದಿನೈದು ದಿನಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬರುತ್ತದೆ. 8 ರಿಂದ 10 ಕ್ವಿಂಟಲ್ ರಾಗಿ ಸಿಗಬಹುದೆಂಬ ನಿರೀಕ್ಷೆಯಿದೆ. ನೀರಿನ ಕೊರತೆ ಹಾಗೂ ಬೇಸಿಗೆಯ ತಾಪಮಾನ ಹೆಚ್ಚಾಗಿರುವ ಕಾರಣ ರಾಸಾಯನಿಕ ಗೊಬ್ಬರ ಕೊಟ್ಟರೆ ಬೆಳೆ ಸುಟ್ಟುಹೋಗುತ್ತದೆ. ಆದ್ದರಿಂದ ಕೊಟ್ಟಿಗೆ ಗೊಬ್ಬರವನ್ನೇ ಬಳಸಿದ್ದೇವೆ. ಈ ಬೆಳೆಯಿಂದ ಹಸುಗಳಿಗೆ ಮೇವಿನ ಕೊರತೆಯೂ ನೀಗಲಿದೆ’ ಎನ್ನುತ್ತಾರೆ ಮಂಜುನಾಥ್

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !