ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಲಸಿಕೆ ಹಾಕಿಸಿ ರಾಸುಗಳ ಸಾವು ತಪ್ಪಿಸಿ

ದೇವನಾಯಕನಹಳ್ಳಿ ಗ್ರಾಮದ ಹಾಲು ಡೇರಿ ಆವರಣದಲ್ಲಿ ರಾಸು ತಪಾಸಣೆ ಶಿಬಿರ
Last Updated 25 ಜನವರಿ 2020, 13:42 IST
ಅಕ್ಷರ ಗಾತ್ರ

ವಿಜಯಪುರ: ಕಾಲಕಾಲಕ್ಕೆ ರಾಸುಗಳನ್ನು ತಪಾಸಣೆಗೆ ಒಳಪಡಿಸುವ ಹಾಗೂ ಲಸಿಕೆಗಳನ್ನು ಹಾಕಿಸುವ ಮೂಲಕ ರಾಸುಗಳ ಮರಣವನ್ನು ತಪ್ಪಿಸಬೇಕು ಎಂದು ಬಮೂಲ್‌ ಬೆಂಗಳೂರು ಪೂರ್ವ ತಾಲ್ಲೂಕಿನ ಉಪವ್ಯವಸ್ಥಾಪಕ ಡಾ.ಶ್ರೀನಿವಾಸ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ದೇವನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ರಾಸುಗಳ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಹಾಲು ಉತ್ಪಾದಕರು ರಾಸುಗಳ ಆರೋಗ್ಯದ ಕಾಳಜಿ ವಹಿಸಬೇಕು. ಹಾಲು ಉತ್ಪಾದನೆ ಕುಂಠಿತವಾಗುತ್ತದೆಂಬ ಕಾರಣಕ್ಕೆ ಕೆಲವರು ಲಸಿಕೆ ಹಾಕಿಸುವುದಿಲ್ಲ. ಇದು ರಾಸುವಿಗೆ ರೋಗವನ್ನು ಹೆಚ್ಚುಮಾಡುತ್ತದೆ. ಕಾಲಕ್ರಮೇಣ ರೋಗ ಆವರಿಸಿ ರಾಸು ಸಾವನ್ನಪ್ಪುವ ಸಂಭವ ಹೆಚ್ಚಾಗುತ್ತದೆ. ಆದ್ದರಿಂದ ಹಿಂಜರಿಯದೆ ಲಸಿಕೆ ಹಾಕಿಸಬೇಕು ಎಂದರು.

ಪ್ರತಿಯೊಬ್ಬರೂ ರಾಸುಗಳಿಗೆ ಕಡ್ಡಾಯ ವಿಮೆ ಮಾಡಿಸಬೇಕು. ಇದರಿಂದ ರಾಸುಗಳು ಆಕಸ್ಮಿಕವಾಗಿ ಮೃತಪಟ್ಟರೆ ಇದರಿಂದಾಗುವ ನಷ್ಟದಿಂದ ಹಾಲು ಉತ್ಪಾದಕರು ಹೊರಬರಬಹುದಾಗಿದೆ ಎಂದರು.

ಕೃಷಿ ಅಧಿಕಾರಿ ಚೈತ್ರ ಮಾತನಾಡಿ, ಸೂಕ್ಷ್ಮಾಣು ಜೀವಿಗಳಿಂದ ಬಿಡುಗಡೆಯಾಗುವ ವಿಷವಸ್ತುಗಳಿಂದ ರಾಸುಗಳ ಕೆಚ್ಚಲಿಗೆ ಧಕ್ಕೆಯಾಗುತ್ತದೆ. ಕೆಚ್ಚಲು ಬಾವು ಉಂಟಾದಾಗ ಹಾಲಿನಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಅಧಿಕಮಟ್ಟದಲ್ಲಿರುತ್ತದೆ. ಕ್ಯಾಲಿಫೋರ್ನಿಯಾ ಮಾಸ್ಟಿಟಿಸ್ ಟೆಸ್ಟ್ ಎಂಬ ವಿಧಾನದಲ್ಲಿ ಇದನ್ನು ಪತ್ತೆ ಹಚ್ಚಬಹುದಾಗಿದೆ. ತಿಂಗಳಿಗೊಮ್ಮೆ ಈ ವಿಧಾನ ಅನುಸರಿಸಿ ಕೆಚ್ಚಲು ಬಾವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಿದರೆ ಮಹಾಮಾರಿಗೆ ಕಡಿವಾಣ ಹಾಕಬಹುದು ಎಂದರು.

ಡೇರಿ ಅಧ್ಯಕ್ಷ ಕೆಂಪೇಗೌಡ ಮಾತನಾಡಿ, ವಾತಾವರಣದಲ್ಲಿ ವ್ಯತ್ಯಯ, ಹಸಿ ಮೇವು ಹಾಗೂ ಪೌಷ್ಟಿಕ ಪಶು ಆಹಾರದ ಕೊರತೆಯಿಂದ ರಾಸುಗಳಲ್ಲಿ ಬಂಜೆತನ ಕಾಣಿಸಿಕೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ ಬರ ಪರಿಸ್ಥಿತಿಯ ಪರಿಣಾಮ ಹಸಿ ಮೇವಿನ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು, ಹಸಿ ಮೇವಿಗೆ ತೀವ್ರ ಕೊರತೆ ತಲೆದೋರಿದೆ. ಜತೆಗೆ ನೀರಿನ ಸಮಸ್ಯೆ ಇರುವುದರಿಂದ ನಿರ್ವಹಣೆಯಲ್ಲಿಯೂ ಕೊರತೆ ಕಂಡುಬರುತ್ತಿದೆ ಎಂದು ತಿಳಿಸಿದರು.

ಮೇವು, ನೀರಿನ ಪೂರೈಕೆ ಹಾಗೂ ಪೌಷ್ಟಿಕ ಆಹಾರ ನೀಡುವ ಮೂಲಕ ರಾಸುಗಳನ್ನು ಸಂರಕ್ಷಿಸುವ ಬಗ್ಗೆ ರೈತರಿಗೆ ಮಾಹಿತಿ ಹಾಗೂ ಸಮತೋಲನ ಆಹಾರ ನೀಡುವುದನ್ನು ರೂಢಿಸಿಕೊಳ್ಳಬೇಕು. ರಾಸುಗಳಿಗೆ ಮನೆ ಹತ್ತಿರ ಅಜೋಲ ಬೆಳೆದು ರಾಸುಗಳಿಗೆ ನೀಡಿದರೆ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತದೆ. ರೈತರಿಗೆ ಅನುಕೂಲವಾಗುವಂತೆ ಮೇವು ಕತ್ತರಿಸುವ ಯಂತ್ರ. ಹಾಲು ಕರೆಯುವ ಯಂತ್ರವನ್ನು ಸಬ್ಸಿಡಿಯಲ್ಲಿ ಪಡೆಯಬಹುದು ಎಂದರು. ವಿಸ್ತರಣಾಧಿಕಾರಿ ಹನುಮಂತಪ್ಪ, ಕಾರ್ಯದರ್ಶಿ ಮುನಿನಾರಾಯಣಪ್ಪ, ಹಾಲು ಪರೀಕ್ಷಕ ಮುನಿರಾಜ್, ಸಹಾಯಕ ಕೃಷ್ಣ, ಹಾಗೂ ಪಶು ವೈದ್ಯಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT