ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಗಿರಿಕೋಟೆ ಕ್ರಾಸ್‌: ಮೇಲ್ಸೇತುವೆಗೆ ಒತ್ತಾಯ

ಈವರೆಗೂ 60ಕ್ಕೂ ಹೆಚ್ಚು ರಸ್ತೆ ಅಪಘಾತ l 30ಕ್ಕೂ ಹೆಚ್ಚು ಜನರ ಸಾವು
Last Updated 3 ಏಪ್ರಿಲ್ 2023, 4:23 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ವೆಂಕಟಗಿರಿಕೋಟೆ ಕ್ರಾಸ್ ಅಪಘಾತಗಳ ಕೇಂದ್ರಬಿಂದುವಾಗಿದೆ.

ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜನರಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದ್ದರೂ, ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕು ಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿರುವ ವೆಂಕಟಗಿರಿಕೋಟೆ ಕ್ರಾಸ್‌ನಲ್ಲಿ ದ್ರಾಕ್ಷಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರತಿದಿನ ಬೆಳಗಾಗುತ್ತಿದ್ದಂತೆ ದ್ರಾಕ್ಷಿ ಕಟಾವು ಮಾಡಲು ಹೋಗುವ ನೂರಾರು ಮಂದಿ ಕೂಲಿ ಕಾರ್ಮಿಕರು ಈ ಗೇಟ್‌ನಲ್ಲಿ ಸೇರುತ್ತಾರೆ. ಬೆಂಗಳೂರು-ಹೈದರಾಬಾದ್‌ನ ರಾಷ್ಟ್ರೀಯ ಹೆದ್ದಾರಿಯಾದ ಕಾರಣ, ಹಗಲು-ರಾತ್ರಿಯೆನ್ನದೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ರಸ್ತೆ ದಾಟುವಾಗ ಹಲವು ಕೂಲಿ ಕಾರ್ಮಿಕರು ಮೃತಪಟ್ಟಿರುವ ಪ್ರಕರಣಗಳೂ ನಡೆದಿವೆ.

ವೆಂಕಟಗಿರಿಕೋಟೆ, ಮುದುಗುರ್ಕಿ, ಬುಳ್ಳಹಳ್ಳಿ, ಇರಿಗೇನಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಜನರು ಅಪಘಾತ ನಡೆಯುವ ಭೀತಿಯಲ್ಲೇ ಜೀವನ ನಡೆಸುವ ಅನಿವಾರ್ಯತೆ ಎದುರಾಗಿದೆ. ಜತೆಗೆ ದೂರದ ಊರುಗಳಿಂದ ವಾಹನಗಳನ್ನು ಚಲಾಯಿಸಿಕೊಂಡು ಬರುವ ವಾಹನ ಚಾಲಕರು, ನಿದ್ದೆಯ ಮಂಪರಿನಲ್ಲಿರುವುದರಿಂದಲೂ ಬಹಳಷ್ಟು ರಸ್ತೆ ಅಪಘಾತ ನಡೆಯುತ್ತಿವೆ ಎಂಬ ಆರೋಪವಿದೆ.

ಜತೆಗೆ ಸ್ಥಳೀಯವಾಗಿ ಕ್ವಾರಿಗಳಿಂದ ಜಲ್ಲಿ, ಎಂ. ಸ್ಯಾಂಡ್ ಹೊತ್ತುಕೊಂಡು ಬರುವ ಟಿಪ್ಪರ್‌ಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ವಾಹನಗಳು ಕೆಳಗೆ ಚೆಲ್ಲದಂತೆ ಟಾರ್ಪಲಿನ್‌ಗಳನ್ನು ಮುಚ್ಚದೆ ಇರುವ ಕಾರಣ ಅಪಘಾತ ಸಂಭವಿಸಿದ ಉದಾಹರಣೆಗಳಿವೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳುತ್ತಿಲ್ಲ. ಜತೆಗೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆಗೆ ಹೋಗುವ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರಸ್ತೆ ಪಕ್ಕದಲ್ಲೇ ನಿಲ್ಲಿಸುವುದರಿಂದಲೂ ಇದರಿಂದ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇರಿಗೇನಹಳ್ಳಿ ಗೇಟ್‌ನಲ್ಲಿ ಸಿಮೆಂಟ್ ಕಾಂಕ್ರೀಟ್ ಟ್ಯಾಂಕರ್ ವಾಹನಗಳನ್ನು ರಸ್ತೆಯ ಬದಿಯಲ್ಲೇ ಸಾಲಾಗಿ ನಿಲ್ಲಿಸಲಾಗುತ್ತಿದೆ. ಟ್ಯಾಂಕರ್‌ಗಳು ನಿಂತಿರುವುದನ್ನು ಗುರುತಿಸದ ವಾಹನ ಸವಾರರು ರಸ್ತೆ ಅಪಘಾತಕ್ಕೆ ಸಿಲುಕಿಕೊಂಡಿದ್ದಾರೆ. ಹೆದ್ದಾರಿಯಲ್ಲಿರುವ ಡಾಬಾಗಳಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಭರವಸೆಯಾಗಿ ಉಳಿದ ಸರ್ವೀಸ್ ರಸ್ತೆ

ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಾಗ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಹಳ್ಳಿಗಳಿಗೆ ತೆರಳಲು ಸರ್ವೀಸ್ ರಸ್ತೆ ಹಾಗೂ ರಸ್ತೆ ದಾಟಲು ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಒತ್ತಾಯಿಸಿದ್ದರು.

ರಸ್ತೆಯ ಇಕ್ಕೆಲುಗಳಲ್ಲಿದ್ದ ಅಂಗಡಿಗಳನ್ನು ತೆರವು ಮಾಡುವಾಗ ಸರ್ವೀಸ್ ರಸ್ತೆ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈ ಭರವಸೆಗಳು ಇಂದಿಗೂ ಭರವಸೆಯಾಗಿಯೇ ಉಳಿದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ, ನಂದಿಬೆಟ್ಟ ಮತ್ತು ಈಶಾ ಟೆಂಪಲ್‌ಗೆ ಬೆಂಗಳೂರಿನಿಂದ ಭಾರಿ ಸಂಖ್ಯೆಯ ಜನರು ಬರುತ್ತಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಕಿ.ಮೀ. ಗಟ್ಟಲೇ ವ್ಹೀಲಿಂಗ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು.

‘ಪೊಲೀಸ್ ಠಾಣೆ ನಿರ್ಮಿಸಿ’

ಇಲ್ಲಿನ ರಸ್ತೆಯಲ್ಲಿ ಸಂಚಾರ ಸುಗಮವಾಗಬೇಕಾದರೆ, ವೆಂಕಟಗಿರಿಕೋಟೆ ಕ್ರಾಸ್‌ನಲ್ಲಿ ಹೊರ ಪೊಲೀಸ್ ಠಾಣೆ ನಿರ್ಮಿಸಬೇಕು. ವಾಹನಗಳ ವೇಗ ಮಿತಿಯನ್ನು ತಿಳಿಸುವ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಪಾನಮತ್ತರಾಗಿ ವಾಹನ ಚಾಲನೆ ಮಾಡುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ರಸ್ತೆ ಅಪಘಾತ ಘಟನೆಗಳಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಸ್ಥಳೀಯ ನಿವಾಸಿ ಮಾರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT