ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರ ಜಾತ್ರೆಗೆ ಸಂಭ್ರಮದ ಚಾಲನೆ

Last Updated 19 ಆಗಸ್ಟ್ 2019, 14:25 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಇಲ್ಲಿನ ಐತಿಹಾಸಿಕ ಬಸವೇಶ್ವರ ಜಾತ್ರೆಗೆ ಅಪಾರ ಭಕ್ತ ಸಮೂಹದ ಜಯಘೋಷಣೆಯೊಂದಿಗೆ ಸೋಮವಾರ ಸಂಭ್ರಮದ ಚಾಲನೆ ದೊರೆಯಿತು.

ನಸುಕಿನ ಜಾವ ಪಟ್ಟಣ ಸೇರಿ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ದೇವಸ್ಥಾನದ ನಂದಿ ಮೂರ್ತಿಗೆ ಅಭಿಷೇಕ ಮಾಡಿಸಿ, ಹರಕೆ ತೀರಿಸಿದರು. ಕೆಲ ಭಕ್ತರು ದೀಡ್ ನಮಸ್ಕಾರ ಹಾಕಿದರು.

ಬೆಳಿಗ್ಗೆ ನಂದಿ ಮೂರ್ತಿಗೆ ವಿಶೇಷ ಪೂಜೆ, ಬೆಳ್ಳಿ ಅಲಂಕಾರ ಪೂಜೆ ನೆರವೇರಿತು. ಭಕ್ತರು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವಿರಕ್ತಮಠಕ್ಕೆ ತೆರಳಿ ಮುರಘೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ಹಾಗೂ ಶಿವಾನಂದ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು.

ಶಾಸಕ ಶಿವಾನಂದ ಪಾಟೀಲ ಅವರು ವಿಶೇಷ ಪೂಜೆ ನೆರವೇರಿಸಿ, ಬೆಳ್ಳಿಯ ನಂದಿ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ನಂತರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.

ಪಲ್ಲಕ್ಕಿ ಉತ್ಸವವು ಮೋದಿ ಅವರ ಮನೆಗೆ ತೆರಳಿ ಹೋರಿಮಟ್ಟಿ ಗುಡ್ಡದ ಬಸವೇಶ್ವರ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ಇಂಗಳೇಶ್ವರ ರಸ್ತೆ ಮಾರ್ಗದಿಂದ ಕಳಸದ ಮೆರವಣಿಗೆಯೊಂದಿಗೆ ಹೋರಿಮಟ್ಟಿ ಗುಡ್ಡಕ್ಕೆ ತೆರಳಿತು.

ಗುಡ್ಡದ ದೇವಸ್ಥಾನಕ್ಕೆ ಕಳಾಸರೋಹಣ ಹಾಗೂ ಶಿವಾನಂದ ಈರಕಾರ ಮುತ್ಯಾ ಅವರಿಂದ ವರ್ಷದ ಮಳೆ, ಬೆಳೆ ಕುರಿತಾದ ಹೇಳಿಕೆ ನಡೆದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನದ ನಂತರ ಪಲ್ಲಕ್ಕಿ ಉತ್ಸವವು ಹೋರಿಮಟ್ಟಿ ಗುಡ್ಡದಿಂದ ಬಸವನಹಟ್ಟಿ ಗ್ರಾಮಕ್ಕೆ ತೆರಳಿತು. ಸಂಜೆ ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ಬಂದ ಪಲ್ಲಕ್ಕಿಗೆ ಪೂಜೆ ನೆರವೇರಿತು. ಕೊಟ್ರಶೆಟ್ಟಿ ಮನೆತನದವರು ಮನೆಯಿಂದ ತಂದ ಬುತ್ತಿಯನ್ನು ಭಕ್ತರಿಗೆ ಉಣಬಡಿಸಿದರು.

ಸೂರ್ಯಾಸ್ತದ ನಂತರ ಪಲ್ಲಕ್ಕಿಯು ಪಟ್ಟಣದ ಕಂಬಿ ಕಟ್ಟೆಗೆ ಬರುತ್ತಿದ್ದಂತೆ ಅಪಾರ ಸಂಖ್ಯೆಯ ಭಕ್ತರು, ಆನೆ, ಅಂಬಾರಿ, ವಿವಿಧ ಕಲಾ ತಂಡಗಳು, ವಾದ್ಯಗಳೊಂದಿಗೆ ಪಲ್ಲಕ್ಕಿಯನ್ನು ಬರಮಾಡಿಕೊಂಡರು. ರಾತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ಶಾಲಾ ಆವರಣದಲ್ಲಿ ಆಕರ್ಷಕ ಮದ್ದು ಸುಡಲಾಯಿತು. ಜಾತ್ರೆಗೆ ಬಂದಿದ್ದ ಪರಸ್ಥಳದ ಭಕ್ತರಿಗಾಗಿ ಅಕ್ಕನಾಗಮ್ಮ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಪವಾಡ ಬಸವೇಶ್ವರ ಯುವಕ ಮಂಡಳಿ ಹಮ್ಮಿಕೊಂಡಿದ್ದ ಪ್ರಸಾದ ವ್ಯವಸ್ಥೆಗೆ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಅಕ್ಕ ಅನ್ನಪೂರ್ಣ ತಾಯಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಹಾರಿವಾಳ, ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಈರಣ್ಣ ಪಟ್ಟಶೆಟ್ಟಿ, ಮಂಡಳಿ ತಹಶೀಲ್ದಾರ್ ಆರ್.ಎಸ್.ಹಿರೇಮಠ, ವೈ.ಡಿ.ನಾಯ್ಕೋಡಿ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಹರೀಶ ಅಗರವಾಲ, ಭರತ ಅಗರವಾಲ, ಸಂಗಮೇಶ ಓಲೇಕಾರ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಸಂಗಯ್ಯ ಕಾಳಹಸ್ತೇಶ್ವರಮಠ, ಜಗದೀಶ ಕೊಟ್ರಶೆಟ್ಟಿ, ಡಾ.ಕರುಣಾಕರ ಚೌಧರಿ, ಶೇಖರಗೌಡ ಪಾಟೀಲ, ಜಟ್ಟಿಂಗರಾಯ ಮಾಲಗಾರ, ಸುರೇಶಗೌಡ ಪಾಟೀಲ, ಬಸವರಾಜ ಕೋಟಿ, ಸಿದ್ದಣ್ಣ ಮೋದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT