ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಶೇ.80ರಷ್ಟು ಪಠ್ಯಪುಸ್ತಕ ಪೂರೈಕೆ

ಶಾಲಾ ಪ್ರಾರಂಭೋತ್ಸವದಂದೇ ಮಕ್ಕಳಿಗೆ ವಿತರಣೆ
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ವಲಯಗಳ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಲ್ಲಿಸಿದ ಬೇಡಿಕೆಯ ಪೈಕಿ ಶೇ.80.03ರಷ್ಟು ಪಠ್ಯಪುಸ್ತಕಗಳನ್ನು ಶಿಕ್ಷಣ ಇಲಾಖೆಯಿಂದ ಸರಬರಾಜು ಮಾಡಲಾಗಿದೆ. ಶಾಲಾ ಪ್ರಾರಂಭೋತ್ಸವದ ದಿನದಂದು ಮಕ್ಕಳಿಗೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಮೇ 29ರಿಂದ ಆರಂಭಗೊಳ್ಳಲಿದೆ. ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಶಾಲೆಗಳಿಂದ ಎಸ್‌ಎಟಿಎಸ್‌ (ವಿದ್ಯಾರ್ಥಿ ಹಾಜರಾತಿ ಮಾಹಿತಿ) ಅನ್ವಯ ಬೇಡಿಕೆ ಸಲ್ಲಿಸಲಾದ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದ್ದು, ಇನ್ನು ಶೇ. 20ರಷ್ಟು ಬರಬೇಕಾಗಿದೆ.

ಜಿಲ್ಲೆಗೆ ಒಟ್ಟು 33,83,712 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ 29,01,523 ಪುಸ್ತಕಗಳನ್ನು ಪೂರೈಸಲಾಗಿದೆ. ಇದರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ 27,07,845 ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ಅವರು ಶಾಲೆಗಳಿಗೆ ಮುಖ್ಯಶಿಕ್ಷಕರ ಮೂಲಕ ವಿತರಿಸುತ್ತಾರೆ.

ರಜೆ ಕಳೆದು ಮರಳಿ ಶಾಲೆಗೆ ತೆರಳಲು ಮಕ್ಕಳು ಸಜ್ಜಾಗುತ್ತಿದ್ದಾರೆ. ಅದರಂತೆ ಶಿಕ್ಷಣ ಇಲಾಖೆಯೂ ಶಾಲೆ ಪ್ರಾರಂಭೋತ್ಸವದ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ನಿಟ್ಟಿನಲ್ಲಿ ಆಯಾ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡುತ್ತಿದೆ.
ಪ್ರತಿ ವರ್ಷ ಶಾಲೆ ತರಗತಿಗಳು ಆರಂಭಗೊಂಡು ಮೂರ್ನಾಲ್ಕು ತಿಂಗಳು ಕಳೆದರೂ ಮಕ್ಕಳಿಗೆ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಲಭಿಸುತ್ತಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಶಾಲೆ ಪ್ರಾರಂಭಕ್ಕೂ ಮುನ್ನವೇ ಆಯಾ ವಲಯಗಳ ಮೂಲಕ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.

‘ಶಾಲೆ ಆರಂಭದ ಮೊದಲ ದಿನ ‘ಶಾಲಾ ಬಂಡಿ’ ಕಾರ್ಯಕ್ರಮ ಏರ್ಪಡಿಸಲು ಬಿಇಒಗಳು, ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ. ಆಯಾ ಗ್ರಾಮಗಳಲ್ಲಿ ಶಾಲಾ ಬಂಡಿ ಸಂಚರಿಸಲಿದ್ದು, ಮಕ್ಕಳಿಗೆ ಸಿಹಿ ಊಟ ನೀಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳಿಂದ ಮಕ್ಕಳಿಗೆ ಪಠ್ಯಪುಸ್ತಕ ಮತ್ತಿತರ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುವುದು. ಒಂದು ವಾರದಲ್ಲಿ ಸಮವಸ್ತ್ರಗಳೂ ಪೂರೈಕೆಯಾಗಲಿವೆ. ಅವುಗಳನ್ನೂ ಮಕ್ಕಳಿಗೆ ವಿತರಿಸಲಾಗುವುದು. ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಹಂತ ಹಂತವಾಗಿ ಪಠ್ಯಪುಸ್ತಕಗಳ ಸರಬರಾಜು ಆಗುತ್ತಿವೆ. ಶೀಘ್ರದಲ್ಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸುವ ವ್ಯವಸ್ಥೆ ಆಗಲಿದೆ’ ಎಂದು ಡಿಡಿಪಿಐ ಎಂ.ಜಿ. ದಾಸರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT