ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ನೂರು ವರ್ಷಗಳ ಬಳಿಕ ಗ್ರಾಮದೇವಿಯರ ಜಾತ್ರೆಗೆ ಚಾಲನೆ

Published 17 ನವೆಂಬರ್ 2023, 4:11 IST
Last Updated 17 ನವೆಂಬರ್ 2023, 4:11 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ಹಲಗತ್ತಿಯಲ್ಲಿ ನೂರು ವರ್ಷಗಳ ನಂತರ ಜರುಗುತ್ತಿರುವ ಗ್ರಾಮದೇವಿಯರ ಜಾತ್ರೆಗೆ ಗುರುವಾರ ಸಂಭ್ರಮದ ಚಾಲನೆ ಸಿಕ್ಕಿತು. ಸಿಂಗಾರಗೊಂಡಿರುವ ಗ್ರಾಮದೇವಿಯರ ಮೂರ್ತಿಗಳ ಮುಸುಕು ತೆರವುಗೊಳಿಸಿ, ವೀಕ್ಷಣೆಗೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು.

ಪಂಡಿತರು ಬೆಳಗ್ಗೆಯಿಂದಲೇ ಗ್ರಾಮದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥಗಳು ಈಡೇರಿದ್ದರಿಂದ ದೇವಿಯರ ಹರಕೆ ತೀರಿಸಲು ಮಹಿಳೆಯರು ಪೂರ್ಣಕುಂಭ ಹೊತ್ತು, ಮೆರವಣಿಗೆಯಲ್ಲಿ ಸಾಗಿದರು. ಭಂಡಾರದ ಓಕುಳಿಯಲ್ಲಿ ಮಿಂದೆದ್ದರು. ಡೊಳ್ಳುವಾದನ, ಹಲಗೆಗಳ ಮೇಳ ಜನರನ್ನು
ಸೆಳೆಯಿತು.

ಉಗ್ರರೂಪಿಣಿಯಾದ ಕಿಲಬನೂರ ಮತ್ತು ಹಲಗತ್ತಿ ಗ್ರಾಮಗಳ ದ್ಯಾಮವ್ವನ ಮೂರ್ತಿಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ‘ಉಧೋ ಉಧೋ...’  ಎಂಬ ಜೈಕಾರ ಮುಗಿಲು ಮುಟ್ಟಿತ್ತು.

ಶತಮಾನದ ನಂತರ ನಡೆಯುತ್ತಿರುವ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ. ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಭಕ್ತರು, ದೇವಿಯರ ದರ್ಶನ ಪಡೆದು ಭಕ್ತಿ ಮೆರೆಯುತ್ತಿದ್ದಾರೆ. ಸರ್ವಧರ್ಮೀಯರು ಜಾತ್ರೆಯಲ್ಲಿ ಭಾಗವಹಿಸಿ, ‘ಸಾಮರಸ್ಯ’ದ ಸಂದೇಶ ಸಾರುತ್ತಿದ್ದಾರೆ. ನ.17, 18ರಂದು ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

‘ಗಟ್ಟಿ ಗಡಿಗೆ’ ತರುವ ಸಂಪ್ರದಾಯ

ಗ್ರಾಮದೇವಿಯರ ಜಾತ್ರೆ ಅಂಗವಾಗಿ ಮೂರು ‘ಗಟ್ಟಿ ಗಡಿಗೆ’ ತರುವ ಸಂಪ್ರದಾಯವಿದೆ. ಗಟ್ಟಿ ಗಡಿಗೆ ಎಂದರೆ ಜಾತ್ರೆ ಆರಂಭವಾಗುವ ಮುನ್ನ, ಊರ ಗೌಡರು, ಹಲಬರು ಮತ್ತು ಪರಿಶಿಷ್ಟ ಸಮುದಾಯದವರ ಒಂದೊಂದು ಮನೆಯಿಂದ ಮಣ್ಣಿನ ಮಡಿಕೆ ತರುವುದು. ಅದರ ಮುಚ್ಚಳದಲ್ಲಿ ದೀಪ ಹಚ್ಚಿ, ಪೂಜೆ ಸಲ್ಲಿಸಲಾಗುತ್ತದೆ. ನಿರಂತರ 9 ದಿನಗಳವರೆಗೆ ಹಗಲು–ರಾತ್ರಿ ದೀಪ ಆರದಂತೆ ಎಚ್ಚರ ವಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT