ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಐದೇ ಎಕರೆಯಲ್ಲಿ ಹತ್ತು ಬೆಳೆ, ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ದಂಪತಿ

Published 29 ಮಾರ್ಚ್ 2024, 4:41 IST
Last Updated 29 ಮಾರ್ಚ್ 2024, 4:41 IST
ಅಕ್ಷರ ಗಾತ್ರ

ಬೆಳಗಾವಿ: ಕಬ್ಬು, ಕ್ಯಾಬೀಜ್, ಬೀನ್ಸ್, ಕೊತ್ತಂಬರಿ, ಮೆಂತ್ಯ, ಮೂಲಂಗಿ, ನವಲುಕೋಸು, ಮೆಣಸಿನಕಾಯಿ, ಬೆಂಡೆಕಾಯಿ, ಬದನೆಕಾಯಿ, ಪಪ್ಪಾಯ, ತೆಂಗು... ಇಷ್ಟೆಲ್ಲ ಏಕಕಾಲಕ್ಕೆ ಬೆಳೆಯಲು ಎಷ್ಟು ಜಮೀನು ಬೇಕು? ಕೇವಲ ಐದು ಎಕರೆ ಸಾಕು!

ತಾಲ್ಲೂಕಿನ‌ ದೇವಗಿರಿ ಗ್ರಾಮದ ಬಾಬು ಚೌಗುಲೆ ಹಗೂ ಕವಿತಾ ದಂಪತಿ ಇದನ್ನು ಸಾಧಿಸಿ ತೋರಿಸಿದ್ದಾರೆ. ಮಿಶ್ರ ಬೇಸಾಯದಲ್ಲಿಯೇ ರೈತರು ಲಾಭ ಮಾಡಿಕೊಳ್ಳಬಹುದು ಎಂಬುದಕ್ಕೆ ಈ ದಂಪತಿ ಸಾಕ್ಷಿ. ವರ್ಷಕ್ಕೆ ಕನಿಷ್ಠ ₹8 ಲಕ್ಷ ಆದಾಯ ಪಡೆಯುವುದು ಇವರ ಸಾಧನೆ.

ಬಹು ವರ್ಷಗಳಿಂದ ಕಬ್ಬು ಮಾತ್ರ ಬೆಳೆಯುತ್ತಿದ್ದ ಈ ದಂಪತಿ ಹಾಕಿದ ಬಂಡವಾಳಕ್ಕೆ ತಕ್ಕನಾಗಿ ಮಾತ್ರ ಫಲ ಪಡೆಯುತ್ತಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡಿದ ಬಳಿಕ ಮಿಶ್ರ ಬೇಸಾಯ ಆರಂಭಿಸಿದರು. ಮೂರು ಎಕರೆಯಲ್ಲಿ ಕಬ್ಬು– ಕ್ಯಾಬೀಜ್‌, ಉಳಿದ ಎರಡು ಎಕರೆಯಲ್ಲಿ ವಿವಿಧ ತರಕಾರಿಗಳನ್ನು ಬೆಳೆದರು. ಕಬ್ಬಿನ ಮಧ್ಯೆ ಹಾಕಿದ ಮಿಶ್ರ ಬೆಳೆ ಕೂಡ ಹುಲುಸಾಗಿ ಬೆಳೆದಿದೆ.

ಮಿಶ್ರ ಬೆಳೆಗಳು ಒಂದಕ್ಕೊಂದು ಕೀಟ ನಿವಾರಕ, ರೋಗ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ, ಇವರು ಯಾವುದೇ ಕ್ರಿಮಿನಾಶಕ ಉಪಯೋಗ ಮಾಡಿಲ್ಲ. ಬೆಳೆಗಳಿಗೆ ಆಗಾಗ ಸಾಯವಯ ಗೊಬ್ಬರ ಮಾತ್ರ ಹಾಕಿದ್ದಾರೆ. ತಮ್ಮ ಕುಟುಂಬಕ್ಕೂ ಕ್ರಿಮಿನಾಶಕ ರಹಿತವಾದ ಶುದ್ಧ ತರಕಾರಿ ಸಿಗುತ್ತಿದೆ. ಇವರ ತರಕಾರಿಗೆ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ.

ಒಂದೇ ಬೆಳೆಗೆ ಅಂಟಿಕೊಂಡು ಹಾನಿ ಅನುಭವಿಸುವ ರೈತರಿಗೆ ಈ ದಂಪತಿಯ ಪರಿವರ್ತನೆ ಉದಾಹರಣೆ ಆಗಿದೆ. ಬಾಬು ಚೌಗುಲೆ ಅವರು ಕಬ್ಬಿನ ಸಾಲುಗಳ ನಡುವಿನ ಜಾಗ ಬಳಸಿಕೊಂಡು ತರಕಾರಿ ಬೆಳೆದಿದ್ದಾರೆ. ಸಣ್ಣ ಕೃಷಿ ಹೊಂಡ ನಿರ್ಮಿಸಿದ್ದಾರೆ. ಬೋರ್‌ವೆಲ್ ಮತ್ತು ಬಾವಿ ಮೂಲಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಅವರ ಪತ್ನಿ ಕವಿತಾ ಬೆಳೆಗಳನ್ನು ಎಳೆಯ ಮಗುವಿನಂತೆ ಜೋಪಾನ ಮಾಡುತ್ತಿದ್ದಾರೆ. ಪಿಯುಸಿ ಮುಗಿಸಿರುವ ಪುತ್ರ ಲಖನ್ ಕೂಡ ಕೃಷಿಯತ್ತ ವಾಲಿದ್ದಾರೆ. ಈ ಮೂವರು ಸಾಲದೇ ಊರಿನ ಜನರಿಗೂ ಕೆಲಸ ಕೊಟ್ಟಿದ್ದಾರೆ.

ಹೈನುಗಾರಿಕೆಗೂ ಸೈ: ಕವಿತಾ ಅವರು ಹೊಲದ ಬದುವಿನಲ್ಲಿ ಪಪ್ಪಾಯಿ, ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ದನಗಳನ್ನು ಸಾಕಿ ಹೈನುಗಾರಿಕೆ ಕೂಡ ಮಾಡುತ್ತಿದ್ದಾರೆ. ಒಂದು ಪರಿಪೂರ್ಣ ಕೃಷಿ ಕುಟುಂಬ ಹೇಗೆ ಸ್ವಾವಲಂಬಿ ಆಗಬಹುದು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ.

ಮಿಶ್ರ ಬೆಳೆ ಮಾಡಿದರೆ ವರ್ಷದ 12 ತಿಂಗಳು ಕೆಲಸ ಇರುತ್ತದೆ. ಕೃಷಿಯಲ್ಲಿ ಲಾಭ ಇಲ್ಲ ಎನ್ನುವವರಿದ್ದಾರೆ. ಆದರೆ ಕಡಿಮೆ ಬಂಡವಾಳದಲ್ಲಿ ನಾವು ಹೆಚ್ಚು ಲಾಭ ಪಡೆದಿದ್ದೇವೆ.
–ಕವಿತಾ ಚೌಗುಲೆ, ರೈತ ಮಹಿಳೆ
ಇತ್ತೀಚಿನ ವರ್ಷಗಳಲ್ಲಿ ಮಿಶ್ರ ಕೃಷಿ ಶುರು ಮಾಡಿದ್ದೇನೆ. ಕಣ್ಣು ಕುಕ್ಕುವಂತೆ ಬೆಳೆಯುತ್ತಿದೆ. ಹೊಲದಲ್ಲೇ ಮನೆ ಹಾಕಿಸಿಕೊಂಡು ನೆಮ್ಮದಿ ಜೀವನ ನಡೆಸಿದ್ದೇವೆ.
–ಬಾಬು ಚೌಗಲೆ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT