ಬುಧವಾರ, ಜೂನ್ 23, 2021
23 °C
ಚುನಾವಣೆ 16ಕ್ಕೆ

ಎಪಿಎಂಸಿ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿಗರ ಪಟ್ಟು

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತಮ್ಮ ಪಕ್ಷದ ಬೆಂಬಲಿತರ ಸಂಖ್ಯೆಯೇ ಅಧಿಕವಾಗಿದ್ದು, ಅಧ್ಯಕ್ಷ– ಉಪಾಧ್ಯಕ್ಷ ಹುದ್ದೆಗಳನ್ನು ತಮ್ಮವರಿಗೆ ನೀಡಬೇಕೆಂದು ಕಾಂಗ್ರೆಸ್‌ ಸದಸ್ಯರು ಹಠ ಹಿಡಿದಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಸೋಮವಾರ ನಡೆಯಲಿರುವ ಚುನಾವಣೆ ಕುತೂಹಲ ಕೆರಳಿಸಿದೆ.

ಎಪಿಎಂಸಿಯಲ್ಲಿ 14 ಜನರು ಆಯ್ಕೆಗೊಂಡ ಸದಸ್ಯರಿದ್ದಾರೆ. ಇವರ ಪೈಕಿ 10 ಜನರು ಕಾಂಗ್ರೆಸ್‌ ಬೆಂಬಲಿತರಾಗಿದ್ದಾರೆ. ಇನ್ನುಳಿದಂತೆ ಮೂರು ಜನರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಾಗೂ ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಜಾರಕಿಹೊಳಿ ಸಹೋದರರ ಗುಂಪು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಗುಂಪುಗಳಾಗಿದ್ದು. ಇವೆರಡೂ ಗುಂಪುಗಳ ನಡುವಿನ ಭಿನ್ನಾಭಿಪ್ರಾಯದ ಲಾಭ ಪಡೆಯಲು ಎಂಇಎಸ್‌ ಸದಸ್ಯರು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಆರೋಪ.

‘ಇಬ್ಬರ ಜಗಳ, ಮೂರನೇಯವನಿಗೆ ಲಾಭ’ ಎನ್ನುವಂತಾಗಬಾರದು. ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷದ ಸದಸ್ಯರಿಗೇ ಎರಡೂ ಸ್ಥಾನಗಳು ಸಿಗುವಂತಾಗಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ ಬಣದ ಸದಸ್ಯರು ಪಟ್ಟು ಹಿಡಿದಿದ್ದಾರೆ. 10 ಜನ ಸದಸ್ಯರಲ್ಲಿ 9 ಜನರು ಈ ಬಣದ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕುತೂಹಲ ಕೆರಳಿಸಿದ ಭೇಟಿ;

ಲಕ್ಷ್ಮಿ ಬಣದ ಜೊತೆ ಗುರುತಿಸಿಕೊಂಡಿರುವ, ಎಪಿಎಂಸಿ ಸದಸ್ಯ ಯುವರಾಜ ಕದಂ ಅವರು ಶನಿವಾರ ಮಧ್ಯಾಹ್ನ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ. ಕದಂ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಲಾಗುತ್ತಿದ್ದು, ಸಚಿವರ ಸಹಕಾರ ಕೋರಲು ಬಂದಿದ್ದರು ಎಂದು ಹೇಳಲಾಗುತ್ತಿದೆ.

ಯಾವುದೇ ಸ್ಪಷ್ಟ ಭರವಸೆ ನೀಡದ ರಮೇಶ ಜಾರಕಿಹೊಳಿ, ಎಪಿಎಂಸಿಯ ಇತರ ಸದಸ್ಯರ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ಹೇಳಿಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ಬಾರಿ ಎಂಇಎಸ್‌:

ಕಳೆದ ಬಾರಿ ಎಂಇಎಸ್‌ ಬೆಂಬಲಿತ ನಿಂಗಪ್ಪ ವಿಠ್ಠಲ ಜಾಧವ ಅವರು ಎಪಿಎಂಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈ ಸಲ ಅವರು ಪುನಃ ಪ್ರಯತ್ನ ಮಾಡುತ್ತಿದ್ದು, ಶಾಸಕ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂಕ್ತ ಅಭ್ಯರ್ಥಿಯ ಆಯ್ಕೆ:

‘ಎಪಿಎಂಸಿ ಚುನಾವಣೆಯು ಪಕ್ಷದ ಬ್ಯಾನರ್‌ ಅಡಿ ನಡೆಯುವುದಿಲ್ಲ. ತಮ್ಮ ಸ್ವಂತ ವರ್ಚಸ್ಸಿನ ಆಧಾರದ ಮೇಲೆ ಮುಖಂಡರು ಆಯ್ಕೆಯಾಗಿರುತ್ತಾರೆ. ಎಲ್ಲ ಸದಸ್ಯರ ಜೊತೆ ಚರ್ಚಿಸಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಅಭ್ಯರ್ಥಿ ಉತ್ತಮವಾಗಿರಬೇಕಷ್ಟೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಸತೀಶ ಜೊತೆ ಚರ್ಚಿಸುವೆ:

‘ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಭಾನುವಾರ ಶಾಸಕ ಸತೀಶ ಜಾರಕಿಹೊಳಿ ಅವರ ಜೊತೆ ಸಭೆ ನಿಗದಿಯಾಗಿದೆ. ಎಪಿಎಂಸಿಯ ಸದಸ್ಯರ ಪೈಕಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಪಕ್ಷದ ಕಾರ್ಯಕರ್ತರು ಈ ಸ್ಥಾನಗಳ ಆಕಾಂಕ್ಷಿಯಾಗಿದ್ದಾರೆ. ಇದನ್ನು ಅವರ ಗಮನಕ್ಕೆ ತರುತ್ತೇನೆ. ಎಲ್ಲರ ಜೊತೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಲಾಗುವುದು. ನನಗೆ ಪಕ್ಷ ಮುಖ್ಯ, ಪಕ್ಷ ಉಳಿಯಬೇಕು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.

ಶಾಸಕ ಸತೀಶ ಜಾರಕಿಹೊಳಿ ದೂರವಾಣಿ ಕರೆ ಸ್ವೀಕರಿಸಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು